ಮೂರ್ನಾಡು, ನ. 26 : ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡುವಿನಲ್ಲಿ ನಡೆಯುತ್ತಿರುವ ಸ್ಟೇಡಿಯಂ ನಿರ್ಮಾಣಕ್ಕೆ ಜಾಗ ಸಮತಟ್ಟು ಗೊಳಿಸುವ ಕಾರ್ಯಕ್ಕೆ ಪೈಸಾರಿ ಗುಡಿಸಲು ನಿವಾಸಿಗಳು ಶನಿವಾರ ತಡೆಯೊಡ್ಡಿ ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೊಡಗಿನಲ್ಲಿ ಸ್ಟೇಡಿಯಂ ನಿರ್ಮಿಸಲು ಉದ್ದೇಶಿಸಿದ ಹಿನ್ನೆಲೆಯಲ್ಲಿ ಪಾಲೇಮಾಡುವಿನ ಸರ್ವೆ ನಂ. 167/1ಎ ರಲ್ಲಿನ ಪೈಸಾರಿ ಜಾಗದಲ್ಲಿ ಸ್ಥಳ ಗುರುತಿಸಿ ಸಂಸ್ಥೆಯ ಹೆಸರಿಗೆ 12.70 ಏಕರೆ ಜಾಗವನ್ನು ನೀಡಲಾಗಿದೆ. ಕಳೆದ ಒಂದು ತಿಂಗಳಿನಿಂದ ಸ್ಟೇಡಿಯಂ ಕಾಮಗಾರಿ ನಡೆಸುತ್ತಿದ್ದು, ಇಂದು ಜೆಸಿಬಿ ಮೂಲಕ ಗುರುತಿಸಲಾದ ಜಾಗವನ್ನು ಸಮತಟ್ಟು ಮಾಡುವ ಕಾರ್ಯ ನಡೆಸಲಾಗುತ್ತಿತ್ತು.
ಗುಡಿಸಲು ನಿವಾಸಿಗಳು ಇಂದು ಬೆಳಿಗ್ಗೆ ಸ್ಮಶಾನದ ಸ್ಥಳಕ್ಕೆ ತೆರಳಿ ಸಮತಟ್ಟು ಮಾಡುವ ಕಾರ್ಯಕ್ಕೆ ತಡೆಯೊಡ್ಡಿದ್ದರು. ಬೆಳಗ್ಗೆಯಿಂದ ಸಂಜೆವರೆಗೆ ನಿವಾಸಿಗಳು ಸ್ಮಶಾನ ಸ್ಥಳದಲ್ಲೇ ಕುಳಿತು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಗುಡಿಸಲು ನಿವಾಸಿಗಳ ಮುಖಂಡ ಮೊಣ್ಣಪ್ಪ ಮಾತನಾಡಿ ನಿವಾಸಿಗಳು ಕಳೆದ ಹತ್ತು ವರ್ಷಗಳಿಂದ ಇದೇ ಸ್ಥಳದಲ್ಲಿ ಶವ ಸಂಸ್ಕಾರ ನಡೆಸುತ್ತಿದ್ದೇವೆ. ಈ ಹಿಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕಂದಾಯ ಇಲಾಖಾಧಿಕಾರಿಗಳು ಎರಡು ತಿಂಗಳೊಳಗೆ ನಿವಾಸಿಗಳಿಗೆ ಸ್ಮಶಾನ ಸ್ಥಳ ಗುರುತು ಪಡಿಸಿ ನೀಡುತ್ತೇವೆ ಎಂದು ಭರವಸೆ ನೀಡಿದರು. ಆದರೆ ಮೂರು ತಿಂಗಳು ಕಳೆದರೂ ಸ್ಮಶಾನಕ್ಕೆ ಸ್ಥಳ ನೀಡಿಲ್ಲ. ಕಳೆದ ಹತ್ತು ವರ್ಷಗಳಿಂದ ಸ್ಮಶಾನವಾಗಿ ಬಳಸುತ್ತಿದ್ದ ಜಾಗವನ್ನು ನಾವು ಬಿಟ್ಟು ಕೊಡುವದಿಲ್ಲ. ನ್ಯಾಯ ದೊರಕುವವರೆಗೂ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.