ಸೋಮವಾರಪೇಟೆ,ಅ.19: ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಹೊಗಳುವ ಮೂಲಕ ರಾಷ್ಟ್ರಪ್ರೇಮಿ ಭಾರತೀಯರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಮಾಜೀ ಸಂಸದೆ ಹಾಗೂ ಚಲನಚಿತ್ರ ನಟಿ ರಮ್ಯ ವಿರುದ್ಧ ಸೋಮವಾರಪೇಟೆ ನ್ಯಾಯಾಲಯದಲ್ಲಿ ದಾಖಲಾಗಿದ್ದ ಖಾಸಗಿ ಮೊಕದ್ದಮೆಯ ವಿಚಾರಣೆಯನ್ನು ಡಿಸೆಂಬರ್ 29ಕ್ಕೆ ಮುಂದೂಡಲಾಗಿದೆ.
ಕೊಡಗು ಪ್ರಜಾ ರಂಗದ ಜಿಲ್ಲಾಧ್ಯಕ್ಷ ಹಾಗೂ ವಕೀಲರೂ ಆಗಿರುವ ಬೇಳೂರು ನಿವಾಸಿ ಕಾಟ್ನಮನೆ ವಿಠಲ್ ಗೌಡ ಅವರು ಕಳೆದ ಆಗಸ್ಟ್ 22ರಂದು ಸೋಮವಾರಪೇಟೆ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ಕಳೆದ ಆಗಸ್ಟ್ 27ರಂದು ನಡೆಸಬೇಕಿತ್ತು. ಆದರೆ ವಕೀಲರ ಸಂಘದವರು ಅಂದು ಚನ್ನರಾಯಪಟ್ಟಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಕಲಾಪವನ್ನು ಬಹಿಷ್ಕರಿಸಿದ್ದ ಹಿನ್ನೆಲೆ ಅರ್ಜಿಯ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು.
ಇದರೊಂದಿಗೆ ರಮ್ಯ ಅವರ ಹೇಳಿಕೆ ರಾಷ್ಟ್ರದ್ರೋಹದ ಸೆಕ್ಷನ್ ಅಡಿಯಲ್ಲಿ ಬರುತ್ತದೆಯೇ? ಮತ್ತು ವಿಚಾರಣೆ ನಡೆಸಲು ಸೋಮವಾರಪೇಟೆ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತದೆಯೇ? ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆಯೂ ನ್ಯಾಯಾಧೀಶರು ಸೂಚಿಸಿದ್ದರು.
ಇಂದು ಮಧ್ಯಾಹ್ನ 12.15ರ ಸುಮಾರಿಗೆ ರಮ್ಯ ವಿರುದ್ಧದ ಅರ್ಜಿಯ ವಿಚಾರಣೆ ನಡೆಯಿತು. ಇಲ್ಲಿನ ನ್ಯಾಯಾಲಯದ ನ್ಯಾಯಾಧೀಶರಾದ ಶ್ಯಾಂಪ್ರಕಾಶ್ ಅವರು ವಿಚಾರಣೆ ನಡೆಸಿದರು. ದೂರುದಾರ ವಿಠಲ್ ಅವರೂ ಸಹ ಹಾಜರಾಗಿದ್ದರು. ರಮ್ಯ ಅವರ ಹೇಳಿಕೆ ರಾಷ್ಟ್ರದ್ರೋಹದ ಸೆಕ್ಷನ್ ಅಡಿಯಲ್ಲಿ ಹೇಗೆ ಬರುತ್ತದೆ ಮತ್ತು ಇಲ್ಲಿನ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತದೆಯೇ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ಇದಕ್ಕೆ ಕಳೆದ 1962ರಲ್ಲಿ ಕೇದಾರನಾಥಸಿಂಗ್ ಮತ್ತು ಬಿಹಾರ ರಾಜ್ಯ ಸರ್ಕಾರದ ನಡುವೆ ನಡೆದಿದ್ದ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಉದಾಹರಿಸಿದರು. ಯಾವದೇ ಓರ್ವ ವ್ಯಕ್ತಿ ದೇಶದ ಬಗ್ಗೆ ಮಾತನಾಡಿದಾಗ ಅದು ಸಾಮಾಜಿಕವಾಗಿ ಶಾಂತಿಭಂಗ, ಪ್ರತಿಭಟನೆ, ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗಿದ್ದರೆ ಅಂತಹ ಪ್ರಕರಣವನ್ನು ದೇಶದ್ರೋಹದ ವ್ಯಾಪ್ತಿಗೆ ಪರಿಗಣಿಸಲು ನ್ಯಾಯಾಲಯ ಆದೇಶ ನೀಡಿದೆ ಎಂದು ವಿಠಲ್ ಗೌಡ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಮತ್ತೊಂದು ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ವಿಠಲ್ ಗೌಡ, ರಮ್ಯ ಅವರ ಹೇಳಿಕೆ ರಾಜ್ಯದ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಈ ಹಿನ್ನೆಲೆ ಸೋಮವಾರಪೇಟೆಯಲ್ಲಿ ಪ್ರಕರಣ ದಾಖಲಿಸಿರುವದಾಗಿ ತಿಳಿಸಿದರು. ದೂರುದಾರರ ಮಾತು ಆಲಿಸಿದ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಡಿಸೆಂಬರ್ 29ಕ್ಕೆ ಮುಂದೂಡಿದರಲ್ಲದೆ, ಮುಂದಿನ ವಿಚಾರಣೆ ಸಂದರ್ಭ ತಮ್ಮ ಸಮಜಾಯಿಷಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನ ಆದೇಶಗಳ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದರು.
ಖಾಸಗಿ ದೂರು ಸಲ್ಲಿಸಿರುವ ವಿಠಲ್ ಗೌಡ ಅವರು, ರಾಷ್ಟ್ರದ್ರೋಹ, ಶಾಂತಿಭಂಗಕ್ಕೆ ಪ್ರಚೋಧನೆಗೆ ಸಂಬಂಧಪಟ್ಟಂತೆ ಐಪಿಸಿ 124(ಎ), 344, 511 ಸೆಕ್ಷನ್ಗಳನ್ನು ದಾಖಲಿಸಿ ರಮ್ಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.