ಶ್ರೀಮಂಗಲ, ಅ. 1: ವಾಸ್ತವಾಂಶವನ್ನು ಮರೆಮಾಚುತ್ತಲೇ ಬಂದ ಜಿಲ್ಲಾಡಳಿತ ಹಾಗೂ ಕಾಫಿ ಮಂಡಳಿ ಶೇ. 50 ಕ್ಕಿಂತ ಹೆಚ್ಚು ಕಾಫಿ ಬೆಳೆ ಪ್ರಕೃತಿ ವಿಕೋಪದಿಂದ ನಷ್ಟವಾಗಿದ್ದರೆ ಆ ಬೆಳೆಗೆ ಪರಿಹಾರ ಒದಗಿಸಲು ನಿಯಮವಿದೆ. ಆದರೆ ಜಿಲ್ಲಾಡಳಿತ-ಕಾಫಿ ಮಂಡಳಿ ಬೆಳೆಗಾರರಲ್ಲಿ ವಾಸ್ತವಾಂಶವನ್ನು ಮರೆಮಾಚಿ ಸರಕಾರಕ್ಕೆ ವರದಿ ಸಲ್ಲಿಸುತ್ತಲೇ ಬರುತಿತ್ತು. ಶೇ. 50 ಕ್ಕಿಂತ ಕಡಿಮೆ ಬೆಳೆ ನಷ್ಟವಾಗಿದೆ ಎಂದು ಸರಕಾರಕ್ಕೆ ಹಲವು ವರ್ಷದಿಂದ ತೋಟಗಳಿಗೆ ಭೇಟಿ ನೀಡದೇ ಕಚೇರಿಯಲ್ಲೇ ಕುಳಿತು ಅಧಿಕಾರಿಗಳು ಸಮೀಕ್ಷೆಯ ವರದಿ ಸಲ್ಲಿಸುತ್ತಿದ್ದುದಾಗಿ ಶ್ರೀಮಂಗಲದಲ್ಲಿ ನಡೆದ ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಂಕರು ನಾಚಪ್ಪ ಅವರು ಆರೋಪಿಸಿದರು.

2013ರಲ್ಲಿ ಇದಕ್ಕೆ ಐತಿಹಾಸಿಕ ಬದಲಾವಣೆಯನ್ನು ತರಲಾಯಿತು. ಮಳೆ ಹಾನಿ ಅಧ್ಯಯನಕ್ಕಾಗಿ 2013ರಲ್ಲಿ ರಾಜ್ಯಕ್ಕೆ ಆಗಮಿಸಿದ ಕೇಂದ್ರ ಪ್ರಕೃತಿ ವಿಕೋಪ ತಂಡ ರಾಜ್ಯದ ಇತರೆಡೆ ಸಮೀಕ್ಷೆ ಮಾಡಿ, ಕೊಡಗು ಜಿಲ್ಲೆಗೆ ಆಗಮಿಸದೆ ವಾಪಾಸು ದೆಹಲಿಗೆ ತೆರಳುವ ತಯಾರಿಯಲ್ಲಿತ್ತು. ಈ ಸಂದರ್ಭ ಜಿಲ್ಲಾ ಬೆಳೆಗಾರರ ಒಕ್ಕೂಟದ ಬೇಡಿಕೆಯಂತೆ ಆಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬಿ.ಟಿ. ಪ್ರದೀಪ್ ಹಾಗೂ ಸಂಸದರಾಗಿದ್ದ ಅಡಗೂರು ವಿಶ್ವನಾಥ್ ಅವರು ರಾಜ್ಯ-ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಕೊಡಗು ಜಿಲ್ಲೆಗೆ ಕೇಂದ್ರ ಪ್ರಕೃತಿ ವಿಕೋಪ ಅಧ್ಯಯನ ತಂಡವನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದರು. ಈ ಸಂದರ್ಭ ಅಡಗೂರು ವಿಶ್ವನಾಥ್, ಬಿ.