ಪೊನ್ನಂಪೇಟೆ, ಜು. 28: ಶಿಕ್ಷಣ ಎಷ್ಟೇ ಆಧುನೀಕರಣಗೊಂಡರೂ ನೈತಿಕ ಮೌಲ್ಯಗಳಿಲ್ಲದಿದ್ದರೆ ಅದರಿಂದ ಯಾವದೇ ಪ್ರಯೋಜನವಿಲ್ಲ. ಶಿಕ್ಷಣ ಕೇವಲ ಪಠ್ಯ ಪುಸ್ತಕ ಮಾತ್ರವಲ್ಲ. ಪಠ್ಯೇತರ ಕಾರ್ಯಚಟುವಟಿಕೆಗಳು ಕೂಡ ಶಿಕ್ಷಣಕ್ಕೆ ಹೆಚ್ಚು ಪೂರಕವಾದದ್ದು ಎಂದು ಪೊನ್ನಂಪೇಟೆಯ ಸಂತ ಅಂಥೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಟೀನಾ ಅಭಿಪ್ರಾಯಪಟ್ಟಿದ್ದಾರೆ.
ಪೊನ್ನಂಪೇಟೆಯ ಸಂತ ಅಂಥೋಣಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ‘ಛದ್ಮವೇಷ ಸ್ಪರ್ಧೆ-2016’ ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಂದು ಕಲಿಕೆಯ ವಿಷಯಗಳು ಕೂಡ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಸಂಬಂಧಿಸಿರುತ್ತದೆ. ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಪಠ್ಯೇತರ ಚಟುವಟಿಕೆ ಗಳು ಅವರ ದೂರದರ್ಶಿತ್ವ, ಸದ್ಚಿಂತನೆ, ಪರಿಶ್ರಮಗಳಿಗೆ ಮುನ್ನುಡಿ ಬರೆಯುತ್ತದೆ. ಅದರಿಂದಾಗಿ ಬದುಕಿನಲ್ಲಿ ತೀರ ಅಗತ್ಯವಿರುವ ನೈತಿಕ ಮೌಲ್ಯಗಳನ್ನು ಅಳವಡಿಸಿ ಕೊಳ್ಳಲು ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಶಾಲಾ ವಿದ್ಯಾರ್ಥಿಗಳಿಗಾಗಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ವಿಭಾಗಗಳಲ್ಲಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಶಾಲೆಯ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್.ಕೆ.ಜಿ ತರಗತಿಯ ಸ್ಪರ್ಧೆಯಲ್ಲಿ ವೈಷ್ಣವಿ (ಪ್ರ), ಪ್ರಾಪ್ತಿ (ದ್ವಿ), ಯು.ಕೆ.ಜಿ ತರಗತಿಯಲ್ಲಿ ಕುಶಾಲಪ್ಪ (ಪ್ರ), ರೆಲ್ಸನ್(ದ್ವಿ), 1ನೇ ತರಗತಿಯಲ್ಲಿ ಗೌತಮ್ ಕೃಷ್ಣ (ಪ್ರ), ಪ್ರೀತಮ್ (ದ್ವಿ), 2ನೇ ತರಗತಿಯಲ್ಲಿ ಶ್ರಾವಣ್ ಸುನೀಲ್ (ಪ್ರ) ಐಶಾ ಮೇಬಾ (ದ್ವಿ), 3ನೇ ತರಗತಿಯಲ್ಲಿ ಮೋನಿಕ (ಪ್ರ), ಲಿಖಿತ್ ಅಯ್ಯಪ್ಪ (ದ್ವಿ), 4ನೇ ತರಗತಿಯಲ್ಲಿ ಸಿ.ಎನ್. ಮಾಚಮ ್ಮ(ಪ್ರ), ಎಂ.ಆರ್. ಅಬ್ದುಲ್ಲ (ದ್ವಿ), 5ನೇ ತರಗತಿಯಲ್ಲಿ ಕಾರ್ಸನ್ (ಪ್ರ), ನಾಣಯ್ಯ (ದ್ವಿ). 6ನೇ ತರಗತಿಯಲ್ಲಿ ಬಿ.ಪಿ. ಮೋನೀಶ್ (ಪ್ರ), ಆಂಚನಾ ದಿನೇಶ್ (ದ್ವಿ) ಹಾಗೂ 7ನೇ ತರಗತಿಯಲ್ಲಿ ಧನುಷ್ ಮಾಚಯ್ಯ (ಪ್ರ), ಡೆಲ್ಸಿನಿ ಮರಿಯಾ (ದ್ವಿ) ಬಹುಮಾನವನ್ನು ಸ್ಪರ್ಧೆಯಲ್ಲಿ ಪಡೆದುಕೊಂಡರು. ಶಾಲಾ ದೈಹಿಕ ಶಿಕ್ಷಕ ಅರುಣ್ ಅಮ್ಮತ್ತಿ ಸೇರಿದಂತೆ ವಿವಿಧ ತರಗತಿಯ ಶಿಕ್ಷಕರು ಸ್ಪರ್ಧೆಯ ಉಸ್ತುವಾರಿ ವಹಿಸಿದ್ದರು.
ವಿದ್ಯಾರ್ಥಿಗಳಾದ ಸೋಮಣ್ಣ, ಪ್ರಣಾಮ್, ಚರಿಶ್ಮ ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಆಂಗ್ಲೀಯಾ ಸ್ವಾಗತಿಸಿದರು. ಸಿಸ್ಟರ್ ಆರೋಗ್ಯ ಮತ್ತು ಮೇನಕ ನಿರೂಪಿಸಿದರೆ, ವಿದ್ಯಾರ್ಥಿನಿ ರಿದಾ ಫಾತಿಮಾ ವಂದಿಸಿದರು.