ಮಡಿಕೇರಿ, ಜು.30: ಪ್ರಸಕ್ತ (2016-17) ಸಾಲಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ 10 ಮಂದಿಗೆ ಪುನರ್ವಸತಿ ಸೌಲಭ್ಯ ನೀಡುವ ಗುರಿ ಹೊಂದಲಾಗಿದ್ದು, ಲಿಂಗತ್ವ ಅಲ್ಪಸಂಖ್ಯಾತರ ದೃಢೀಕರಣ ಪಡೆದಿರುವ ಹಾಗೂ ಸ್ವಯಂ ಘೋಷಿತ ದೃಢೀಕರಣವನ್ನು 50 ರೂ. ಚಾಪಾ ಕಾಗದ, ವಾಸ ಸ್ಥಳದ ದೃಢೀಕರಣ ಹೊಂದಿರುವ ಲಿಂಗತ್ವ ಅಲ್ಪಸಂಖ್ಯಾತರು ಈ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ.
ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಹಾಗೂ ನಗರಸಭೆಯ ವ್ಯಾಪ್ತಿಯಲ್ಲಿ ವಾಸವಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವಂತ ಉದ್ದಿಮೆ ಹಮ್ಮಿಕೊಂಡು ಆರ್ಥಿಕ ಸ್ವಾವಲಂಬನೆ ಹೊಂದಲು ಹಾಗೂ ಸಮಾಜದ ಮುಖ್ಯವಾಹಿನಿಗೆ ಬರಲು ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಪ್ರತಿ ಫಲಾನುಭವಿಗೆ ರೂ.20 ಸಾವಿರದಂತೆ ಪ್ರೋತ್ಸಾಹ ಧನದೊಂದಿಗೆ ಬ್ಯಾಂಕ್ ಸಾಲ ನೀಡುವ ಅವಕಾಶವಿದೆ. ನಿಗದಿತ ಅರ್ಜಿ ನಮೂನೆಯನ್ನು ಕಚೇರಿಯಲ್ಲಿ ಪಡೆಯಬಹುದಾಗಿದೆ.
ಅರ್ಹರು ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲಾ ಘಟಕ, ಚೈನ್‍ಗೇಟ್ ಬಳಿ ಮಡಿಕೇರಿಯಲ್ಲಿ ಸಂಪರ್ಕಿಸುವಂತೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರು ಕೋರಿದ್ದಾರೆ.