ಕುಶಾಲನಗರ, ಸೆ. 23: ಕೊಡಗು ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷಕ್ಕೆ ಕಡಿವಾಣ ಹಾಕುವ ಹಿನ್ನಲೆಯಲ್ಲಿ ಸದ್ಯದಲ್ಲಿಯೇ 4 ಕಾಡಾನೆಗಳನ್ನು ಸೆರೆಹಿಡಿಯಲು ಜಿಲ್ಲಾ ಅರಣ್ಯ ಇಲಾಖೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿರುವ ಕಾಡಾನೆಗಳಿಂದ ಮಾನವ ಪ್ರಾಣಹಾನಿಯೊಂದಿಗೆ ಕಾಫಿ ತೋಟಗಳು ಹಾಗೂ ಕೃಷಿ ಫಸಲುಗಳು ಸಂಪೂರ್ಣ ನೆಲಕಚ್ಚುವದರೊಂದಿಗೆ ಬೆಳೆಗಾರರು ಸಂಕಷ್ಟಕ್ಕೆ ಈಡಾಗುವ ಪರಿಸ್ಥಿತಿ ಮುಂದುವರೆದಿದ್ದು, ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ 4 ಪುಂಡಾನೆಗಳನ್ನು ಸೆರೆಹಿಡಿದು ಆನೆ ಮಾನವ ಸಂಘರ್ಷ ಕಡಿಮೆ ಮಾಡಲು ಮುಂದಾಗಿದೆ.
ಜಿಲ್ಲೆಯ ಚೆಟ್ಟಳ್ಳಿ ವ್ಯಾಪ್ತಿಯ ಮೋದೂರು, ಸಿದ್ದಾಪುರ ಸಮೀಪದ ಮಾಲ್ದಾರೆ ಹಾಗೂ ವಿರಾಜಪೇಟೆ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯಲ್ಲಿ ಕಾಡಾನೆಗಳು ಸೇರಿರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದು, ದಿನನಿತ್ಯ ನಾಡಿನಿಂದ ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರು ಕಾಡಾನೆಗೆ ಬಲಿಯಾಗುತ್ತಿದ್ದು ಜನರ ಆಕ್ರೋಷ ಕೂಡ ಮುಗಿಲು ಮುಟ್ಟಿದೆ. ಒಂದು ಮೂಲದ ಪ್ರಕಾರ ಸಿದ್ದಾಪುರ ವ್ಯಾಪ್ತಿಯಲ್ಲಿ 50 ಕ್ಕೂ ಅಧಿಕ ಆನೆಗಳು ಕಾಡಿನಿಂದ ನಾಡಿಗೆ ಲಗ್ಗೆ ಹಾಕುತ್ತಿರುವ ಪ್ರಕರಣಗಳು ಕಂಡುಬಂದಿವೆ. ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳಿಂದ ಬೆಳೆಗಾರರು ಹಾಗೂ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ. ಇದು ಜಿಲ್ಲೆಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದ್ದು ಈ ಹಿನ್ನಲೆಯಲ್ಲಿ ಸದ್ಯದಲ್ಲಿಯೇ 4 ಆನೆಗಳನ್ನು ಹಿಡಿಯಲು ಸರಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದ್ದಾರೆ. ಸುಂಟಿಕೊಪ್ಪ ಸಮೀಪದ ನೀರುಕೊಲ್ಲಿ ವ್ಯಾಪ್ತಿಯಲ್ಲಿ, ಸಿದ್ದಾಪುರ ಬಳಿಯ ಮಾಲ್ದಾರೆಯಲ್ಲಿ ತಲಾ 1 ಆನೆ, ವಿರಾಜಪೇಟೆ ತಾಲೂಕಿನ ಟಾಟಾ ಸಂಸ್ಥೆ ವ್ಯಾಪ್ತಿಯಲ್ಲಿ 2 ಪುಂಡಾನೆಗಳನ್ನು ಸೆರೆಹಿಡಿಯಲು ಅನುಮತಿ ದೊರೆತಿರುವದಾಗಿ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಪ್ರಸಕ್ತ ಅಭಿಮನ್ಯು ಸೇರಿದಂತೆ ಸಾಕಾನೆಗಳು ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ತೆರಳಿದ್ದು ಹಿಂತಿರುಗಿದ ನಂತರವಷ್ಟೆ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಆವರೆಗೆ ಪೂರ್ವಭಾವಿ ಸಿದ್ದತೆಗಳನ್ನು ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ಜಿಲ್ಲೆಯ ಆನೆ ಮಾನವ ಸಂಘರ್ಷಕ್ಕೆ ತಾತ್ಕಾಲಿಕ ಪರಿಹಾರ ದೊರಕುವ ಸಾಧ್ಯತೆಯಿದೆ. ಕಳೆದ ಕೆಲವು ತಿಂಗಳ ಹಿಂದೆ ಎರಡು ಕಾಡಾನೆಗಳನ್ನು ಹಿಡಿದು ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಿರುವದನ್ನು ಇಲ್ಲಿ ಸ್ಮರಿಸಬಹುದು.
