ಮಡಿಕೇರಿ, ಡಿ. 15: ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆಯೊಂದಿಗೆ ಎಲ್ಲಾ ಆಗು ಹೋಗುಗಳನ್ನು ನಿಯಂತ್ರಿಸಲು ಹೊಸತನದ ‘‘ಕಾರ್ಯಾಚರಣೆ’’ ಕಾರ್ಯರೂಪಕ್ಕೆ ಬರುತ್ತಿದೆ. ಕೊಡಗು ಜಿಲ್ಲೆಯಲ್ಲಿ ಈ ತನಕ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಮಾತ್ರ ಟ್ರಾಫಿಕ್ ಪೊಲೀಸ್ ಸ್ಟೇಷನ್ ಕಾರ್ಯನಿರ್ವಹಿಸುತಿತ್ತು.ಇದೀಗ ಜಿಲ್ಲೆಯ ಗಡಿಭಾಗವಾದ ಕುಶಾಲನಗರದಲ್ಲಿ ಮತ್ತೊಂದು ಟ್ರಾಫಿಕ್ ಸ್ಟೇಷನ್ ತೆರೆಯಲಾಗಿದೆ. ಈ ಹಿಂದೆ ರೂಪಿತವಾಗಿದ್ದ ಹಲವು ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿದೆ. ಇದರಂತೆ ಮಡಿಕೇರಿ ನಗರದ ಕೋಟೆಯ ಎದುರು ಭಾಗದಲ್ಲಿ ಈ ತನಕ ಇದ್ದ ಟ್ರಾಫಿಕ್ ಠಾಣೆ ನೂತನ ಕಟ್ಟಡಕ್ಕೆ ವರ್ಗಾವಣೆಯಾಗುತ್ತಿದೆ. ಕಿಷ್ಕಿಂದೆಯ ಪರಿಸ್ಥಿತಿಯ ನಡುವೆ ಕಾರ್ಯನಿರ್ವಹಿಸುತ್ತಿದ್ದ ನಗರ ಸಂಚಾರಿ ಠಾಣೆಗೆ ನೂತನ ಕಟ್ಟಡ ಒದಗಿಸಲಾಗಿದೆ. ಮಡಿಕೇರಿ ಉಪವಿಭಾಗದ ಡಿವೈಎಸ್‍ಪಿ ಕಚೇರಿ, ಗ್ರಾಮಾಂತರ ಪೊಲೀಸ್ ಠಾಣೆ ಇರುವ ಆವರಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು, ಹೊಸ ಕಟ್ಟಡಕ್ಕೆ ಸಂಚಾರಿ ಠಾಣೆ ಸ್ಥಳಾಂತರಗೊಳ್ಳಲಿದೆ. ಇದರೊಂದಿಗೆ ಜಿಲ್ಲೆಯ ಗಡಿ ಭಾಗವಾದ ಕುಶಾಲನಗರಕ್ಕೆ ಈ ಹಿಂದೆ ಮಂಜೂರಾಗಿದ್ದ ಜಿಲ್ಲೆಯ ಎರಡನೆಯ ಸಂಚಾರಿ ಠಾಣೆಯೂ ಕಾರ್ಯಾರಂಭಗೊಂಡಿದೆ.
ಮಡಿಕೇರಿ ನಗರದೊಳಗಿದ್ದ ಸಂಚಾರಿ ಠಾಣೆ ನಗರದಿಂದ ಅನತಿ ದೂರದಲ್ಲಿರುವ ಗ್ರಾಮಾಂತರ ಠಾಣೆಯ ಆವರಣಕ್ಕೆ ಸ್ಥಳಾಂತರವಾಗು ತ್ತಿದ್ದು, ಈ ತನಕ ಇದ್ದ ಸಂಚಾರಿ ಠಾಣೆ ಜಿಲ್ಲೆಯ ಪ್ರಪ್ರಥಮ ಮಹಿಳಾ ಪೊಲೀಸ್ ಠಾಣೆಯಾಗಿ ಆರಂಭಗೊಳ್ಳಲಿದೆ. ಹೊಸ ಕಟ್ಟಡದಲ್ಲಿ ಡಿವೈಎಸ್‍ಪಿ ಕಚೇರಿ ಹಾಗೂ ಸಂಚಾರಿ ಠಾಣೆ ಕಾರ್ಯಾಚರಿಸಲಿದೆ. ನಿನ್ನೆ ಗಣಪತಿ ಪೂಜೆಯೊಂದಿಗೆ ಠಾಣೆ ಸ್ಥಳಾಂತರದ ಮುಹೂರ್ತ ಆರಂಭಗೊಂಡಿದೆ. ಜಿಲ್ಲಾ ಎಸ್‍ಪಿ ರಾಜೇಂದ್ರ ಪ್ರಸಾದ್ ರಜೆಯಲ್ಲಿದ್ದು, ಚಾಮರಾಜನಗರದ ಎಡಿಷನಲ್ ಎಸ್‍ಪಿ ಮುತ್ತುರಾಜ್, ಮಡಿಕೇರಿ ಡಿವೈಎಸ್‍ಪಿ ಛಬ್ಬಿ, ನಗರ ವೃತ್ತ ನಿರೀಕ್ಷಕ ಐ.ಪಿ. ಮೇದಪ್ಪ ಮತ್ತಿತರ ಅಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸಂಚಾರಿ ಠಾಣೆಯಲ್ಲಿದ್ದ ಪೀಠೋಪಕರಣಗಳು, ದಾಖಲೆಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಇನ್ನೆರಡು ದಿನಗಳ ಬಳಿಕ ಮಡಿಕೇರಿ ನಗರ ಸಂಚಾರಿ ಪೊಲೀಸ್ ಠಾಣೆ ಹೊಸ ಕಟ್ಟಡದಲ್ಲೇ ಕಾರ್ಯನಿರ್ವಹಿಸಲಿದೆ.
