ಕುಶಾಲನಗರ, ಡಿ. 15: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಪರಿಸರ ಪೂರಕ ಯೋಜನೆಗಳಿಗೆ 2 ಕೋಟಿ ರೂಗಳ ಅನುದಾನ ಒದಗಿಸಲಾಗುವದು ಎಂದು ಮಂಡಳಿಯ ಸದಸ್ಯರಾದ ಜೆ.ಜಿ. ಕಾವೇರಿಯಪ್ಪ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ಮತ್ತು ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯುಕ್ತಾಶ್ರಯದಲ್ಲಿ ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಡೆದ “ಜೀವನದಿ ಕಾವೇರಿ ನೀರಿನ ಬಳಕೆ ಮತ್ತು ಪರಿಸರ ಸಂರಕ್ಷಣೆ” ಮಾಹಿತಿ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಯ ಮಡಿಕೇರಿ ಕೇಂದ್ರದಲ್ಲಿ ವಾಯುಮಾಪನ ಕೇಂದ್ರ ನಿರ್ಮಾಣಕ್ಕಾಗಿ 1 ಕೋಟಿ ರೂಗಳು ಮತ್ತು ಮಡಿಕೇರಿಯ ನಗರಸಭೆಗೆ ಘನತ್ಯಾಜ್ಯ ವಸ್ತು ವಿಲೇವಾರಿ ಮಾಡುವ ಘಟಕ ನಿರ್ಮಾಣಕ್ಕೆ 1 ಕೋಟಿ ರೂಗಳ ಅನುದಾನ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ಒದಗಿಸಿದರು. ಮಡಿಕೇರಿ ನಗರಸಭೆ ಈ ಸಂಬಂಧ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿತು ಎಂದು ಅವರು ತಿಳಿಸಿದರು.

ನದಿ ತಟಗಳ ಗ್ರಾಮ, ಪಟ್ಟಣಗಳಿಂದ ನೇರವಾಗಿ ನದಿಗೆ ಕಲುಷಿತ ತ್ಯಾಜ್ಯಗಳನ್ನು ಬಿಡಲು ಅವಕಾಶ ಇರುವದಿಲ್ಲ ಎಂದು ತಿಳಿಸಿದ ಕಾವೇರಿಯಪ್ಪ, ಸಂಸ್ಕರಿಸಿ ಪುನರ್ ಬಳಕೆಗೆ ಯೋಗ್ಯವಾದ ನೀರನ್ನು ಮಾತ್ರ ನದಿಗೆ ಹರಿಸಲು ಪ್ರತಿಯೊಬ್ಬರೂ ಕ್ರಮ ಕೈಗೊಳ್ಳ ಬೇಕಾಗಿದೆ. ವೈಜ್ಞಾನಿಕವಾಗಿ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಘಟಕಗಳು ಕಾರ್ಯನಿರ್ವಹಿಸಿದರೆ ಮಾತ್ರ ಸ್ಥಳೀಯ ಆಡಳಿತಗಳು ನಿರಾಕ್ಷೇಪಣಾ ಪತ್ರ ನೀಡಬಹುದು ಎಂದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೈಸೂರು ವಲಯ ಕಛೇರಿಯ ಹಿರಿಯ ಪರಿಸರ ಅಧಿಕಾರಿ ಕೆ.ಎಂ.ಲಿಂಗರಾಜು ಮಾತನಾಡಿ, ಪ್ರಸಕ್ತ ಪರಿಸರ ಕಾನೂನು ತಿದ್ದುಪಡಿಯಾಗಿದ್ದು ಘನತ್ಯಾಜ್ಯ ವಿಲೇವಾರಿಗೆ ಮತ್ತು ನದಿ ಸಂರಕ್ಷಣೆಗೆ ಕಟ್ಟುನಿಟ್ಟಿನ ಕಾಯ್ದೆ ರೂಪುಗೊಂಡಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಉಪನ್ಯಾಸ ನೀಡಿದ ಜಲತಜ್ಞರಾದ ಎ.ಎಂ. ಸೂರಜ್ ಮಾತನಾಡಿ, ಅಂತರ್‍ಜಲ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾಳಜಿ ಹೊಂದದಿದ್ದಲ್ಲಿ ಮುಂದಿನ ದಿನಗಳಲ್ಲಿ ನದಿ ಬತ್ತಿ ಹೋಗುವ ಆತಂಕ ವ್ಯಕ್ತಪಡಿಸಿದರು. ನೀರಿನ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಇರಬೇಕು. ಶೇ.85 ರಷ್ಟು ಜನತೆ ನೀರಿನ ಕೊರತೆ ಎದುರಿಸುತ್ತಿದ್ದಾರೆ ಎನ್ನುವ ಮಾಹಿತಿ ಒದಗಿಸಿದರು.

ಮಡಿಕೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಅವರು ನದಿ ತಟಗಳ ಒತ್ತುವರಿಯಾಗುವದರೊಂದಿಗೆ, ಅರಣ್ಯ ನಾಶ, ಕಾಂಕ್ರೀಟೀಕರಣ, ಅರಣ್ಯದ ಒಳಗೆ ರಸ್ತೆ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯಗಳು ಪರಿಸರ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿವೆ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ಕೊಡಗಿನಲ್ಲಿ ಕಾವೇರಿ ಮೂಲ ದಿಂದಲೇ ನದಿ ಕಲುಷಿತಗೊಳ್ಳುತ್ತಿ ರುವದು ಆತಂಕಕಾರಿ ವಿಷಯ ವಾಗಿದ್ದು ಜನಜಾಗೃತಿ ಮೂಡಿಸ ಬೇಕಾಗಿದೆ ಎಂದರಲ್ಲದೆ ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿಯ ಕಾಳಜಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ನದಿ, ಪರಿಸರ ಸಂರಕ್ಷಣೆ ಬಗ್ಗೆ ಪೋಷಕರು ಮಕ್ಕಳಲ್ಲಿ ಅರಿವು ಮೂಡಿಸಬೇಕಾಗಿದೆ. ಈ ಮೂಲಕ ತಮ್ಮ ಜವಾಬ್ದಾರಿ ನಿಭಾಯಿಸ ಬೇಕಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾಧ್ಯಕ್ಷರಾದ ಬಿ.ಎಸ್. ಲೋಕೇಶ್ ಸಾಗರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ, ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾದ ಹೆಚ್.ವಿ. ಶಿವಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಂಡಳಿಯ ಸದಸ್ಯರಾದ ಜೆ.ಜಿ. ಕಾವೇರಿಯಪ್ಪ ಅವರನ್ನು ಸನ್ಮಾನಿಸಿ ಗೌರವಿ¸ Àಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಕಾಲೇಜು ಆವರಣದಲ್ಲಿ ಗಣ್ಯರು ಸಸಿನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೈಸೂರು ಜಿಲ್ಲಾ ಪರಿಸರ ಅಧಿಕಾರಿ ಯತೀಶ್, ಕೊಡಗು ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್, ಕುಶಾಲನಗರ ಪಟ್ಟಣ ಪಂಚಾಯ್ತಿ ಸದಸ್ಯರಾದ, ಪ್ರಮೋದ್ ಮುತ್ತಪ್ಪ, ರಶ್ಮಿ ಅಮೃತ್‍ರಾಜ್, ಗುಡ್ಡೆಹೊಸೂರು ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಭಾರತಿ, ಸದಸ್ಯೆ ಲೀಲಾವತಿ, ಮುಳ್ಳುಸೋಗೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಭವ್ಯ, ತಾಲ್ಲೋಕು ಪಂಚಾಯ್ತಿ ಸದಸ್ಯೆ ಆರ್.ಪುಷ್ಪಾ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಬಿ.ಭಾರತೀಶ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಜಿಲ್ಲಾ ಹೊಟೇಲ್ ಮಾಲೀಕರ ಸಂಘದ ಖಜಾಂಚಿ ಕೆ.ಕೆ. ಭಾಸ್ಕರ್, ಮಾಜಿ ಸೈನಿಕರ ಸಂಘದ ಸ್ಥಾಪಕ ಅಧ್ಯಕ್ಷರಾದ ಭಾಸ್ಕರ್, ಎನ್ನೆಸ್ಸೆಸ್ ಶಿಬಿರಾಧಿಕಾರಿಗಳಾದ ಪ್ರಕಾಶ್ ಕುಂಬಾರ್, ಹೆಚ್.ಜೆ. ಮಂಜುನಾಥ್, ಕಾವೇರಿ ನದಿ ಜಾಗೃತಿ ಸಮಿತಿ ಸಂಚಾಲಕರಾದ ಡಿ.ಆರ್. ಸೋಮಶೇಖರ್, ಕೆ.ಜಿ.ಮನು, ಜಗದೀಶ್ ನಿಡ್ಯಮಲೆ ದಿನೇಶ್, ಬಿ.ಡಿ.ಅಣ್ಣಯ್ಯ, ಭಾಸ್ಕರ್ ನಾಯಕ್, ಬಿ.ಜೆ.ಅಣ್ಣಯ್ಯ, ವೈಶಾಖ್, ಸರಕಾರಿ ಪದವಿಪೂರ್ವ ಕಾಲೇಜಿನ ಸ್ಟುಡೆಂಟ್ ಪೊಲೀಸ್ ಕೆಡೆಟ್ ಮುಖ್ಯಸ್ಥರಾದ ಸದಾಶಿವ ಪಲ್ಲೇದ್, ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ ಮತ್ತಿತರರು ಇದ್ದರು.

ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್. ಚಂದ್ರ ಮೋಹನ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳಾಡಿದರು. ಸಿಂಚನಾ ಚಂದ್ರ ಮೋಹನ್ ಕಾರ್ಯಕ್ರಮ ನಿರೂಪಿಸಿದರು, ಜಿಲ್ಲಾ ಸಂಚಾಲಕಿ ರೀನಾ ಪ್ರಕಾಶ್ ವಂದಿಸಿದರು.