ವೀರಾಜಪೇಟೆ, ಜ. 22: ವೀರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದ ಪಾಲಂಗಾಲ ದಲ್ಲಿ ಇಂದು ಬೆಳಿಗ್ಗೆ 6.30ರ ಸಮಯದಲ್ಲಿ ಕಾಡಾನೆ ಧಾಳಿಗೆ ಕಾಫಿ ಬೆಳೆಗಾರ ಕರಿನೆರವಂಡ ರವಿ ಕಾಳಯ್ಯ (66) ಸ್ಥಳದಲ್ಲಿಯೇ ಬಲಿಯಾಗಿದ್ದಾರೆ.ಪಾಲಂಗಾಲದ ಭಕ್ಷಿ ಕಾಫಿ ತೋಟದ ಮಾಲೀಕ ಕರಿನೆರವಂಡ ರವಿ ಕಾಳಯ್ಯ ಅವರು ತೋಟದ ಮನೆಯಲ್ಲಿ ವಾಸವಾಗಿದ್ದರು. ಎಂದಿನಂತೆ ಇಂದು ಬೆಳಿಗ್ಗೆ 6.15 ಗಂಟೆಗೆ ನಡೆದು ಕೊಂಡು (ವಾಕಿಂಗ್) ಹೋಗುತ್ತಿದ್ದಾಗ ತೋಟದ ಬಳಿಯ ಕಾಲು ದಾರಿ ರಸ್ತೆಯಲ್ಲಿ ಕಾಡಾನೆ ತಂಡದಿಂದ ಬೇರ್ಪಟ್ಟಿದ್ದ ಒಂಟಿ ಸಲಗ ರವಿ ಕಾಳಯ್ಯ ಅವರನ್ನು ಕಾಲಿನಿಂದ ಒದ್ದಿದೆ. ಆನೆ ಒದ್ದ ರಭಸಕ್ಕೆ ಕಾಳಯ್ಯ ಅವರ ತಲೆ ಅವರದೇ ಕಾಫಿ ತೋಟದ ಬೇಲಿಯ ಕಲ್ಲು ಕಂಬಕ್ಕೆ ಬಡಿದಿದೆ. ಇದರಿಂದ ಕಂಬವೂ ತುಂಡಾಗಿದ್ದು ಅವರ ತಲೆ ಛಿದ್ರಗೊಂಡು ಹಣೆ ಭಾಗ ಚಪ್ಪಟೆಯಾಗಿದ್ದು ಮೆದುಳು ಹೊರ ಬಂದಿದೆ. ಮುಖವೂ ವಿರೂಪಗೊಂಡಿದೆ.
ಕಾಳಯ್ಯ ತೋಟದ ಕಾರ್ಮಿಕರು ಬೆಳಿಗ್ಗೆ 8.30 ಗಂಟೆಯಾದರೂ ಮಾಲೀಕರು ಮನೆಗೆ ಹಿಂದಿರುಗಲಿಲ್ಲ ಎಂದು ಅವರ ಜೀಪಿನಲ್ಲಿಯೇ ಹುಡುಕಿಕೊಂಡು ಬಂದಾಗ ತೋಟದ ಬೇಲಿ ಬದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ನಂತರ ಗ್ರಾಮದ ಪ್ರಮುಖರು ಅರಣ್ಯ ಇಲಾಖೆ ಹಾಗೂ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆಯೂ ಪಾಲಂಗಾಲ ಗ್ರಾಮದಲ್ಲಿ ಉದಯ ಎಂಬವರಿಗೆ ಕಾಡಾನೆ ಧಾಳಿ ನಡೆಸಿದೆ. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಬೆಳೆಗಾರ ಬಲಿಯಾಗಿರುವದು ಗ್ರಾಮಸ್ಥರ ದುರದೃಷ್ಟ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು.
ಕೆದಮುಳ್ಳೂರು, ಪಾಲಂಗಾಲದಲ್ಲಿ ಕಾಡಾನೆ ಧಾಳಿ ತೀವ್ರವಾಗಿದ್ದು, ವೀರಾಜಪೇಟೆ ಅರಣ್ಯ ಇಲಾಖೆಗೆ ಅನೇಕ ದೂರುಗಳನ್ನು ನೀಡಿದರೂ ಯಾವದೇ ಪ್ರಯೋಜನವಾಗುತ್ತಿಲ್ಲ. ದುರಂತ ಸಂಭವಿಸಿದಾಗ ಕಾಡಾನೆ ಧಾಳಿಗೆ ತುತ್ತಾದವರನ್ನು ಭೇಟಿ ಮಾಡುವದು ವಾಡಿಕೆಯಾಗಿದೆ.
ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಬರುವ ತನಕ ಮೃತದೇಹ ತೆಗೆಯಲು ಬಿಡುವದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಜಿಲ್ಲಾ ಪ್ರಧಾನ ಅರಣ್ಯಾಧಿಕಾರಿ ಮನೋಜ್ ಕುಮಾರ್ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಸಮಾಧಾನಗೊಳಿಸಿ ಕಾಡಾನೆ ತಡೆಯುವ ಕಂದಕದ ನಿರ್ಮಾಣ ಪ್ರಗತಿಯಲ್ಲಿದೆ. ಇಲಾಖೆ ಕಾಡಾನೆ ಧಾಳಿ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಜೊತೆಗೆ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ ನಂತರ ಅಪರಾಹ್ನ ಮೃತದೇಹವನ್ನು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು.
‘ಶಕ್ತಿಯೊಂದಿಗೆ ಮಾತನಾಡಿದ ಮನೋಜ್ ಕುಮಾರ್ ಅವರು ಈ ಪ್ರದೇಶದಲ್ಲಿ ಆನೆ ಕಂದಕವನ್ನು ನಿರ್ಮಿಸುವಂತೆ ಗ್ರಾಮಸ್ಥರು ಕೋರಿದ್ದಾರೆ. ಆದರೆ, ಅದು ಅಸಾಧ್ಯವಾದ ಕಾರ್ಯ ಎಂದು ಮಾಹಿತಿಯಿತ್ತರು. ಏಕೆಂದರೆ, ಸುತ್ತಲೂ ದಟ್ಟ ಕಾಡು ಹಾಗೂ ನದಿ ಪ್ರದೇಶವಿರುವದರಿಂದ ಕಂದಕ ನಿರ್ಮಾಣ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ತಕ್ಷಣದಿಂದಲೇ ಈ ಪ್ರದೇಶದಲ್ಲಿ ನೆಲೆಗೊಂಡಿರುವ ಸುಮಾರು 15 ಆನೆಗಳನ್ನು ನಾಡಿನಿಂದ ಕಾಡಿಗೆ ಓಡಿಸುವ ಕಾರ್ಯವನ್ನು ಕೈಗೊಳ್ಳಲಾಗುವದು ಎಂದು ಸ್ಪಷ್ಟಪಡಿಸಿದರು. ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 10 ಮಂದಿ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ, ಸ್ಥಾಯಿ ಸಮಿತಿ ಅಧ್ಯಕ್ಷÀ ಶಶಿಸುಬ್ರಮಣಿ, ಸದಸ್ಯ ಮಹೇಶ್ ಗಣಪತಿ, ತಾಲೂಕು ಪಂಚಾಯಿತಿ ಸದಸ್ಯ ಎಂ. ಪ್ರಶಾಂತ್ ಉತ್ತಪ್ಪ ಆಸ್ಪತ್ರೆಗೆ ಭೇಟಿ ನೀಡಿದರು.
ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು. ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ದುರಂತದ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಗ್ರಾಮಾಂತರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ನಂಜುಂಡಸ್ವಾಮಿ ಪ್ರಕರಣ ದಾಖಲಿಸಿದ್ದಾರೆ. ವೀರಾಜಪೇಟೆ ಅರಣ್ಯಾಧಿಕಾರಿ ಗೋಪಾಲ್ ಮತ್ತು ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ಹಾಜರಿದ್ದರು. ಮೃತ ರವಿ ಕಾಳಯ್ಯ ಅವರಿಗೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯಿದ್ದು, ಇಬ್ಬರು ಅಮೇರಿಕದಲ್ಲಿ ವೈದ್ಯ ವೃತ್ತಿಯಲ್ಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮಾಕುಟ್ಟ ಅರಣ್ಯದಿಂದ ಬಂದಿರುವ ಕಾಡಾನೆಗಳ ಹಿಂಡು ಕೆದಮುಳ್ಳೂರು, ಪಾಲಂಗಾಲದ ವಿವಿಧ ತೋಟಗಳಲ್ಲಿ ಬೀಡು ಬಿಟ್ಟಿರುವದಾಗಿ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ದೂರಿದರು.ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಜೆ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿ ವಾರಿಸುದಾರರಿಗೆ ಹಸ್ತಾಂತರಿಸಲಾಯಿತು.