ವೀರಾಜಪೇಟೆ, ಡಿ. 1: ಗೂಡ್ಲೂರು ಮೂಡಾಬೈಲ್ ಚೆನ್ನಂಗಿ ಪುನರ್ವಸತಿ ಸಂತ್ರಸ್ತರಿಗೆ ಅರಣ್ಯ ಇಲಾಖೆಯ ಭರವಸೆಯಂತೆ ಜಾಗ ಹಾಗೂ ಮೂಲಭೂತ ಸೌಲಭ್ಯಗಳನ್ನು ಸರಕಾರ ಒದಗಿಸುವ ತನಕ ಹೋರಾಟ ನಡೆಸಲಾಗುವದು ಎಂದು ಪುನರ್ವಸತಿ ಹೋರಾಟ ಸಮಿತಿಯ ಅಧ್ಯಕ್ಷ ಮೇರಿಯಂಡÀ ಸಂಕೇತ್ ಪೂವಯ್ಯ ಹೇಳಿದರು.

ಚೆನ್ನನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೂಡ್ಲೂರು ಮೂಡಾಬೈಲ್ ಚೆನ್ನಂಗಿ ಪುನರ್ವಸತಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಪುನರ್ವಸತಿ ಸಂತ್ರಸ್ತರ ಕುಟುಂಬಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಕೇತ್ ಪೂವಯ್ಯ ಅವರು, 1978ರಲ್ಲಿ ತಿತಿಮತಿ ಗ್ರಾಮದ ಮಜ್ಜಿಗೆ ಹಳ್ಳದಲ್ಲಿ ಕೃಷಿ ಮಾಡಿಕೊಂಡಿದ್ದ ನಿವಾಸಿಗಳಿಗೆ ಗೂಡ್ಲೂರು ಅರಣ್ಯ ಪೈಸಾರಿಯಲ್ಲಿ ತಲಾ 5 ಎಕರೆ ಭೂಮಿ, ರೂ. 5000 ನಗದು ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸುವದಾಗಿ ಭರವಸೆ ನೀಡಿ 166 ಕುಟುಂಬಗಳ ಪ್ರತಿ ಕುಟುಂಬಕ್ಕೆ ತಲಾ ಒಂದು ಎಕರೆ ಭೂಮಿ ನೀಡಿ ಯಾವದೇ ಮೂಲ ಸೌಕರ್ಯಗಳನ್ನು ಒದಗಿಸದೆ ವಂಚಿಸಲಾಗಿದೆ. ಇದರಿಂದಾಗಿ ಸಂತ್ರಸ್ತರು ಇಲ್ಲಿ ಬಡತನ ರೇಖೆಗಿಂತಲೂ ಕೆಳಮಟ್ಟ ದಲ್ಲಿ ಜೀವನ ನಡೆಸುವಂತಾಗಿದೆ. ಸಂತ್ರಸ್ತ ಪುನರ್ವಸತಿ ಕುಟುಂಬಗಳಿಗೆ ತಲಾ 4 ಎಕರೆ ಭೂಮಿ, ಜೊತೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ತನಕ ಹೋರಾಟ

(ಮೂರನೇ ಪುಟದಿಂದ) ಮುಂದುವರೆಯಲಿದೆ ಎಂದರು. ಗೂಡ್ಲೂರು ಚನ್ನಂಗಿ ಮೂಡಾಬೈಲ್ ಪುನರ್ವಸತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್ ಮಾತನಾಡಿ, ವಂಚನೆಗೊಳಗಾದ ಸಂತ್ರಸ್ತ ಪುನರ್ವಸತಿಗಾರರಿಗೆ ನ್ಯಾಯ ದೊರಕಿಸಿ ಕೊಡಲು ಕೊನೆಯ ತನಕ ಹೋರಾಟ ನಡೆಸಲಾಗವದು. ಈಗಾಗಲೇ ಹೋರಾಟದ ಉಪ ಸಮಿತಿ ಸಂಕೇತ್ ಪೂವಯ್ಯ ಅವರ ನೇತೃತ್ವದಲ್ಲಿ ಸಂಬಂಧಿಸಿದ ನಿವೃತ್ತ ಹಿರಿಯ ಅಧಿಕಾರಿಗಳು, ಈಗಿನ ಉನ್ನತ ದರ್ಜೆಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಸಂತ್ರಸ್ತರಿಗೆ ನ್ಯಾಯ ದೊರಕುವ ಸಾಧ್ಯತೆ ಕಂಡು ಬಂದಿದೆ. ಎಲ್ಲರೂ ಒಮ್ಮತವಾಗಿ ಹೋರಾಟ ನಡೆಸಲು ಕರೆ ನೀಡಿದರು.

ಹೋರಾಟ ಸಮಿತಿಯ ಉಪಾಧ್ಯಕ್ಷ ಎಂ.ಕೆ. ವಸಂತ್, ಜಂಟಿ ಕಾರ್ಯದರ್ಶಿ ಜಿ.ಬಿ. ಸೋಮಯ್ಯ, ಸಹಕಾರ್ಯದರ್ಶಿ ಎಂ.ಕೆ. ರಘುನಂದ, ಸಮತಿ ಸದಸ್ಯರುಗಳಾದ ಎನ್.ಎಸ್. ಸವಿಕುಮಾರ್, ಸಿ.ಪಿ. ಸುಗಂದ ಅಯ್ಯಪ್ಪ, ಡಿ.ಎಂ. ಕಿರಣ್, ಕೆ. ಸುರೇಶ್, ವೈ.ಕೆ.ಕೆ. ಪೂವಯ್ಯ, ವಿ.ಕೆ. ಗಣಪತಿ ಉಪಸ್ಥಿತರಿದ್ದರು.