ಶ್ರೀಮಂಗಲ, ಸೆ. 24: ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿಯಮಿತ (ಎ.ಪಿ.ಸಿ.ಎಂ.ಎಸ್.ಎಲ್) 2015-16ರ ಸಾಲಿಗೆ ರೂ. 89.22 ಕೋಟಿಗಳ ವಾರ್ಷಿಕ ವಹಿವಾಟು ನಡೆಸಿದೆ. ಇದರಲ್ಲಿ ರೂ. 95.42 ಲಕ್ಷ ಕ್ರೋಢೀಕೃತ ವ್ಯಾಪಾರ ಲಾಭ ಹಾಗೂ ರೂ. 18.37 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಲ್ಲಮಾಡ ಪ್ರಭು ಪೂಣಚ್ಚ ತಿಳಿಸಿದರು.
ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘದ ಸದಸ್ಯರಿಗೆ ಶೇ. 20 ರಂತೆಯೂ ಹಾಲಿ ಸಾಲಿನಲ್ಲಿ ಶೇ.20ರಷ್ಟು ಡಿವಿಡೆಂಟನ್ನು ನೀಡಲಾಗುವದು. ಸಂಘ ಸತತವಾಗಿ ‘ಎ’ ತರಗತಿ ಆಡಿಟ್ ವರ್ಗೀಕರಣದಲ್ಲಿ ಮುಂದುವರಿದಿದೆ.
ಸಂಘದಲ್ಲಿ ಇದುವರೆಗೆ 2316 ಸದಸ್ಯರಿದ್ದು ಸದಸ್ಯರ ಪಾಲು ಹಣ ರೂ. 31.91 ಲಕ್ಷವಿದ್ದು, ರಾಜ್ಯ ಸರಕಾರದ ಬಾಪ್ತು ರೂ. 1.67 ಲಕ್ಷ ಇರುತ್ತದೆ. ಸಂಘದ ಕ್ಷೇಮನಿಧಿ ರೂ. 77.93 ಲಕ್ಷವಿದ್ದು, ಇತರ ಠೇವಣಾತಿ ಮತ್ತು ನಿಧಿಗಳು ಸೇರಿ ರೂ. 368.96 ಲಕ್ಷವಿರುತ್ತದೆ. ಇತರ ಸಂಸ್ಥೆಗಳಲ್ಲಿ ಪಾಲು ಹಾಗೂ ಠೇವಣಿ ರೂಪದಲ್ಲಿ ಧನ ವಿನಿಯೋಗಗಳು ರೂ. 44.37 ಲಕ್ಷ ತೊಡಗಿಸಲಾಗಿದೆ. ಸಂಘದ ಚರ-ಸ್ಥಿರಾಸ್ತಿ ಮೌಲ್ಯ ರೂ. 238.87 ಲಕ್ಷಗಳಾಗಿರುತ್ತದೆ ಎಂದು ಪ್ರಭು ಪೂಣಚ್ಚ ವಿವರಿಸಿದರು.
ಸಂಘ ರೈತ ಸದಸ್ಯರ ಅನುಕೂಲಕ್ಕಾಗಿ ಉತ್ತಮ ಮಟ್ಟದ ವ್ಯವಸಾಯ ಉಪಕರಣ, ಗೊಬ್ಬರ, ಕ್ರಿಮಿನಾಶಕ, ಗ್ರಾಹಕ ವಸ್ತುಗಳಾದ ಸಿಮೆಂಟ್, ಹತ್ಯಾರು, ಮುಳ್ಳುತಂತಿ, ಆರ್.ಸಿ.ಸಿ, ಮೋರಿ ಇತ್ಯಾದಿ ಹಾಗೂ ಗೃಹ ಬಳಕೆ ವಸ್ತುಗಳು, ಕೋವಿ ತೋಟ ಅಲ್ಲದೆ ಸರಕಾರದ ನಿಯಂತ್ರಿತ ಆಹಾರ ಸಾಮಗ್ರಿಗಳ ವಿತರಕರಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರ ಅನುಕೂಲಕ್ಕಾಗಿ ಪ್ರತಿ ಗಂಟೆಗೆ 1.5 ಟನ್ ಸಾಮಥ್ರ್ಯದ ಬಿನ್ನಿ ಅಕ್ಕಿ ಗಿರಣಿ ಹೊಂದಿರುತ್ತದೆ. ಸಂಘ ಇಂಡಿಯನ್ ಆಯಿಲ್ ಕಾರ್ಪೋರೇಷನ್ನ ಚಿಲ್ಲರೆ ಮಾರಾಟ ಪೆಟ್ರೋಲ್ ಬಂಕ್ ಹೊಂದಿದ್ದು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಸಲ್ಲಿಸುತ್ತಿದೆ. ರೈತರ ಭತ್ತ, ಕಾಫಿ ಮತ್ತು ಕರಿಮೆಣಸು ದಾಸ್ತಾನು ಇಡಲು ಸುಸಜ್ಜಿತವಾದ ಗೋದಾಮು ಸೌಲಭ್ಯ ಹೊಂದಿದ್ದು, ಈ ಸಾಲಿನಲ್ಲಿ ರೈತ ಸದಸ್ಯರ ಅನುಕೂಲಕ್ಕಾಗಿ, ಕಾಫಿಗೆ ಉತ್ತಮ ಮಾರುಕಟ್ಟೆ ದೊರಕಿಸುವ ಉದ್ದೇಶದಿಂದ ಕಾಫಿ ಗಿರಣಿ (ಹಲ್ಲಿಂಗ್) ಘಟಕವನ್ನು ಪ್ರಾರಂಭಿಸಲಾಗಿದೆ. ಸಂಘ ಉತ್ತಮ ನಿರ್ವಹಣೆಯ 1.80 ಎಕರೆ ಕಾಫಿ ತೋಟವನ್ನು ಹೊಂದಿದೆ ಎಂದು ಪ್ರಭು ಪೂಣಚ್ಚ ವಿವರಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಂ. ಸರ ಚಂಗಪ್ಪ, ನಿರ್ದೇಶಕರುಗಳಾದ ಎಂ.ಎ. ಸೋಮಯ್ಯ, ಎ.ಕೆ. ಜನಾರ್ಧನ, ಕೆ. ದಯಾ ಚಂಗಪ್ಪ, ಕೆ.ಬಿ. ನಾಣಯ್ಯ, ಪಿ.ಪಿ. ಪವನ್, ಎಂ.ಕೆ. ಸೋಮಯ್ಯ, ಸಿ. ಆಶಾ ಪ್ರಕಾಶ್, ಬಿ.ಎಸ್. ದಶಮಿ ದೇಚಮ್ಮ, ಪಿ.ಕೆ. ಗಿರೀಶ್, ಹೆಚ್.ಹೆಚ್. ತಮ್ಮಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಟಿ. ಪೂನಂ ಹಾಜರಿದ್ದರು.