ನಾಪೋಕ್ಲು, ಜ. 18: ಶನಿಪೂಜೆಗೆ ಪ್ರಖ್ಯಾತಿಯನ್ನು ಪಡೆದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನ ರೂ. 3.50 ಕೋಟಿ ವೆಚ್ಚದಲ್ಲಿ ಊರ ಹಾಗೂ ಪರವೂರಿನವರ ಸಹಕಾರದೊಂದಿಗೆ ಪುನರ್ ನವೀಕರಣಗೊಂಡು ತಾ. 25 ರಿಂದ ಫೆ. 3 ರತನಕ ನವೀಕರಣ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಊರಿಂದ ಊರೇ ಪ್ರತಿ ದಿನ ಶ್ರಮದಾನದ ಮೂಲಕ ಭಾಗಿಯಾಗಿ ಶ್ರೀ ಶಾಸ್ತಾವು ದೇವರ ಬ್ರಹ್ಮಕಲಶೋತ್ಸವ ಜಾತ್ರೆಯ ಸಿದ್ಧತೆಯಲ್ಲಿದ್ದಾರೆ.
ಪೆರಾಜೆ ಗ್ರಾಮ ಕೊಡಗು ಜಿಲ್ಲೆಗೆ ಸೇರಿದ್ದು, ಶ್ರೀ ಕಾವೇರಿ ಮಾತೆಯ ಸೀಮೆಯ ವ್ಯಾಪ್ತಿಗೆ ಸೇರಿದ್ದ, ಶ್ರೀ ಶಾಸ್ತಾವು ದೇವಸ್ಥಾನ ರಾಜ್ಯದ ಪ್ರಸಿದ್ಧ ತಲಕಾವೇರಿಯ ನಂಟು ಇದ್ದು, ತಲಕಾವೇರಿಯ ಬ್ರಹ್ಮ ಕಲಶೋತ್ಸವ ನಡೆದ ಬಳಿಕ ಇದೀಗ ಪೆರಾಜೆ ದೇವಸ್ಥಾನ ಬ್ರಹ್ಮ ಕಲಶೋತ್ಸವಕ್ಕೆ ಸಿದ್ಧಗೊಂಡಿರುವದು ತಲಕಾವೇರಿ ಮತ್ತು ಪೆರಾಜೆಗೆ ಇರುವ ನಂಟಿನ ಇತಿಹಾಸವಾಗಿದೆ. ಪಯಸ್ವಿನಿ ನದಿಯ ತೀರದಲ್ಲಿರುವ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನಕ್ಕೆ ಸುಮಾರು 500 ವರ್ಷಗಳ ಇತಿಹಾಸ ಇದ್ದು, ಶನಿಪೂಜೆಗೆ, ಭಗವತಿ ದೊಡ್ಡಮುಡಿ, ಕರಿಭೂತ ಹೀಗೆ 101 ದೈವಗಳ ನೆಲೆಬೀಡಾಗಿದ್ದು, ದೈವ-ದೇವರುಗಳನ್ನು ಸಮನಾಗಿ ಆರಾಧಿಸಿಕೊಂಡು ಬರುವ ವಿಶಿಷ್ಟ ಧಾರ್ಮಿಕ ಶ್ರದ್ಧಾಕೇಂದ್ರವಾಗಿದೆ. ಇಲ್ಲಿ ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯದಂತೆ ಶ್ರೀ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಸುವ ಅವಶ್ಯಕತೆಯ ಹಿನ್ನೆಲೆಯಲ್ಲಿ ರೂ. 3.50 ಕೋಟಿ ವೆಚ್ಚದಲ್ಲಿ ಶ್ರೀಶಾಸ್ತಾವು, ಮಹಾಗಣಪತಿ, ಅನ್ನಪೂರ್ಣೇಶ್ವರಿ ದೇವರ ಹಾಗೂ ಕರಿಭೂತದ ಗುಡಿ ಪುನರ್ ನವೀಕರಣಗೊಂಡು, ಜತೆಯಲ್ಲಿ ಸಭಾಭವನ, ಯಜ್ಞ ಶಾಲೆಯ ಕಾಮಗಾರಿ ಭರದಿಂದ ನಡೆದು ಇದೀಗ ಕ್ಷೇತ್ರದ ತಂತ್ರಿರ್ಯರಾದ ವೇದಮೂರ್ತಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ ತಾ. 25 ರಂದು ನವೀಕರಣ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮೊದಲ್ಗೊಂಡು ಫೆ. 3 ರತನಕ ವಿಜೃಂಭಣೆಯಿಂದ ನಡೆಯಲಿದೆ. ವಿಶೇಷವಾಗಿ ತಾ. 30 ರಂದು ದೇವರ ಪ್ರತಿಷ್ಠೆ, ತಾ. 31 ರಂದು ದೇವರಿಗೆ ಬ್ರಹ್ಮಕಲಶ ನಡೆಯಲಿದೆ.
