(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಜೂ. 26: ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲಿರುವಂತೆ ಸುವರ್ಣ ಸಾಂಸ್ಕøತಿಕ ಸಮುಚ್ಚಯ ಭವನ ನಿರ್ಮಾಣದ ಯೋಜನೆ ರೂಪಿಸಿ ಇದೀಗ ಬಹುತೇಕ ಹತ್ತು ವರ್ಷಗಳೇ ಪೂರ್ಣಗೊಂಡಿವೆ. ಸುಧೀರ್ಘ ಅವಧಿಯ ಬಳಿಕವೂ ಈ ಕಾಮಗಾರಿ ಇನ್ನೂ ಪ್ರಕ್ರಿಯೆ ಹಂತದಲ್ಲೇ ಉಳಿದಿದ್ದು, ಇದೀಗವಷ್ಟೆ ನಿಧಾನಗತಿಯ ಚಾಲನೆ ಕಾಣುತ್ತಿದೆ.

2005-06ನೇ ಸಾಲಿನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಮಡಿಕೇರಿಯಲ್ಲಿ ಸುವರ್ಣ ಸಾಂಸ್ಕøತಿಕ ಸಮುಚ್ಚಯ ನಿರ್ಮಾಣಕ್ಕೆ ಯೋಜನೆ ರೂಪಿಸಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ರೂ. 1.07 ಕೋಟಿ ಅನುದಾನ ಒದಗಿಸಲಾಗಿತ್ತು. ಆದರೆ ನಗರದಲ್ಲಿ ಈ ಭವನ ನಿರ್ಮಾಣಕ್ಕೆ ಆರಂಭಿಕ ಸಮಸ್ಯೆಯಾಗಿದ್ದು, ಜಾಗದ ವ್ಯವಸ್ಥೆ, ಜಾಗದ ಗೊಂದಲದಿಂದಾಗಿ ಅನುದಾನ ಬಂದರೂ ಕಾಮಗಾರಿಗೆ ಅಡ್ಡಿಯಾಗಿತ್ತು. ಎರಡು ಕಡೆಗಳಲ್ಲಿ ಕಾಮಗಾರಿಗೆ ಭೂಮಿ ಪೂಜೆ ನಡೆಯಿತಾದರೂ, ಮತ್ತೆ ಸಮಸ್ಯೆ ಎದುರಾಗಿ ಜಾಗದ ಗೊಂದಲ ಮುಗಿಯಲೇ ಇಲ್ಲ. ಆರಂಭದಲ್ಲಿ ಜೂನಿಯರ್ ಕಾಲೇಜು ಮೈದಾನದ ಒತ್ತಿನಲ್ಲಿ (ಈಗಿನ ಒಳಾಂಗಣ ಕ್ರೀಡಾಂಗಣ) ಹಾಗೂ ನಂತರ ಆಸ್ಟ್ರೋಟರ್ಫ್ ಮೈದಾನದ ಹಿಂಬದಿಯ ಸ್ಥಳ ಗುರುತಿಸ ಲಾಗಿತ್ತಾದರೂ, ಅಂತಿಮವಾಗಲಿಲ್ಲ.

ಬಳಿಕ ಸುದರ್ಶನ ವೃತ್ತದ ಬಳಿ ಈ ಹಿಂದೆ ಸೌದೆ ಡಿಪೋ ಆಗಿದ್ದ ಸ್ಥಳವನ್ನು ಸಮುಚ್ಚಯ ಭವನಕ್ಕೆ ಗುರುತಿಸಿ ಇದನ್ನು ಅಂತಿಮಗೊಳಿಸ ಲಾಯಿತು. ಇದಕ್ಕಾಗಿ 80 ಸೆಂಟ್ ಜಾಗ ನಿಗದಿಪಡಿಸಲಾಗಿದ್ದು, ಈ ಜಾಗ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಹೆಸರಿಗೆ ಇದೀಗ ಅಧಿಕೃತವಾಗಿ ಬಂದಿದೆ.

