ವೀರಾಜಪೇಟೆ, ನ.13: ದಕ್ಷಿಣ ಕೊಡಗಿನ ಸಿದ್ದಾಪುರ ಬಳಿಯ ಬೀಟಿಕಟ್ಟೆ, ಎಮ್ಮೆಗುಂಡಿ ಹಾಗೂ ಗಟ್ಟದಳ್ಳ ಕಾಫಿ ತೋಟದ ಪ್ರದೇಶದಲ್ಲಿ ಪುಂಡಾನೆಗಳನ್ನು ಸೆರೆ ಹಿಡಿದು ಕಾಡಿಗೆ ಅಟ್ಟುವ ಕಾರ್ಯಾಚರಣೆ ಅರಣ್ಯ ಇಲಾಖೆಯಿಂದ ಶುಕ್ರವಾರದಿಂದ ಆರಂಭಗೊಂಡಿದ್ದು ಇದು ಜನತೆಯ ಕಣ್ಣೋರಸುವ ತಂತ್ರವಾಗಿದೆ ಎಂದು ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಆರೋಪಿಸಿದ್ದಾರೆ.
ಬೀಟಿಕಟ್ಟೆ, ಎಮ್ಮೆಗುಂಡಿ, ಗಟ್ಟದಳ್ಳ ಕಾರ್ಯಾಚರಣೆ ಪ್ರದೇಶಕ್ಕೆ ಪಕ್ಷದ ಕಾರ್ಯಕರ್ತರುಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಸಂಕೇತ್ ಪೂವಯ್ಯ ಅವರು, ಕಾರ್ಯಾಚರಣೆಯ ಮೂರನೇ ದಿನವಾದ ಇಂದು ಬೆಳಿಗ್ಗೆ 10ಗಂಟೆಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕಾಟಾಚಾರಕ್ಕಾಗಿ ಚೆಟ್ಟಳ್ಳಿಯ ಕಾರೆಕುಂಡಿ ಎಂಬಲ್ಲಿ ಪುಂಡಾನೆಯೊಂದನ್ನು ಸೆರೆ ಹಿಡಿದ್ದಾರೆ. ಇದು ಕಾಡಾನೆಯೋ ಪಳಗಿದ ಆನೆಯೋ ಎಂಬ ಸಂಶಯವೂ ಮೂಡಿದೆ. ಇದನ್ನು ದುಬಾರೆ ಅರಣ್ಯಕ್ಕೆ ಸಾಗಿಸಲಾಗಿದೆ. ಪಟಾಕಿ ಸ್ಫೋಟಿಸಿ, ತಮಟೆ ಬಾರಿಸಿ ಗೊತ್ತು ಗುರಿ ಇಲ್ಲದ ಕಂದಕ ತೋಡಿ ಅರಣ್ಯ ಇಲಾಖೆಯ ಅವೈಜ್ಞಾನಿಕವಾದ ಕಾರ್ಯಾಚರಣೆ ಯಿಂದ ಪುಂಡಾನೆಗಳನ್ನು ಸೆರೆ ಹಿಡಿಯಲು ಸಾಧ್ಯವಾಗುವದಿಲ್ಲ. ಅಧಿಕಾರಿಗಳಲ್ಲಿರುವ ಮಾಹಿತಿ ಪ್ರಕಾರ ಸಿದ್ದಾಪುರ ಬೀಟಿಕಟ್ಟೆ. ಎಮ್ಮೆಗುಂಡಿ ಹಾಗೂ ಗಟ್ಟದಳ್ಳದಲ್ಲಿ ಪ್ರದೇಶಗಳಲ್ಲಿ 4 ಕಾಡಾನೆಗಳು, ಸೋಮವಾರಪೇಟೆ ವಿಭಾಗದಲ್ಲಿ 2ಸೇರಿದಂತೆ ಒಟ್ಟು 6 ಪುಂಡಾನೆಗಳು ಕಾಫಿ ತೋಟವನ್ನು ದಾಂಧಲೆ ನಡೆಸುತ್ತಿವೆ. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಲ್ಲಿ ಮಾಹಿತಿ ಕೊರತೆ ಇದೆ. ಕೊಡಗಿನಲ್ಲಿ ಕಾಡಾನೆ ಸಮೀಕ್ಷೆ ಮಾಹಿತಿ ಪ್ರಕಾರ ಅಂದಾಜು 4950ರಿಂದ 5400 ಕಾಡಾನೆಗಳಿವೆ. ಇದರಲ್ಲಿ ಶೇಕಡ 60ರಷ್ಟು ಕಾಡಾನೆಗಳು ಪುಂಡಾನೆಗಳ ಸರದಿಯಲ್ಲಿ ಸೇರಿವೆ. ಈ ಕಾಡಾನೆಗಳ ಧಾಳಿ ತಡೆಗಟ್ಟಲು ಅರಣ್ಯ ಇಲಾಖೆ ಪೂರ್ಣವಾಗಿ ವಿಫಲಗೊಂಡಿದೆ ಎಂದು ದೂರಿದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸುಮಾರು 26 ಮಂದಿ ಅಮಾಯಕರು ಕಾಡಾನೆ ಧಾಳಿಗೆ ಬಲಿಯಾಗಿದ್ದಾರೆ. ಸಿದ್ದಾಪುರದ ಬೀಟಿಕಟ್ಟೆ ಎಂಬಲ್ಲಿ ಈಚೆಗೆ ಅರುಳ್ ಜೋಸೆಫ್ ಎಂಬಾತ ರಸ್ತೆಯಲ್ಲಿಯೇ ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಇದಕ್ಕೆ ಮೊದಲು ಬಸವನಹಳ್ಳಿಯ ಚೆಲುವರಾಜ್ ಎಂಬಾತನ ದೇಹ ಕಾಡಾನೆ ದಾಳಿಯಿಂದ ಛಿದ್ರ ಛಿದ್ರಗೊಂಡು ಸಾವನ್ನಪ್ಪಿದ್ದು ಇದು ಮಾಸುವ ಮೊದಲೇ ಬೀಟಿಕಟ್ಟೆಯಲ್ಲಿ ದಾಳಿ ಪ್ರಕರಣ ನಡೆದಿರುವದು ದುರದೃಷ್ಟಕರ. ಇಲಾಖೆ ಅಧಿಕಾರಿಗಳ ಜೇಬಿನಲ್ಲಿಯೇ ಚೆಕ್ ಪುಸ್ತಕ ಇರುವದರಿಂದ ಕಾಡಾನೆ ದಾಳಿಯಿಂದ ಸಾವನ್ನಪ್ಪಿದವರಿಗೆ ರೂ. 5 ಲಕ್ಷದವರೆಗಿನ ಪರಿಹಾರಕ್ಕೆ ಯಾವದೇ ಸಮಸ್ಯೆ ಇಲ್ಲ. ಅಮೂಲ್ಯವಾದ ಪ್ರಾಣ ಕಳೆದುಕೊಂಡವರಿಗೆ ಇದು ಸರಕಾರದ ಕೊಡುಗೆ ಎಂದು ವ್ಯಂಗ್ಯವಾಡಿದ ಸಂಕೇತ್ ಪೂವಯ್ಯ ಅವರು ಕೊಡಗಿನಲ್ಲಿ ಕಾಡಾನೆ ಧಾಳಿಯಿಂದ ಬೆಳೆಗಾರರಿಗಾಗುತ್ತಿರುವ ಲಕ್ಷಾಂತರ ರೂ ನಷ್ಟ, ಹುಲಿ ಧಾಳಿಯಿಂದ ಜಾನುವಾರುಗಳ ಹತ್ಯೆ, ಗ್ರಾಮಗಳಲ್ಲಿ ಭಯದ ವಾತಾವರಣವಿದ್ದರೂ ರಾಜ್ಯದ ಮುಖ್ಯ ಮಂತ್ರಿಯಾಗಲಿ, ನಿಷ್ಕ್ರೀಯ ಅರಣ್ಯ ಸಚಿವರಾಗಲಿ ಕೊಡಗಿಗೆ ಭೇಟಿ ನೀಡದೆ ಕೊಡಗನ್ನು ಅನಾಥ ಮಾಡಿ, ಮಲತಾಯಿ ಧೋರಣೆ ಅನುಸರಿಸುತ್ತಿರುವದು ಸರಿಯಲ್ಲ, ಕಾಡಾನೆ, ಹುಲಿ ಧಾಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಪ್ರುಮುಖರೊಂದಿಗೆ ವಿಚಾರ ವಿನಿಮಯ ಮಾಡದಿರುವದು ಇದು ಇಬ್ಬರ ಅದಕ್ಷ ಸೇವೆಯ ಪ್ರತೀಕವಾಗಿದೆ. ಈಚೆಗಿನ ಸಮೀಕ್ಷೆಯ ಪ್ರಕಾರ ಕೇರಳದಲ್ಲಿ ಸುಮಾರು 1,140, ತಮಿಳ್ನಾಡಿನಲ್ಲಿ 3,380 ಕಾಡಾನೆಗಳಿವೆ.
ಮೂರು ರಾಜ್ಯಗಳ ಸಂಬಂಧ ಪಟ್ಟ ಇಲಾಖೆಗಳು ಸಚಿವರು ಸೇರಿ ಸಭೆ ನಡೆಸಿ ಕಾಡಾನೆ ದಾಳಿ ತಡೆಯುವ ಕಾರ್ಯಾಚರಣೆಯ ವಿನೂತನ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತಂದರೆ ಕಾಡಾನೆ ಹುಲಿ ದಾಳಿಯಿಂದ ಕೊಡಗಿನ ಜನತೆ ಮುಕ್ತಿ ಹೊಂದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಬಹುದು ಎಂದರು.
ಕಾಡಾನೆ ಕಾರ್ಯಾಚರಣೆ ಪ್ರದೇಶದ ಖುದ್ದು ಭೇಟಿಯ ಸಂದರ್ಭದಲ್ಲಿ ಜನತಾದಳದ ಸ್ಥಳೀಯ ಮುಖಂಡರುಗಳು, ಕಾರ್ಯಕರ್ತ ರುಗಳು ಹಾಜರಿದ್ದರು.