ತಾ. 25 ರಂದು ಸಾಮೂಹಿಕ ಪ್ರಾರ್ಥನೆ, ಹಸಿವಾಣಿ ಮೆರವಣಿಗೆ ಉದ್ಘಾಟನೆ, ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಲಿದೆ. ಸಂಜೆ ತಂತ್ರಿಗಳ ಆಗಮನ ನಡೆದು, ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಎ.ಒ.ಎಲ್.ಇ. ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಉದ್ಘಾಟಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ದಯಾನಂದ ಕತ್ತಲ್ ಸಾರ್ ನೀಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ವೇದಮೂರ್ತಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ಶ್ರೀ ಶಾಸ್ತಾವು ಯಕ್ಷಗಾನ ಕಲಾ ಸಂಘ ಪೆರಾಜೆ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಸುದರ್ಶನ ಗರ್ವಭಂಗ ಯಕ್ಷಗಾನ ನಡೆಯಲಿದೆ.
ತಾ. 26 ರಂದು ದೇವಳದಲ್ಲಿ ವಿವಿಧ ಧಾರ್ಮಿಕ ವಿಧಿಗಳು ನಡೆದು, ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ಶ್ರೀಧಾಮ ಮಾಣಿಲ ಮಠದ ಮೋಹನದಾಸ ಪರಮಹಂಸ ಸ್ವಾಮೀಜಿ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಪೆರಾಜೆ ಗ್ರಾಪಂ. ಅಧ್ಯಕ್ಷೆ ಜಯಲಕ್ಷ್ಮೀ ಧರಣೀಧರ ವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಪತ್ರಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಸುಳ್ಯ ಶಾಸಕ ಎಸ್. ಅಂಗಾರ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮತ್ತಿತರ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ರಾತ್ರಿ ಅಂಬಳೆ ಹೇರಂಬ-ಹೇಮಂತ್ ಇವರಿಂದ ಕೊಳಲು ವಾದನ, ಬೆಂಗಳೂರಿನ ಲಯ-ಲಾವಣ್ಯ ತಂಡದಿಂದ ವಾದ್ಯ ವೈಭವ ನಡೆಯಲಿದೆ.
ತಾ. 27 ರಂದು ವಿವಿಧ ಧಾರ್ಮಿಕ ವಿಧಿಗಳು ನಡೆದು, ಅಪರಾಹ್ನ ಅರೆಭಾಷೆ ಯಕ್ಷಗಾನ ನಡೆಯಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ಒಡಿಯೂರು ಮಠಾಧೀಶ ಗುರುದೇವಾನಂದ ಸ್ವಾಮೀಜಿ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರವೀಣ್ ಬಂಗಾರಕೋಡಿ ವಹಿಸಲಿ ದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಕಶೆಕೋಡಿ ಸೂರ್ಯನಾರಾಯಣ ಭಟ್ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಂ.ಸಿ. ನಾಣಯ್ಯ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಾಜಿ ಮೊಕ್ತೇಸರ ಪಿ.ಎಂ. ಭೋಜಪ್ಪ, ತಕ್ಕಮುಖ್ಯಸ್ಥ ವಿಶ್ವನಾಥ ಮೂಲೆಮಜಲು ಭಾಗವಹಿಸಲಿದ್ದಾರೆ. ರಾತ್ರಿ ದುಂಬೊರಿ ಪಣ್ತೆಗೆ ಹಾಜ್ಯಮಯ ನಾಟಕ ನಡೆಯಲಿದೆ.
ತಾ. 28 ರಂದು ದವಳದಲ್ಲಿ ವಿವಿಧ ಧಾರ್ಮಿಕ ವಿಧಿಗಳು ನಡೆದು, ಸಂಜೆ ನಡೆಯುವ ಸಭಾ ಕಾರ್ಯಕ್ರದಲ್ಲಿ ಆಶೀರ್ವಚನವನ್ನು ಅರಮೇರಿ ಕಳಂಚೇರಿ ಮಠಾಧೀಶ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ ನೀಡಲಿದ್ದಾರೆ. ಅಧ್ಯಕ್ಷತೆ ಯನ್ನು ದೇವತಕ್ಕರು ರಾಜಗೋಪಾಲ ರಾಮಕಜೆ ವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಉಪನ್ಯಾಸಕ ಶ್ರೀಷಕುಮಾರ್ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಅರಣ್ಯ ಸಚಿವ ರಮಾನಾಥ ರೈ, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಾಪ್ರಭಾ ಗೌಡ ಚಿಲ್ತಡ್ಕ, ಸುಳ್ಯ ಎ.ಪಿ.ಎಂ.ಸಿ. ಅಧ್ಯಕ್ಷ ಜಾಕೆ ಮಾಧವ ಗೌಡ, ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾಧವ, ಸುಳ್ಯ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ವೆಂಕಪ್ಪಗೌಡ, ಮಾಜಿ ಮೊಕ್ತೇಸರ ಸುರೇಶ್ ಪೆರುಮುಂಡ, ತಕ್ಕ ಮುಖ್ಯಸ್ಥ ಪುರುಷೋತ್ತಮ ನಿಡ್ಯಮಲೆ ಭಾಗವಹಿಸಲಿದ್ದಾರೆ. ರಾತ್ರಿ ನೃತ್ಯ ವೈಭವ, ಕರ್ನಾಟಕ ಶಾಸ್ತ್ರೀ ಸಂಗೀತ ನಡೆಯಲಿದೆ.