ಕುಶಾಲನಗರಕ್ಕೆ ಮಂಜೂರಾಗಿದ್ದ ಜಿಲ್ಲೆಯ ಎರಡನೆಯ ಸಂಚಾರಿ ಠಾಣೆಯೂ ನಿನ್ನೆಯಿಂದ ಆರಂಭಗೊಂಡಿದೆ.
(ಮೊದಲ ಪುಟದಿಂದ) ಸದ್ಯದ ಮಟ್ಟಿಗೆ ಕುಶಾಲನಗರದ ನೂತನ ಸಂಚಾರಿ ಠಾಣೆಯ ಜವಾಬ್ದಾರಿಯನ್ನು ಈಗಿನ ಅಲ್ಲಿನ ಎಸ್‍ಐ ನಿರ್ವಹಿಸಲಿದ್ದಾರೆ. ಹೊಸ ಠಾಣೆಗೆ ನೂತನ ಎಸ್‍ಐ ನೇಮಕವಾಗಬೇಕಿದೆ. ಸದ್ಯದ ಮಟ್ಟಿಗೆ ಇಬ್ಬರು ಎಎಸ್‍ಐ, 7ಜನ ಹೆಚ್‍ಸಿ ಹಾಗೂ 9 ಮಂದಿ ಕಾನ್ಸ್‍ಟೇಬಲ್‍ಗಳನ್ನು ನಿಯೋಜಿಸಲಾಗಿದೆ.
ಮಹಿಳಾ ಪೊಲೀಸ್ ಠಾಣೆ
ಸರಕಾರದ ತೀರ್ಮಾನದಂತೆ ಪ್ರತಿ ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆಯನ್ನು ಮಂಜೂರು ಮಾಡಲಾಗಿದೆ. ಇದರಂತೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹೊಸದಾಗಿ ಮಹಿಳಾ ಪೊಲೀಸ್ ಠಾಣೆ ಆರಂಭಗೊಳ್ಳುತ್ತಿದೆ.
ನಗರ ಸಂಚಾರಿ ಠಾಣೆಯಿದ್ದ ಕಟ್ಟಡದಲ್ಲಿ ಮಹಿಳಾ ಪೊಲೀಸ್ ಠಾಣೆ ಆರಂಭವಾಗಲಿದೆ. ಒಂದೆರಡು ದಿನದಲ್ಲಿ ಈ ಠಾಣೆ ಕಾರ್ಯರೂಪಕ್ಕೆ ಬರಲಿದೆ. ಓರ್ವರು ಮಹಿಳಾ ವೃತ್ತ ನಿರೀಕ್ಷಕರು, ಓರ್ವ ಎಸ್‍ಐ ಸೇರಿದಂತೆ ಇಬ್ಬರು ಎಎಸ್‍ಐ, 10 ಹೆಡ್‍ಕಾನ್ಸ್‍ಟೇಬಲ್ ಹಾಗೂ 30 ಮಹಿಳಾ ಕಾನ್ಸ್‍ಟೇಬಲ್ ಹುದ್ದೆ , ಮಹಿಳಾ ಪೊಲೀಸ್ ಠಾಣೆಗೆ ಮಂಜೂರಾತಿಯಾಗಿದೆ. ಸಧ್ಯದ ಮಟ್ಟಿಗೆ ಈ ಸಿಬ್ಬಂದಿ, ಅಧಿಕಾರಿಗಳ ನಿಯೋಜನೆ ತನಕ ನಗರ ವೃತ್ತ ನಿರೀಕ್ಷಕರು ಈ ಠಾಣೆಯ ಜವಾಬ್ದಾರಿ ಹೊಂದಿರುತ್ತಾರೆಂದು ಪೊಲೀಸ್ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.