ಕುಶಾಲನಗರ, ಜೂ 20: ಕಾವೇರಿ ನದಿ ಬಚಾವೋ ಆಂದೋಲನ ಹಿನ್ನೆಲೆಯಲ್ಲಿ ತಲಕಾವೇರಿಯಿಂದ ಪೂಂಪ್‍ಹಾರ್‍ಗೆ ಪಾದಯಾತ್ರೆ ಹೊರಟ ಸಾಧುಸಂತರ ತಂಡವನ್ನು ಕುಶಾಲನಗರ ಕೊಪ್ಪ ವ್ಯಾಪ್ತಿಯ ಕಾವೇರಿ ನದಿ ಸೇತುವೆ ಬಳಿ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡು ಬೀಳ್ಕೊಟ್ಟರು.
ಕೊಪ್ಪ ಕಾವೇರಿ ಸೇತುವೆ ಬಳಿ ಬಂದ ಪಾದಯಾತ್ರೆ ತಂಡವನ್ನು ಕುಶಾಲನಗರ ಮತ್ತು ಕೊಪ್ಪ ವ್ಯಾಪ್ತಿಯ ನೂರಾರು ಸಂಖ್ಯೆಯಲ್ಲಿ ನಾಗರಿಕರು, ಸಂಘಸಂಸ್ಥೆ ಪ್ರಮುಖರು ಬರಮಾಡಿಕೊಂಡರು.
ಈ ಸಂದರ್ಭ ಮಾತನಾಡಿದ ಶ್ರೀ ರಮಾನಂದ ಸ್ವಾಮಿ, ಉತ್ತರದ ಗಂಗಾ ನದಿ ಯೋಜನೆಯಂತೆ ಕಾವೇರಿ ನದಿಗೆ ಪ್ರತ್ಯೇಕ ಸಚಿವಾಲಯ ರಚಿಸಲು ಕೇಂದ್ರ ಸರಕಾರ ಮುಂದಾಗಬೇಕಿದೆ. ಈ ಮೂಲಕ ಕಾವೇರಿ ನದಿಯ ಸಂಪೂರ್ಣ ರಕ್ಷಣೆ ಸಾಧ್ಯ ಎಂದರು. ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 6 ದಿನಗಳ ಕಾಲ ಪಾದಯಾತ್ರೆ ನಡೆದ ಸಂದರ್ಭ ನದಿ ತಟದ ಜನರ ಸಂಪೂರ್ಣ ಬೆಂಬಲ ದೊರಕುವದರೊಂದಿಗೆ ನದಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಾಧುಸಂತರ ತಂಡ ಯಶಸ್ವಿಯಾಗಿದೆ ಎಂದರಲ್ಲದೆ, ಗ್ರಾಮ ಮಟ್ಟದಲ್ಲಿ ವಿಶೇಷ ಗ್ರಾಮಸಭೆ ನಡೆಸುವದು ಹಾಗೂ ಗ್ರಾಮ ಮಟ್ಟದ ನದಿ ಸಂರಕ್ಷಣಾ ಸಮಿತಿ ರಚಿಸಲು ಕೊಡಗು ಜಿಲ್ಲಾಡಳಿತ ಮುಂದಾಗಬೇಕಾಗಿದೆ. ಈ ಮೂಲಕ ಜೀವನದಿ ಕಾವೇರಿಯ ಸಂರಕ್ಷಣೆ ಸಾಧ್ಯ ಎಂದರು. ಪಾದಯಾತ್ರೆ ತಂಡದ ಸದಸ್ಯರು ಹಾಗೂ ಪ್ರಮುಖರು ಕೊಪ್ಪ ಅರಣ್ಯ ತಪಾಸಣಾ ಕೇಂದ್ರದ ಬಳಿ ಕಾವೇರಿ ನದಿ ತಟದಲ್ಲಿ ಸಸಿಯೊಂದನ್ನು ನೆಡಲಾಯಿತು.
ಕುಶಾಲನಗರದ ಕೊಡವ ಸಮಾಜ, ಗೌಡ ಸಮಾಜ, ಜಯಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ಕುಶಾಲನಗರ ಆರ್ಯವೈಶ್ಯ ಮಂಡಳಿ, ನಗರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಪ್ರಮುಖರು, ಹಿಂದೂಪರ ಸಂಘಟನೆಗಳು, ಕಾವೇರಿ ಹಿತರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಕನ್ನಡ ಸಾಹಿತ್ಯ ಪರಿಷತ್, ಕೊಡಗು ಗ್ರೀನ್ ಸಿಟಿ ಫೋರಂ, ಗೆಳೆಯರ ಬಳಗ ಹಾಗೂ ಜನಪ್ರತಿನಿಧಿಗಳು, ಜಿಲ್ಲಾ, ಪಟ್ಟಣ ಪಂಚಾಯ್ತಿ, ಕೊಪ್ಪ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು, ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್‍ಟ್ರಸ್ಟ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸದಸ್ಯರು ನೂರಾರು ಸಂಖ್ಯೆಯಲ್ಲಿ ಪಾದಯಾತ್ರೆ ತಂಡವನ್ನು ಸ್ವಾಗತಿಸಿ ಬೀಳ್ಕೊಟ್ಟರು. ನಂತರ ಪಾದಯಾತ್ರೆ ತಂಡ ಸ್ಥಳೀಯ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ 54ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನದಿಗೆ ಮಹಾ ಆರತಿ ಬೆಳಗುವ ಕಾರ್ಯದಲ್ಲಿ ಪಾಲ್ಗೊಂಡರು.
ಪಾದಯಾತ್ರೆ ತಂಡ ಮಂಗಳವಾರ ಕಣಿವೆಯಿಂದ ಹೆಬ್ಬಾಲೆ, ತೊರೆನೂರು, ಶಿರಂಗಾಲ ಮಾರ್ಗವಾಗಿ ಕೊಡಗಿನಿಂದ ಹಾಸನ ಜಿಲ್ಲೆಯತ್ತ ಸಾಗಿ ರಾಮನಾಥಪುರದಲ್ಲಿ ವಾಸ್ತವ್ಯ ಹೂಡಲಿದೆ.
ತಂಡವನ್ನು ನಂಜರಾಯಪಟ್ಟಣ ಬಳಿ ಗೌಡ ಯೂತ್ ಕ್ಲಬ್ ವತಿಯಿಂದ ಬರಮಾಡಿಕೊಳ್ಳಲಾಯಿತು. ಗೌಡ ಯೂತ್ ಕ್ಲಬ್ ಅಧ್ಯಕ್ಷ ನಡುಮನೆ ಪವನ್, ತಾಲೂಕು ಪಂಚಾಯಿತಿ ಸದಸ್ಯ ಎಂ.ಕೆ.ಚಂಗಪ್ಪ, ಗೌಡ ಸಮಾಜ ಅಧ್ಯಕ್ಷ ಕೆ.ಜಿ. ಚೇತನ್, ಉಪ ವಲಯ ಅರಣ್ಯಾಧಿಕಾರಿ ಬಾನಂಡ ದೇವಿಪ್ರಸಾದ್ ಮತ್ತು ಕ್ಲಬ್ ಸದಸ್ಯರು ಬರಮಾಡಿಕೊಂಡರು.