ನಾಪೆÇೀಕ್ಲು, ನ. 3: ಬಲಿರಾ.. ಬಲಿರಾ.. ಎಂಬ ಹರ್ಷೋದ್ಗಾರಗಳ ನಡುವೆ ಗ್ರಾಮದ ಯುವಕರ ನಡುವೆ ನಡೆದ ಹಗ್ಗಜಗ್ಗಾಟ, ಎರಡೂ ಕಾಲುಗಳಿಗೆ ಗೋಣಿಚೀಲ ಸುರಿದು ಓಡಲು ಪರದಾಡಿದ ಯುವಕರು, ಎದ್ದುಬಿದ್ದು ಗೆಲುವು ಸಾಧಿಸಲು ಓಡಿ ಗುರಿಮುಟ್ಟಿದ ಮಕ್ಕಳು. ಹೀಗೆ ಹತ್ತು ಹಲವು ಕ್ರೀಡಾ ಸ್ಪರ್ಧೆಗಳಲ್ಲಿ ಮಕ್ಕಳು, ಮಹಿಳೆಯರು, ಯುವಕರು ಪಾಲ್ಗೊಂಡು ಸಂಭ್ರಮಿಸಿದರು. ಸಮೀಪದ ಪಾರಾಣೆ ಗ್ರಾಮದಲ್ಲಿ ಪಾರಾಣೆ ಕೇಂದ್ರ ಕ್ರೀಡಾ ಮಂಡಳಿ ವತಿಯಿಂದ ನಡೆದ ಪಾರಾಣೆ ಕ್ರೀಡಾಹಬ್ಬ 2016ರಲ್ಲಿ ಕಂಡು ಬಂದ ದೃಶ್ಯಗಳಿವು.ಪ್ರತೀ ವರ್ಷದಂತೆ ಈ ವರ್ಷವೂ ಕ್ರೀಡಾ ಮಂಡಳಿ ವತಿಯಿಂದ 55ನೇ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಮೂರು ದಿನಗಳ ಕಾಲ ನಡೆದ ಅಂತರ-ಗ್ರಾಮಾಂತರ ಕೈಲು ಮುಹೂರ್ತ ಕ್ರೀಡಾಕೂಟದಲ್ಲಿ ಕೈಕಾಡು, ಕೊಣಂಜಗೇರಿ, ಬಲಮುರಿ, ಬಾವಲಿ ಹಾಗೂ ಕಿರುಂದಾಡು ಗ್ರಾಮಗಳ ವಿವಿಧ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಗ್ರಾಮೀಣ ಪ್ರದೇಶದ ಕ್ರೀಡೆಗಳಿಗೆ ಪೆÇ್ರೀತ್ಸಾಹ ನೀಡುವಂತಹ ಇಂತಹ ಕಾರ್ಯಕ್ರಮಗಳು ಸ್ತುತ್ಯಾರ್ಹ. ನಾಡಿನ ಹಬ್ಬದ ರೀತಿಯಲ್ಲಿ ಕ್ರೀಡಾಕೂಟವನ್ನು ಆಯೋಜಿಸಿರುವದು ಇತರರಿಗೆ ಪ್ರೇರಣೆ ನೀಡುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ನರಿಯಂದಡ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ತೆಕ್ಕಡ ಶೋಭಾ ಮೋಹನ್, ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಬೆಂಗಳೂರಿನ ವೈದ್ಯ ಡಾ. ಗುಡ್ಡೇರ ಸಂತೋಷ್ ಮಾತನಾಡಿದರು.
ಕಾರ್ಯಕ್ರಮದಲ್ಲಿ 2017ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆಯಲಿರುವ ಏಷ್ಯನ್ ಸೈಕ್ಲಿಂಗ್ ಚಾಂಪಿಯನ್ ಶಿಪ್‍ನ ಕೋಚ್ ಆಗಿ ಆಯ್ಕೆಯಾಗಿರುವ ಕಿರುಂದಾಡು ಗ್ರಾಮದ ಪಾಡೆಯಂಡ ಚರಣ್ ಚರ್ಮಣ್ಣ ಅವರನ್ನು ಸನ್ಮಾನಿಸಲಾಯಿತು.
ಪಾರಾಣೆ ಕೇಂದ್ರ ಕ್ರೀಡಾ ಮಂಡಳಿಯ ಅಧ್ಯಕ್ಷ ಚೆರುಮಂದಂಡ ಜೆ. ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಾಂಡ ಎಸ್. ದೇವಯ್ಯ ನೆರವೇರಿಸಿದರು. ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಕೊಣಂಜಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೋಚಮಂಡ ವನಿತಾ ತಮ್ಮಯ್ಯ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೊಳ್ಳಚೆಟ್ಟೀರ ಎಂ. ಸುರೇಶ್, ತಾಲೂಕು ಪಂಚಾಯಿತಿ ಸದಸ್ಯೆ ಉಮಾ ಪ್ರಭು, ಪಾರಾಣೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೊಳಕಾರಂಡ ಎಂ. ಮಂದಣ್ಣ, ಹಿರಿಯರಾದ ಬೊಳ್ಳಚೆಟ್ಟೀರ ಕುಶಾಲಪ್ಪ, ಪೆಬ್ಬಾಟಂಡ ಎ. ಪೆಮ್ಮಯ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಫಿ ಮಂಡಳಿ ಅಧಿಕಾರಿ ಬೊಪ್ಪಂಡ ಶ್ಯಾಮ್ ಪೂಣಚ್ಚ ಮಣ್ಣು ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದರು. ಪಾರಾಣೆ ಕೃಷಿ ಪತ್ತಿನ ಸಹಕಾರ ಸಂಘದ ಬೊಳಕಾರಂಡ ಎಂ. ಮಂದಣ್ಣ ಸ್ವಾಗತಿಸಿ ಕ್ರೀಡಾ ಮಂಡಳಿಯ ವರದಿ ವಾಚಿಸಿದರು. ಎನ್.ಕೆ. ಪ್ರಭು ಕಾರ್ಯಕ್ರಮ ನಿರೂಪಿಸಿದರು.
ಮಹಿಳೆಯರ ಟೆನ್ನಿಕಾಯಿಟ್ ಸ್ಪರ್ಧೆಯಲ್ಲಿ ಬಲಮುರಿ ತಂಡ ಪ್ರಥಮ, ಕಿರುಂದಾಡು ತಂಡ ದ್ವಿತೀಯ. ಮಹಿಳೆಯರ ಥ್ರೋಬಾಲ್‍ನಲ್ಲಿ ಬಲಮುರಿ ತಂಡ ಪ್ರಥಮ, ಕಿರುಂದಾಡು ತಂಡ ದ್ವಿತೀಯ. ಪುರುಷರ ವಾಲಿಬಾಲ್‍ನಲ್ಲಿ ಕೊಣಂಜಗೇರಿ ತಂಡ ಪ್ರಥಮ, ಬಾವಲಿ ತಂಡ ದ್ವಿತೀಯ. ಪುರುಷರ ಹಾಕಿಯಲ್ಲಿ ಬಲಮುರಿ ತಂಡ ಪ್ರಥಮ, ಕೈಕಾಡು ತಂಡ ದ್ವಿತೀಯ. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕಿರುಂದಾಡು ತಂಡ ಪ್ರಥಮ, ಕೈಕಾಡು ತಂಡ ದ್ವಿತೀಯ ಸ್ಥಾನ ಗಳಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಕ್ರೀಡಾಕೂಟದ ಚಾಂಪಿಯನ್ ಆಗಿ ಬಲಮುರಿ ತಂಡ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.