ಈ ಅವಧಿಯಲ್ಲಿ ಯೋಜನೆಯ ವೆಚ್ಚ ಹೆಚ್ಚಳವಾಗಲಿದ್ದ ಹಿನ್ನೆಲೆಯಲ್ಲಿ ಪರಿಷ್ಕøತವಾದ ಪ್ರಸ್ತಾವನೆ ತಯಾರಿಸಿ ರೂ. 4 ಕೋಟಿಯ ಯೋಜನೆಗೆ ಮಂಜೂರಾತಿಗೆ ಸರಕಾರಕ್ಕೆ ಕಳುಹಿಸಲಾಗಿತ್ತು. ರೂ. 4 ಕೋಟಿಯ ಯೋಜನೆಗೆ 2014ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಆಡಳಿತಾತ್ಮಕ ಅನುಮೋದನೆ ಯಾದರೂ, ಕಾಮಗಾರಿ ಮತ್ತಷ್ಟು ವಿಳಂಬವಾಗಿದೆ.

ಕೆಲವು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರು ಸೌದೆ ಡಿಪೋ ಸ್ಥಳದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು, ಬಳಿಕ ಲೋಕೋಪಯೋಗಿ ಇಲಾಖೆಯ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಬೆಂಗಳೂರಿನ ಕೆ.ಬಿ.ಆರ್. ಸಂಸ್ಥೆ ಗುತ್ತಿಗೆ ಪಡೆದಿದ್ದು, ಕಾಮಗಾರಿ ಇನ್ನಷ್ಟೆ ಆರಂಭಗೊಳ್ಳ ಬೇಕಿದೆ. ಕಟ್ಟಡದ ರೂಪು-ರೇಷೆಗಳ ವಿನ್ಯಾಸ ಲಭ್ಯವಿರುವ ಜಾಗ ಕಡಿಮೆಯಾಗಿದ್ದರಿಂದ ಸ್ವಲ್ಪ ಬದಲಾವಣೆಯಾಗಬೇಕಿದ್ದರಿಂದ ಟೆಂಡರ್ ಆದರೂ ಇನ್ನಷ್ಟು ತಡವಾಗಬೇಕಾಯಿತು. ಇದೀಗ ಕೆಲವು ದಿನದ ಹಿಂದೆಯಷ್ಟೆ ವಿನ್ಯಾಸದಲ್ಲಿ ಕೆಲ ಬದಲಾವಣೆಯೊಂದಿಗೆ ರಾಜ್ಯದ ಮುಖ್ಯ ವಾಸ್ತು ಶಿಲ್ಪಿ (ಚೀಫ್ ಆರ್ಕಿಟೆಕ್ಟ್) ಮೂಲಕ ಒಪ್ಪಿಗೆ ದೊರೆತಿರುವದಾಗಿ ತಿಳಿದು ಬಂದಿದೆ.

ಗುತ್ತಿಗೆ ಪಡೆದಿರುವ ಸಂಸ್ಥೆಗೆ ಲೋಕೋಪಯೋಗಿ ಇಲಾಖೆ ಅಂತಿಮ ವಿನ್ಯಾಸ ನೀಡಿದ ನಂತರವಷ್ಟೆ ಕಾಮಗಾರಿ ಆರಂಭಗೊಳ್ಳಬೇಕಿದೆ. ಕಾಮಗಾರಿ ಪೂರ್ಣಗೊಳಿಸಲು 12 ತಿಂಗಳ ಕಾಲಾವಕಾಶ ನೀಡಲಾಗಿದೆ. ಸದ್ಯದ ಮಟ್ಟಿಗೆ ಮಣ್ಣು ಕೆಲಸ ಮಾತ್ರ ನಡೆದಿದ್ದು, ಪುಟ್ಟ ಶೆಡ್ ನಿರ್ಮಾಣಗೊಂಡಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮುಖ್ಯ ಕಚೇರಿ ಗ್ರಂಥಾಲಯದೊಂದಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧೀನದಲ್ಲಿ ಬರುವ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಸಾಹಿತ್ಯ ಅಕಾಡೆಮಿಯ ಕಚೇರಿಗಳು ಹಾಗೂ ಸುಸಜ್ಜಿತವಾದ ಸಭಾಂಗಣ ಈ ಕಟ್ಟಡದಲ್ಲಿ ತಲೆ ಎತ್ತಲಿದೆ.