ತಾ. 29 ರಂದು ದೇವಳದಲ್ಲಿ ಧಾರ್ಮಿಕ ವಿಧಿಗಳು ನಡೆದು, ಮಧ್ಯಾಹ್ನ ಭಜನೆ ನಡೆದು, ಸಂಜೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಮಂಗಳೂರು ಆದಿಚುಂಚನಗಿರಿ ಮಠದ ಮಠಾಧೀಶ ಧರ್ಮಪಾಲ ನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಅಧ್ಯಕ್ಷತೆಯನ್ನು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ ವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಗೋಪಾಲಕೃಷ್ಣ ಪುತ್ತೂರು ನೀಡಲಿದ್ದಾರೆ.
ಅತಿಥಿಗಳಾಗಿ ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಂ ಭಟ್, ರಾಜ್ಯ ರೇಷ್ಮೆ ನಿಗಮದ ಅಧ್ಯಕ್ಷ ಟಿ.ಪಿ. ರಮೇಶ್, ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್, ಬಿ. ರಾಧಾಕೃಷ್ಣ ಗೌಡ, ಮಾಜಿ ಮೊಕ್ತೇಸರ ಲೋಕನಾಥ ಅಮೆಚೂರು, ತಕ್ಕಮುಖ್ಯಸ್ಥ ಗಣಪತಿ ಗೌಡ ಕುಂಬಳಚೇರಿ, ಬ್ರಹ್ಮ ಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ನಿಡ್ಯಮಲೆ ಭಾಗವಹಿಸಲಿದ್ದಾರೆ. ರಾತ್ರಿ ನೃತ್ಯೋಲ್ಲಾಸ ನಡೆಯಲಿದೆ.
ತಾ. 30 ರಂದು ಶ್ರೀಶಾಸ್ತಾವು, ಶ್ರೀ ಮಹಾಗಣಪತಿ, ಅನ್ನಪೂರ್ಣೇಶ್ವರಿ ದೇವರ ಹಾಗೂ ಕರಿಭೂತ ಕೋಮಾಳಿ ದೈವಗಳ ಪ್ರತಿಷ್ಠೆ ನಡೆದು, ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎ. ಜ್ಞಾನೇಶ್ ವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಹಿರಣ್ಯ ವೆಂಕಟೇಶ್ ಭಟ್ ಕಾಸರಗೋಡು ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ಕೊಡಗು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಧ.ಗ್ರಾ. ಯೋಜನೆ ಕಾರ್ಯನಿರ್ವಹಕ ನಿರ್ದೇಶಕ ಎಲ್.ಹೆಚ್. ಮಂಜುನಾಥ, ಪ್ರೊ. ಕೋಡಿ ಕುಶಾಲಪ್ಪ ಗೌಡ, ಎ.ಒ.ಎಲ್.ಇ. ಕಾರ್ಯದರ್ಶಿ ರೇಣುಕಾ ಪ್ರಸಾದ್, ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ್, ತೂಗು ಸೇತುವೆ ಸರದಾರ ಗಿರೀಶ್ ಭಾರಧ್ವಾಜ್, ಮಾಜಿ ಮೊಕ್ತೇಸರ ಪದ್ಮಯ್ಯ ಕುಂದಲ್ಪಾಡಿ ಭಾಗವಹಿಸಲಿದ್ದಾರೆ. ರಾತ್ರಿ ಭಕ್ತಿ ಭಾವ ಸಂಗೀತ ವೈಭವ ಮತ್ತು ಅರೆಭಾಷೆ ಸಾಂಸ್ಕøತಿಕ ಕಲಾ ವೈಭವ ನಡೆಯಲಿದೆ.
