ಮಡಿಕೇರಿ, ಜು. 23: ಉತ್ತಮ ಪರಿಸರ ಕಾಪಾಡಿದಲ್ಲಿ ಮಾತ್ರ ಪ್ರತಿಯೊಂದು ಜೀವಿಯು ಆರೋಗ್ಯಯುತ ಜೀವನ ನಡೆಸಲು ಸಾಧ್ಯ. ಆದ್ದರಿಂದ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ ಟಿ.ಸಿ. ಶ್ರೀಕಾಂತ್ ಕರೆ ನೀಡಿದರು.ನಗರದ ಬಾಲಕರ ಬಾಲ ಮಂದಿರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಓ.ಡಿ.ಪಿ. ಸಂಸ್ಥೆ, ಬಾಲ ನ್ಯಾಯ ಮಂಡಳಿ, ಮಕ್ಕಳ ಕಲ್ಯಾಣ ಸಮಿತಿ ಮತ್ತು ಬಾಲಕರ ಬಾಲ ಮಂದಿರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮ ಮತ್ತು ಕಾನೂನು ಶಿಬಿರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಉತ್ತಮ ಜೀವನ ನಡೆಸಲು ಒಳ್ಳೆಯ ಪರಿಸರದ ಅವಶ್ಯಕತೆ ಇದೆ, ಜಿಲ್ಲೆಯಲ್ಲಿ ಸಾಕಷ್ಟು ಪ್ರಕೃತಿ ಸೌಂದರ್ಯಗಳನ್ನು ಹೊಂದಿದೆ. ಪ್ರಸಕ್ತ ದಿನಗಳಲ್ಲಿ ಇದನ್ನು ಉಳಿಸುವಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು, ಆದ್ದರಿಂದ ಪರಿಸರ ಸಂರಕ್ಷಣೆ ಮಾಡುವಲ್ಲಿ ಕೈಜೋಡಿಸಬೇಕು ಎಂದರು. ಜಿ.ಕಾ.ಸೇ.ಪ್ರಾ. ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಮಾತನಾಡಿ, ಪ್ರತಿಯೊಬ್ಬರ ಮನೆಯ ಪರಿಸರ, ಮರ-ಗಿಡಗಳನ್ನು ಬೆಳೆಸಿ ಪ್ರಕೃತಿಯ ರಕ್ಷಣೆಗೆ ಮುಂದಾಗಬೇಕು, ವಿಶೇಷವಾಗಿ ಮಕ್ಕಳಿಗೆ ಮನೆಯ ಪರಿಸರ, ಶಾಲೆಯ ಪರಿಸರ ಮತ್ತಿತರ ಕಡೆಗಳಲ್ಲಿ ಪರಿಸರ ಉಳಿಸುವಲ್ಲಿ ತಿಳುವಳಿಕೆ ನೀಡಿದ್ದಲ್ಲಿ ಮಾತ್ರ ಭವಿಷ್ಯತ್ತಿನಲ್ಲಿ ಉತ್ತಮ ಪರಿಸರವನ್ನು ಕಾಣಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯ ಪಟ್ಟರು. ವಕೀಲರಾದ ಬಿ.ಕೆ. ಶ್ರೀಧರ್ ಅವರು ಮಹಿಳಾ ಮತ್ತು ಮಕ್ಕಳ ಕಳ್ಳ ಸಾಗಣಿಕೆ ತಡೆ, ಸಂತ್ರಸ್ಥರ ಪರಿಹಾರ ಯೋಜನೆಗಳ ಬಗ್ಗೆ ಹಲವು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆರತಿ ಸೋಮಯ್ಯ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಉಪಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯೂ, ಬಾಲಕರ ಬಾಲ ಮಂದಿರದ ಅಧೀಕ್ಷಕ ರವೀಂದ್ರ, ಓ.ಡಿ.ಪಿ. ಸಂಸ್ಥೆಯ ಜಾಯ್ಸ್ ಮೆನೇಜಸ್, ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಸಂಘಟಕಿ ದಮಯಂತಿ, ಜಿಲ್ಲಾ ಕಾನೂನು ಸೇವಾ ಪ್ರಾಧೀಕಾರದ ಆಡಳಿತ ಸಹಾಯಕ ಜಯಪ್ಪ ಮತ್ತಿತರರು ಇದ್ದರು. ಕಾರ್ಯಕ್ರಮಕ್ಕೂ ಮೊದಲು ಗಿಡ ನೆಡುವ ಸಪ್ತಾಹದ ಅಂಗವಾಗಿ ಜಿಲ್ಲಾ ಬಾಲಕರ ಬಾಲಮಂದಿರದ ಆವರಣದಲ್ಲಿ ಗಣ್ಯರು ಮಕ್ಕಳೊಂದಿಗೆ ಗಿಡಗಳನ್ನು ನೆಟ್ಟರು.