ನೆರೆ ರಾಜ್ಯಗಳಿಂದ ಆನೆ ಬೇಡಿಕೆ: ಕರ್ನಾಟಕ ರಾಜ್ಯದ ಕರಿ ಗಜಗಳಿಗೆ ಗಡಿಯಾಚೆಯ ರಾಜ್ಯಗಳಿಂದ ಭಾರೀ ಬೇಡಿಕೆಯಿದ್ದು, ಈ ಬಗ್ಗೆ ಕೂಡ ಇಲಾಖೆಯ ಸಿದ್ದತೆ ನಡೆಯುತ್ತಿದೆ. ಮಧ್ಯಪ್ರದೇಶ ಸೇರಿದಂತೆ 4 ರಾಜ್ಯಗಳಿಂದ 50 ಕ್ಕೂ ಅಧಿಕ ಪಳಗಿದ ಸಾಕಾನೆಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ದುಬಾರೆ ಸಾಕಾನೆ ಶಿಬಿರದಿಂದ ಕೂಡ ಕೆಲವು ಆನೆಗಳನ್ನು ರವಾನಿಸಲು ಚಿಂತನೆ ಹರಿದಿದೆ ಎಂದು ಕೊಡಗು ವೃತ್ತ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ. ಇತ್ತೀಚೆಗೆ ದುಬಾರೆ ಸಾಕಾನೆ ಶಿಬಿರದಲ್ಲಿ ಶಕ್ತಿ ಸಂಪರ್ಕಿಸಿದ ಸಂದರ್ಭ ಮಾಹಿತಿ ನೀಡಿದ ಅವರು, ಕಳೆದ ಹಲವು ವರ್ಷಗಳಿಂದ ಈ ಬಗ್ಗೆ ನೆರೆಯ ರಾಜ್ಯಗಳು ಇಲಾಖೆಯೊಂದಿಗೆ ವ್ಯವಹರಿಸುತ್ತಿವೆ. ಏಷ್ಯಾಖಂಡದಲ್ಲಿಯೇ ಅತಿ ಹೆಚ್ಚು ಸಾಕಾನೆಗಳು ಹಾಗೂ ಕಾಡಾನೆಗಳನ್ನು ಹೊಂದಿರುವ ರಾಜ್ಯಗಳಿಂದ ಪಳಗಿದ ಆನೆಗಳಿಗೆ ಹೊರ ರಾಜ್ಯಗಳಿಂದ ಬೇಡಿಕೆ ಇರುವದಾಗಿ ಅವರು ತಿಳಿಸಿದ್ದಾರೆ. 2014 ರಲ್ಲಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಕಾಡಾನೆ ಕಾರ್ಯಾಚರಣೆಗೆ ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿ ಎಂ. ಎಸ್. ಚಿಣ್ಣಪ್ಪ ಹಾಗೂ ಸಿಬ್ಬಂದಿಗಳೊಂದಿಗೆ ದಸರಾ ಆನೆಗಳಾದ ಅಭಿಮನ್ಯು, ಗಜೇಂದ್ರ, ಶ್ರೀರಾಮ ತೆರಳಿರುವುದನ್ನು ಇಲ್ಲಿ ಸ್ಮರಿಸಬಹುದು.
