ಶನಿವಾರಸಂತೆ, ಮೇ 27: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಬಳಿ ಸೇತುವೆ ಮುಂಭಾಗದಲ್ಲಿ 2 ಕಲ್ಯಾಣ ಮಂಟಪಗಳಿದ್ದು, ಮದುವೆ ಇತ್ಯಾದಿ ಸಮಾರಂಭಗಳ ತ್ಯಾಜ್ಯಗಳನ್ನು ಸೇತುವೆ ಕೆಳಗಿನ ಹೊಳೆಗೆ ಹಾಕಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಕಾಜೂರು ಗಿರೀಶ್, ಮಂಜುನಾಥ್ ಹಾಗೂ ಪಿ.ಸಿ. ಪುರುಷೋತ್ತಮ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೇತುವೆ ಕೆಳಗಿನ ಹೊಳೆ ಹಾಸನ ಜಿಲ್ಲೆಯ ಹೇಮಾವತಿ ನದಿ ಸೇರುತ್ತದೆ. ಈ ಹೊಳೆ ಮೂದ್ರವಳ್ಳಿ, ಶಿವರಳ್ಳಿ, ಅವರದಾಳು, ಗಂಗನಳ್ಳಿ, ಇತ್ಯಾದಿ ಗ್ರಾಮಗಳ ವ್ಯವಸಾಯಕ್ಕೂ ನೀರೊದಗಿಸುತ್ತದೆ. ಹೊಳೆಗೆ ಹಾಕುವ ತ್ಯಾಜ್ಯವು ನೀರಿನಲ್ಲಿ ಹರಿದು ನದಿ ಒಡಲನ್ನು ಸೇರುತ್ತದೆ.

ಸೇತುವೆ ಮುಂಭಾಗದ ಬಸಪ್ಪ ಕಲ್ಯಾಣ ಮಂಟಪ ಹಾಗೂ ಆರ್.ವಿ. ಕಲ್ಯಾಣ ಮಂಟಪದಲ್ಲಿ ಮದುವೆ ಇತ್ಯಾದಿ ಸಮಾರಂಭಗಳು ನಿತ್ಯವೂ ನಡೆಯುತ್ತಲೇ ಇರುತ್ತದೆ. ಊಟ ಮಾಡಿ ಎಂಜಲೆಲೆಗಳನ್ನು ಜನ ನೇರವಾಗಿ ಹೊಳೆಗೆ ಎಸೆಯುತ್ತಾರೆ. ಈ ಮೂಲಕ ಪರಿಸಕ್ಕೆ ಹಾನಿಯಾಗುತ್ತಿದೆ ಎಂದು ಆರೋಪಿಸಲಾಗಿದೆ.

ಕಲ್ಯಾಣ ಮಂಟಪಗಳ ತ್ಯಾಜ್ಯಗಳ ವಿಲೇವಾರಿಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಸಂಬಂಧಪಟ್ಟ ಗ್ರಾ.ಪಂ. ಅಧಿಕಾರಿಗಳು ಶೀಘ್ರ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.