ಟಿ. ಪ್ರದೀಪ್ ಕಾಫಿ ಮಂಡಳಿ ಉಪಾಧ್ಯಕ್ಷರುಗಳಾದ ಡಾ. ಸಣ್ಣುವಂಡ ಕಾವೇರಪ್ಪ, ಆದೇಂಗಡ ತಾರಾ ಅಯ್ಯಮ್ಮ ಕಾಫಿ ನಷ್ಟದ ಸಮಸ್ಯೆ ಬಗ್ಗೆ ಬೆಳೆಗಾರರ ಒಕ್ಕೂಟದೊಂದಿಗೆ ತಂಡಕ್ಕೆ ಮನವರಿಕೆ ಮಾಡಿದ್ದರು. ಶೇ. 50 ಕ್ಕಿಂತ ಹೆಚ್ಚು ನಷ್ಟಗೊಂಡ ಬೆಳೆಗಾರರ ಅರ್ಜಿಗಳಿಗೆ ಪರಿಹಾರ ನೀಡುವ ಅವಕಾಶವಿರುವ ಬಗ್ಗೆ ಗಮನ ಸೆಳೆಯಲಾಯಿತು. ಈ ಸಂದರ್ಭ ತಂಡ ಕಾಫಿ ತೋಟಗಳಿಗೂ ಸಹ ಭೇಟಿ ನೀಡಿತ್ತು. ಕಾಫಿ ಮಂಡಳಿ-ಕಂದಾಯ ಇಲಾಖೆ-ತೋಟಗಾರಿಕಾ ಇಲಾಖೆ ಜಂಟಿಯಾಗಿ ಸಮೀಕ್ಷೆ 2013ರಲ್ಲಿ ಬೆಳೆಗಾರರ ಒಕ್ಕೂಟದೊಂದಿಗೆ ನಡೆಸಿದ ಹಿನ್ನೆಲೆ ಜಿಲ್ಲೆಯ 72 ಗ್ರಾಮಗಳನ್ನು ಶೇ. 50 ಕ್ಕಿಂತ ಹೆಚ್ಚು ಕಾಫಿ ಫಸಲು ನಷ್ಟಗೊಂಡ ಗ್ರಾಮಗಳೆಂದು ಗುರುತಿಸಲಾಯಿತು. 2013-14ರ ಫಸಲು ನಷ್ಟಕ್ಕೆ ಮೊದಲ ಬಾರಿಗೆ ಸುಮಾರು ರೂ. 4 ಕೋಟಿಯಷ್ಟು ಪರಿಹಾರವನ್ನು ಹೆಕ್ಟೇರ್ ಒಂದಕ್ಕೆ ರೂ. 6 ಸಾವಿರದಂತೆ ಗರಿಷ್ಠ 2 ಹೆಕ್ಟೇರ್‍ವರೆಗೆ ಪರಿಹಾರ ನೀಡುವ ಮೂಲಕ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾಫಿ ನಷ್ಟಕ್ಕೆ ಪರಿಹಾರ ಒದಗಿಸಲು ಚಾಲನೆ ದೊರೆಯಿತು. 2014-15ನೇ ಸಾಲಿನಲ್ಲಿ ಜಿಲ್ಲೆಯ 123 ಗ್ರಾಮಗಳಲ್ಲಿ ಕಾಫಿ ನಷ್ಟಕ್ಕೆ ಒಳಗಾಗಿದ್ದು, ಕಾಫಿಗೆ ರೂ. 14 ಕೋಟಿ ಹಾಗೂ ತೋಟಗಾರಿಕಾ, ಭತ್ತದ ಬೆಳೆಗಾಗಿ ರೂ. 8 ಕೋಟಿ ಒಟ್ಟು ರೂ. 22 ಕೋಟಿ ಪರಿಹಾರ ನೀಡಬೇಕಾಗಿದ್ದರೂ ಸರಕಾರ ಹಣ ಬಿಡುಗಡೆ ಮಾಡಿಲ್ಲ. ಹಿಂದಿನ ಸಾಲಿನ ಬೆಳೆ ನಷ್ಟ ಪರಿಹಾರ ನೀಡಲು ಬಾಕಿ ಉಳಿಸಿಕೊಂಡಿರುವ ಸರಕಾರ, ಮತ್ತೆ ಪರಿಹಾರ ನೀಡಬೇಕೆಂದು ನಂತರದ 2 ವರ್ಷಗಳಲ್ಲಿ ಬೆಳೆ ನಷ್ಟದ ಸಮೀಕ್ಷೆಯನ್ನೇ ಕೈಗೊಂಡಿಲ್ಲ ಎಂದು ಶಂಕರು ನಾಚಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಇದುವರೆಗೆ ಜಿಲ್ಲೆಯ ಬೇರೆ ಕಡೆ ಮಳೆ ಕೊರತೆ ಕಾಣಿಸಿಕೊಳ್ಳುವದು ಸಾಮಾನ್ಯವಾಗಿದ್ದರೂ ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗುತ್ತಿತ್ತು. ಆದರೆ ಜಿಲ್ಲೆಯ ಮೂಲಕ ಕೇರಳಕ್ಕೆ ಹೈಟೆನ್ಷನ್ ವಿದ್ಯುತ್ ಮಾರ್ಗ ಯೋಜನೆ ಅನುಷ್ಟಾನ ಸಂದರ್ಭ ಲಕ್ಷಾಂತರ ಮರಗಳು ಹನನವಾಯಿತು. ಈ ಸಂದರ್ಭ ರೈತರು ಎಷ್ಟೇ ಹೋರಾಟ ಮಾಡಿದರೂ ಜನಪ್ರತಿನಿಧಿಗಳು ಮೌನವಹಿಸಿದ್ದರು. ಇದರಿಂದ ಜಿಲ್ಲೆಯಲ್ಲಿ ಹುಟ್ಟುವ ಕಾವೇರಿ, ಲಕ್ಷ್ಮಣ ತೀರ್ಥ ನದಿ ಪಾತ್ರಗಳಲ್ಲಿ ತೀವ್ರ ಮಳೆಯ ಕೊರತೆ ಕಾಣಿಸಿಕೊಂಡಿದೆ. ಹೈಟೆನ್ಷನ್ ಯೋಜನೆ ಸಂದರ್ಭ ಹೋರಾಟ ಮಾಡಿದ ರೈತರು ಹಾಗೂ ಸಂಘ-ಸಂಸ್ಥೆಯ ಪ್ರಮುಖರ ಮೇಲೆ 5-6 ಸೆಕ್ಷನ್ ಹಾಕಿ ಕೇಸು ಜಡಿಯಲಾಯಿತು. ರೈತರನ್ನು ಬಂಧಿಸಲಾಯಿತು. ಈ ಸಂದರ್ಭ ಮೌನವಹಿಸಿದ್ದ ಜನಪ್ರತಿನಿಧಿಗಳು ಇದೀಗ ಮಳೆಗಾಗಿ ತಲಕಾವೇರಿಯಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಟೀಕಿಸಿದರು. ಕೊಡಗು ಜಿಲ್ಲೆಯ ಕೃಷಿ ಹಾಗೂ ತೋಟಗಾರಿಕೆ, ಕಾಫಿ ತೋಟಗಳನ್ನು ನಷ್ಟವೆಂದು ಅನ್ಯ ಉದ್ದೇಶಕ್ಕೆ ಪರಿವರ್ತನೆಗೆ ಸರಕಾರದ ರೈತ ವಿರೋಧಿ ನೀತಿಯೇ ಕಾರಣ. ಪರಿಸರ ಸ್ನೇಹಿಯಾದ ಕಾಫಿ ತೋಟ, ಭತ್ತದ ಗದ್ದೆಗಳನ್ನು ರಕ್ಷಿಸಿಕೊಂಡು ಜಿಲ್ಲೆಯ ಪರಿಸರವನ್ನು ಕಾಪಾಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ನೀರಿನ ಸಮಸ್ಯೆ ಉಲ್ಭಣಗೊಳ್ಳಲಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ, ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಶ್ರೀಮಂಗಲ ಹೋಬಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ, ಪದಾಧಿಕಾರಿಗಳಾದ ಅಯ್ಯಮಾಡ ಉದಯ, ಐಪುಮಾಡ ಶಂಭು ದೇವಯ್ಯ ಮತ್ತಿತರರು ಪಾಲ್ಗೊಂಡಿದ್ದರು.