ಚಿಕ್ಲಿ ಹೊಳೆಯಲ್ಲಿ ಆನೆ ಶಿಬಿರ: ಮಧ್ಯಪ್ರದೇಶ, ಕೇರಳ, ಗೋವಾ, ಉತ್ತರಾಂಚಲ ರಾಜ್ಯಗಳ ಅಧಿಕಾರಿಗಳು, ತಜ್ಞರ ತಂಡ ಕೂಡ ರಾಜ್ಯದ ಆನೆ ಶಿಬಿರಗಳಿಗೆ ಭೇಟಿ ನೀಡಿ ಅವುಗಳ ವಯಸ್ಸು, ಆರೋಗ್ಯ, ಸಾಮಥ್ರ್ಯ ಆಧರಿಸಿ ಪಟ್ಟಿ ಮಾಡಿ ತೆರಳಿರುವದು ಶ್ರೀಗಂಧದ ನಾಡಿನ ಕರಿ ಗಜಗಳಿಗೆ ಬೇಡಿಕೆ ಇದೆ ಎನ್ನುವದಕ್ಕೆ ಸಾಕ್ಷಿಯಾಗಿದೆ. ದುಬಾರೆ ಸಾಕಾನೆ ಶಿಬಿರದಲ್ಲಿ 25 ಕ್ಕೂ ಹೆಚ್ಚು ಸಾಕಾನೆಗಳಿದ್ದು ಇವುಗಳ ನಿರ್ವಹಣೆ ವೆಚ್ಚ ಕೂಡ ಅಧಿಕವಾಗಿದ್ದು ಇನ್ನು ಮುಂದೆ ಸೆರೆ ಹಿಡಿಯುವ ಆನೆಗಳನ್ನು ಕೂಡ ಇದೇ ಶಿಬಿರದಲ್ಲಿ ಪಳಗಿಸಬೇಕಿದೆ. ದುಬಾರೆ ಶಿಬಿರದಲ್ಲಿ ಸಾಕಾನೆಗಳ ಸಂಖ್ಯೆ ಹಾಗೂ ನಿರ್ವಹಣೆ ಹೊರೆ ಅಧಿಕವಾದ ಹಿನ್ನಲೆಯಲ್ಲಿ ಸಮೀಪದ ಚಿಕ್ಲಿಹೊಳೆ ಬಳಿ ಸಾಕಾನೆ ಶಿಬಿರ ಪ್ರಾರಂಭಿಸುವ ಬಗ್ಗೆ ಇಲಾಖೆ ಚಿಂತಿಸಿದೆ ಎಂದು ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ. ಎಸ್. ಚಿಣ್ಣಪ್ಪ ತಿಳಿಸಿದ್ದಾರೆ.
ಆನೆಕಾಡು ಶಿಬಿರದಲ್ಲಿ ಕೂಡ ಆನೆ ಸಫಾರಿ ನಡೆಸುವ ಚಿಂತನೆ ಕೂಡ ಇಲಾಖೆಯಲ್ಲಿದ್ದು, ಸಾಕಾನೆಗಳ ಪ್ರತ್ಯೇಕ ನಿರ್ವಹಣೆಗೆ ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳನ್ನು ಹಿಡಿದು ಶಿಬಿರದಲ್ಲಿ ಪಳಗಿಸಿ ನಂತರದ ನಿರ್ವಹಣೆ ಕೂಡ ಅರಣ್ಯ ಇಲಾಖೆಗೆ ಬಿಸಿ ತುಪ್ಪವಾಗಿರುವ ಹಿನ್ನೆಲೆಯಲ್ಲಿ ಕೆಲವು ಆನೆಗಳನ್ನು ಗಡಿಯಾಚೆಯ ರಾಜ್ಯಗಳಿಗೆ ರವಾನಿಸುವದು ಉತ್ತಮ ಬೆಳವಣಿಗೆ ಎನ್ನುವುದು ಇಲಾಖೆ ಸಿಬ್ಬಂದಿಗಳ ಅಭಿಪ್ರಾಯವಾಗಿದೆ.