ಮಡಿಕೇರಿ, ಜು. 5: ಕೇಂದ್ರ ಸರಕಾರ ನೇಮಿಸಿದ ಮಹಿಳಾ ಸಬಲೀಕರಣ ಪಾರ್ಲಿಮೆಂಟರಿ ಸಮಿತಿ ಸದಸ್ಯರು ಎರಡು ದಿನ ಕೊಡಗಿನ ವಿವಿಧ ತೋಟಗಳಿಗೆ ಭೇಟಿ ನೀಡಿ ಮಹಿಳಾ ಕಾರ್ಮಿಕರ ಸ್ಥಿತಿ- ಗತಿಗಳ ಕುರಿತು ಅಧ್ಯಯನ ನಡೆಸಿದರು.

ಮಡಿಕೇರಿಗೆ ಆಗಮಿಸಿ ಐಷಾರಾಮಿ ಹೊಟೇಲಿನಲ್ಲಿ ತಂಗಿದ್ದ ತಂಡ ಸಂಜೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಕಾರ್ಮಿಕ ಅಧಿಕಾರಿ, ಕಾಫಿ ಬೋರ್ಡ್ ಹಾಗೂ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿತು.

ಬಿಜಯ ಚಕ್ರವರ್ತಿ ಅವರ ಅಧ್ಯಕ್ಷೀಯ ತಂಡದಲ್ಲಿ ಹದಿಮೂರು ಸದಸ್ಯರಿದ್ದಾರೆ.

ಸುಂಟಿಕೊಪ್ಪ ಹಾಗೂ ಗದ್ದೆಹಳ್ಳದ ಟಾಟಾ ಕಾಫಿ ತೋಟದ ಮಹಿಳಾ ಕಾರ್ಮಿಕರನ್ನು ತಂಡದ ಸದಸ್ಯರು ಭೇಟಿಯಾದರು.

ಆದರೆ ಭೇಟಿಯ ಸಂದರ್ಭ ಸ್ಥಳಕ್ಕೆ ಬಾರದ ತಂಡದ ಅಧ್ಯಕ್ಷೆ ಹಾಗೂ ಮತ್ತೊಬ್ಬರು ಹೊಟೇಲಿನಲ್ಲೇ ತಂಗಿದ್ದರು.

ಮಹಿಳಾ ಕಾರ್ಮಿಕರ ವಿರುದ್ಧ ದೌರ್ಜನ್ಯ, ಅವರಿಗೆ ನೀಡಬೇಕಾದ ಸೌಲಭ್ಯ- ಸವಲತ್ತುಗಳ ಕುರಿತು ಸಮಿತಿ ಅಧ್ಯಯನ - ವಿಚಾರಣೆ ನಡೆಸುತ್ತಿದೆ ಎಂದು ಹೇಳಿದ ಸಮಿತಿ ಸದಸ್ಯರು ಮಾಧ್ಯಮದವರು ಸುದ್ದಿ ಸಂಗ್ರಹಿಸದಂತೆ ಅಡ್ಡಿಪಡಿಸ ಲಾರಂಭಿಸಿದರು.

ಸುಂಟಿಕೊಪ್ಪದ ತೋಟ ವೊಂದಕ್ಕೆ ಭೇಟಿ ನೀಡಿದ ಸಂದರ್ಭ ಅಲ್ಲಿದ್ದ ಮಹಿಳಾ ಕಾರ್ಮಿಕರನ್ನು ‘ಶಕ್ತಿ' ಮಾತನಾಡಿಸಿತು.

ಅಲ್ಲಿದ್ದ ಗೌರಿ, ಸರಸ್ವತಿ, ಜಲಜ, ಸೀತಮ್ಮ, ಫಿಲೋಮಿನಾ, ಶಕುಂತಳ ಮತ್ತು ಮುತ್ತು ಎಂಬವರು ಮಾತನಾಡಿ ತಂಡದವರು ‘ಏನಾದ್ರೂ ಪ್ರಾಬ್ಲಮ್ ಇದ್ಯಾ'ಂತ ಕೇಳಿದ್ರು. ಮಕ್ಕಳನ್ನ ಚೆನ್ನಾಗಿ ಓದ್ಸಿ, ಅವ್ರೂ ನಿಮ್ಹಾಗೆ ತೋಟದ ಕೆಲ್ಸ ಮಾಡ್ಬೇಕಾಂತ ಕೇಳಿದ್ರು. ನಮ್ಗೆ ಏನೂ ಪ್ರಾಬ್ಲೆಮ್ಮು ಇಲ್ಲ ಅಂತ ಹೇಳಿದ್ವಿ' ಎಂದು ಕಾರ್ಮಿಕ ತಂಡ ಹೇಳಿತು.

ಅಧ್ಯಯನ ತಂಡವು ತಾ. 29 ರಿಂದ ಪ್ರಯಾಣದಲ್ಲಿದ್ದು, ಮುಂಬಯಿ, ಮಂಗಳೂರು ಹಾಗೂ ಕೊಡಗಿನಲ್ಲಿ ಎರಡೆರಡು ದಿನ ತಂಗಿ ಮಹಿಳಾ ಕಾರ್ಮಿಕರನ್ನು ಭೇಟಿ ಮಾಡುತ್ತಿದೆ. ಇಂಡಿಯನ್ ಆಯಿಲ್, ಎಲ್ಕ್‍ಹಿಲ್, ಟಾಟಾ ಹಾಗೂ ಇತರೆಡೆ ಕಾರ್ಮಿಕರನ್ನು ಸಂಪರ್ಕಿಸುತ್ತಿದೆ.