ನಾಪೆÇೀಕ್ಲು, ಡಿ. 12: ಕೊಡಗಿನ ಪ್ರಸಿದ್ಧ ಕಕ್ಕಬೆ ಸಮೀಪದ ಪಾಡಿ ಶ್ರೀ ಇಗ್ಗತ್ತಪ್ಪ ಸನ್ನಿಧಿಯಲ್ಲಿ ಹುತ್ತರಿ ಕಲಾಡ್ಚ ಉತ್ಸವ ವಿಜೃಂಭಣೆಯಿಂದ ನೆರವೇರಿತು.ಬೆಳಿಗ್ಗೆ ದೇವಳದ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತೇರಾಟದೊಂದಿಗೆ ಆರಂಭಗೊಂಡ ಉತ್ಸವದಲ್ಲಿ ತುಲಾಭಾರ ಸೇವೆ, ಮಹಾಪೂಜೆ ಸೇರಿದಂತೆ ವಿವಿಧ ಪೂಜೆ, ಅರ್ಚನೆಗಳು ನಡೆದವು. ಮಧ್ಯಾಹ್ನದ ಅನ್ನ ಸಂತರ್ಪಣೆಯ ನಂತರ ದೇವರ ಬಲಿ ಮೂರ್ತಿಯನ್ನು ಆಧಿ ಸ್ಥಳ ಮಲ್ಮ ಬೆಟ್ಟಕ್ಕೆ ವಾದ್ಯ ಘೋಷಗಳೊಂದಿಗೆ ಕರೆದೊಯ್ದು ಸಂಪ್ರದಾಯದಂತೆ, ಪೂಜೆ, ಬಲಿ, ಪ್ರಸಾದ ವಿನಿಯೋಗದ ನಂತರ ಮತ್ತೆ ದೇವಳದಲ್ಲಿ ನಡೆದ ದೇವರ ನೃತ್ಯ ಬಲಿಯೊಂದಿಗೆ ಉತ್ಸವ ಸಂಪನ್ನ ಗೊಂಡಿತು. ಪೂಜಾ ವಿಧಿವಿಧಾನವನ್ನು ಪ್ರಧಾನ ಅರ್ಚಕ ಕುಶ ಭಟ್ ಹಾಗೂ ಲವ ಭಟ್, ಪ್ರಸಾದ್, ಜಗದೀಶ್ ಮತ್ತಿತರರು ನೆರವೇರಿಸಿದರು. ಈ ಸಂದರ್ಭ ದೇವತಕ್ಕರಾದ ಪರದಂಡ ಕಾವೇರಪ್ಪ, ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ ಸೇರಿದಂತೆ ದೇವಳಕ್ಕೆ ಸಂಬಂಧಿಸಿದ ಎಲ್ಲಾ ತಕ್ಕ ಮುಖ್ಯಸ್ಥರು, ಭಕ್ತಾದಿಗಳು, ದೇವಳದ ಪಾರುಪತ್ಯೆಗಾರ ಪರದಂಡ ತಮ್ಮಪ್ಪ, ಭಕ್ತಜನ ಸಂಘದ ವ್ಯವಸ್ಥಾಪಕ ಕಾಳಿಂಗ ದೇವಳದ ಸಿಬ್ಬಂದಿ ಇದ್ದರು.