ಮಡಿಕೇರಿ ಜೂ.3 : ವೇತನ ತಾರತಮ್ಯ ನಿವಾರಣೆಗಾಗಿ ಒತ್ತಾಯಿಸಿ ತಾ. 4 ರಂದು ರಾಜ್ಯವ್ಯಾಪಿ ಪೊಲೀಸರು ನಡೆಸುತ್ತಿರುವ ಪ್ರತಿಭಟನೆಗೆ ಸೋಮವಾರಪೇಟೆ ತಾ.ಪಂ ಸದಸ್ಯ ಹಾಗೂ ಚೆಟ್ಟಳ್ಳಿ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಬೆಂಬಲ ಸೂಚಿಸಿದ್ದಾರೆ.

ಪೊಲೀಸರು ನಡೆಸುತ್ತಿರುವ ಮುಷ್ಕರ ನ್ಯಾಯ ಬದ್ಧವಾಗಿದ್ದು, ಸರಕಾರ ತಕ್ಷಣ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ರಾಜ್ಯದ ಪೊಲೀಸರು ಮೂಲಭೂತ ಸೌಕರ್ಯಗಳ ನಡುವೆ ಅನೇಕ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನಿಗಧಿತ ಅವಧಿಗಿಂತ ಹೆಚ್ಚು ಕಾಲ ದುಡಿಯುತ್ತಿರುವ ಪೊಲೀಸ್ ಸಿಬ್ಬ್ಬಂದಿಗಳಿಗೆ ದುಡಿಮೆಗೆ ತಕ್ಕ ವೇತನ ಸಿಗುತ್ತಿಲ್ಲ. ತಮ್ಮ ಜೀವವನ್ನು ಪಣಕ್ಕಿಟ್ಟು ಕಾನೂನು ಸುವ್ಯವಸ್ಥೆ ಕಾಪಾಡುತ್ತಿರುವ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳು ನೀಡುವ ಮಾನಸಿಕ ಕಿರುಕುಳ ಮತ್ತು ಒತ್ತಡÀವÀನ್ನು ಸಹಿಸಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪೊಲೀಸರಿಗೆ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಮಣಿಉತ್ತಪ್ಪ ಟೀಕಿಸಿದ್ದಾರೆ.

ಸಿಬ್ಬಂದಿಗಳ ಕೊರತೆಯ ನಡುವೆಯೂ ಇರುವಷ್ಟು ಸಿಬ್ಬಂದಿಗಳು ಕಾನೂನು ಸುವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ಕಾಪಾಡುತ್ತಿದ್ದಾರೆ. ಇದನ್ನು ಸರ್ಕಾರ ಪರಿಗಣಿಸಿ ಇತರ ರಾಜ್ಯಗಳಂತೆ ಇಲ್ಲಿನ ಪೊಲೀಸರಿಗೆ ಕೂಡ ಸೂಕ್ತ ವೇತನ, ವಸತಿಗೃಹ ಮತ್ತು ಮೂಲಭೂತ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ. ಕೊಡಗಿನ ಪೊಲೀಸರ ಸೇವೆ ಶ್ಲಾಘನೀಯವಾಗಿದ್ದು, ಇವರ ಎಲ್ಲಾ ರೀತಿಯ ಹೋರಾಟಗಳಿಗೆ ಸಂಪೂರ್ಣ ಬೆಂಬಲ ನೀಡುವದಾಗಿ ಅವರು ತಿಳಿಸಿದ್ದಾರೆ.