ತಾ. 31 ರಂದು ಧಾರ್ಮಿಕ ವಿಧಿ ವಿಧಾನ ನಡೆದು, ದೇವರಿಗೆ ಬ್ರಹ್ಮಕಲಶ ನಡೆಯಲಿದೆ. ಸಂಜೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಎ.ಒ.ಎಲ್.ಇ. ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ವಹಿಸ ಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಅಕ್ಷಯ ಗೋಖಲೆ ನೀಡಲಿದ್ದಾರೆ. ಅತಿಥಿಗಳಾಗಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಚೆನ್ನಕೇಶವ ದೇವಳದ ಮೊಕ್ತೇಸರ ಡಾ. ಹರಿಪ್ರಸಾದ್, ಭಾಗಮಂಡಲ ಭಗಂಡೇಶ್ವರ, ತಲಕಾವೇರಿ ದೇವಸ್ಥಾನದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷೆ ರೇಣುಕಾ ಸದಾನಂದ, ಮಡಿಕೇರಿ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಪ್ರಾಧ್ಯಾಪಕ ಮಾಧವ ಪೆರಾಜೆ, ಶಕ್ತಿ ಪತ್ರಿಕೆ ಸಂಪಾದಕ ಬಿ.ಜಿ. ಅನಂತಶಯನ, ಮಾಜಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಸಿ. ಹೊನ್ನಪ್ಪ, ತಕ್ಕ ಮುಖ್ಯಸ್ಥ ಪ್ರಭಾಕರ ಕೋಡಿ ಭಾಗವಹಿಸಲಿದ್ದಾರೆ. ರಾತ್ರಿ ಭಕ್ತಿ ಸಂಗೀತ, ಅರೆಭಾಷೆ ನೃತ್ಯ ನಡೆಯಲಿದೆ.
ಫೆ. 1 ರಂದು ವಿವಿಧ ಧಾರ್ಮಿಕ ವಿಧಿಗಳು ನಡೆದು, ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ದೇವಳದ ಮೊಕ್ತೇಸರ ನಾಗೇಶ್ ಕುಂದಲ್ಪಾಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿ.ಪಂ. ಸದಸ್ಯ ಕವಿತಾ ಪ್ರಭಾಕರ್, ಪ್ರೊ. ಕೆ.ಈ. ರಾಧಾಕೃಷ್ಣ ಪೆರಾಜೆ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ, ಸುಳ್ಯ ಉಪ ಅರಣ್ಯಸಂರಕ್ಷಣಾಧಿಕಾರಿ ಜಗನ್ನಾಥ, ಸುದ್ದಿ ಸಮೂಹ ಸಂಸ್ಥೆ ಮುಖ್ಯಸ್ಥ ಡಾ. ಯು.ಪಿ. ಶಿವಾನಂದ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಗಿರೀಜಾ ಶಂಕರ ತುದಿಯಡ್ಕ, ಜೀಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಪುರುಷೋತ್ತಮ ಬಂಗಾರಕೋಡಿ ಭಾಗವಹಿಸಲಿದ್ದಾರೆ. ರಾತ್ರಿ ಯಕ್ಷಗಾನ ರೂಪಕ ನಡೆಯಲಿದೆ.
ಫೆ. 2 ರಂದು ದೇವಳದಲ್ಲಿ ಧಾರ್ಮಿಕ ವಿಧಿಗಳು, ಬ್ರಹ್ಮಕಲಶಾಭಿಷೇಕ ನಡೆದು, ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ನವೀಕರಣ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆರ್.ಡಿ. ಆನಂದ ವಹಿಸಲಿದ್ದಾರೆ. ವೇದಮೂರ್ತಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಶುಭಾಶೀರ್ವಾದ ನೀಡಲಿದ್ದಾರೆ.
ಸಮಾರೋಪ ಭಾಷಣವನ್ನು ಆಡಳಿತ ಮೊಕ್ತೇಸರ ನಾಗೇಶ್ ಕುಂದಲ್ಪಾಡಿ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ, ಮಾಜಿ ಸಚಿವ ದಿನೇಶ್ ಗುಂಡೂರಾವ್ ಮತ್ತು ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ಹಾಸ್ಯ ಸಂಜೆ ನಡೆಯಲಿದೆ. ಮತ್ತು ದೇವರ ನೃತ್ಯ ಬಲಿ, ಕಟ್ಟೆಪೂಜೆ, ದೇವರ ಭೂತಬಲಿ ನಡೆಯಲಿದೆ.
ಫೆ. 3 ರಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ. ಮಾರ್ಚ್ 27 ರಿಂದ ಎ. 10 ರತನಕ ದೇವರ ಕಾಲಾವಧಿ ಜಾತ್ರೋತ್ಸವ ನಡೆಯಲಿದೆ.
- ದುಗ್ಗಳ