ಮಡಿಕೇರಿ, ಸೆ. 27: ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಪುಲ ಅವಕಾಶಗಳಿದ್ದು, ಪರಿಸರ ಪೂರಕವಾದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದ್ದಾರೆ.
ಕೊಡಗು ಜಿಲ್ಲಾಡಳಿತ, ಜಿ.ಪಂ. ಹಾಗೂ ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ ಅನೇಕ ದೇಶಗಳು ಇಂದು ಪ್ರವಾಸೋದ್ಯಮ ಕ್ಷೇತ್ರದಿಂದ ದೊರೆಯುವ ಆದಾಯದಿಂದಲೇ ಆರ್ಥಿಕ ಸಬಲತೆಯನ್ನು ಸಾಧಿಸಿದೆ. ಕೊಡಗಿನಲ್ಲಿಯೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿದ್ದು, ಹೋಂ ಸ್ಟೇ, ಹೊಟೇಲ್ ಹಾಗೂ ರೆಸಾರ್ಟ್ ಸ್ಥಾಪನೆಗೆ ಹೆಚ್ಚಿನ ಅವಕಾಶಗಳಿವೆ. ಹೋಂ ಸ್ಟೇ, ಹೊಟೇಲ್‍ಗಳನ್ನು ನೋಂದಾಯಿಸಿ ಕೊಂಡು ಸಂಘಟಿತರಾಗಿ ತಮಗೊಂದು ಕಚೇರಿಯನ್ನು ತೆರೆಯುವ ಅಗತ್ಯವಿದೆ. ಆ ಮೂಲಕ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಮೂಲ ಸೌಲಭ್ಯಗಳು ಹಾಗೂ ಮಾಹಿತಿಯನ್ನು ಒದಗಿಸಿಕೊಡಲು ಪ್ರಯತ್ನಿಸಬೇಕು. ಇದರಿಂದ ಕೊಡಗಿನ ಉತ್ಪನ್ನಗಳಿಗೂ ಬೇಡಿಕೆ ಹೆಚ್ಚಾಗಿ ಆದಾಯವೂ ದೊರೆಯಲು ಸಹಕಾರಿಯಾಗಲಿದೆ ಎಂದರು.
ಜಿಲ್ಲೆಯಲ್ಲಿ 5000ಕ್ಕೂ ಅಧಿಕ ಹೋಂ ಸ್ಟೇಗಳಿವೆ. ಆದರೆ ಕೇವಲ 400 ಹೋಂ ಸ್ಟೇಗಳು ಮಾತ್ರ ನೋಂದಾಯಿತಗೊಂಡಿವೆ ಎಂದು ವಿಷಾದಿಸಿದರು. ಪರಿಸರದ ಉಳಿವಿಗೂ ಆದ್ಯತೆ ನೀಡುವ ಮೂಲಕ ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಿ.ಪಂ. ನಿಂದ ಕಸದ ಬುಟ್ಟಿಯಿಡುವ ವ್ಯವಸ್ಥೆ ಕಲ್ಪಿಸುವಂತೆ ವೇದಿಕೆಯಲ್ಲಿದ್ದ ಜಿ.ಪಂ. ಸಿಇಓ ಚಾರುಲತಾ ಸೋಮಲ್ ಅವರಿಗೆ ತಿಳಿಸಿದರು.
ಕೊಡಗಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಸಾಧ್ಯ. ಪ್ರವಾಸೋದ್ಯಮ ಬೆಳವಣಿಗೆ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಬ್ಸಿಡಿ ಕಲ್ಪಿಸುವ
(ಮೊದಲ ಪುಟದಿಂದ) ನಿಟ್ಟಿನಲ್ಲಿ ಸರ್ಕಾರದೊಂದಿಗೆ ವ್ಯವಹರಿಸುವದಾಗಿ ಅಪ್ಪಚ್ಚುರಂಜನ್ ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ, ನೈಜ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಮೂಲಕ ಕ್ಷೇತ್ರದಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಕ್ರಮಕೈಗೊಳ್ಳ ವಂತೆ ಇಲಾಖಾಧಿಕಾರಿ ಗಳಿಗೆ ಸೂಚನೆ ನೀಡಿದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಗಮನ ಹರಿಸಬೇಕಾಗಿದೆ. ಹೋಂ ಸ್ಟೇಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಸಂಬಂಧಿಸಿದ ಇಲಾಖೆಗಳು ಗಮನ ಹರಿಸಬೇಕಾಗಿದೆ. ಇತ್ತೀಚೆಗೆ ನಡೆದ ಅಹಿತಕರ ಘಟನೆಗಳಿಂದ ಜಿಲ್ಲೆಗೆ ಕಳಂಕ ಬಂದಿದ್ದು, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರ ಅಗತ್ಯ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಸಾಂಸ್ಕøತಿಕ ಪರಂಪರೆ ಹಾಗೂ ಮೌಲ್ಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಯೋಜಿಸಲಾಗುತ್ತಿದೆ. ಕೊಡಗು ಪ್ರಾಕೃತಿಕ ಸೌಂದರ್ಯ ಹೊಂದಿದೆ. ಪ್ರಕೃತಿಗೆ ತೊಂದರೆಯಾಗದಂತೆ ಅಭಿವೃದ್ಧಿ ಅಗತ್ಯವಿದೆ. ಬಹುಮಹಡಿ ಹೊಟೇಲ್ ಹಾಗೂ ಕಟ್ಟಡಗಳಿಂದ ಪರಿಸರಕ್ಕೆ ಧಕ್ಕೆಯಾಗಲಿದೆ. ಪ್ರವಾಸಿ ಗರಾಗಿ ಜಿಲ್ಲೆಗೆ ಆಗಮಿಸು ವದನ್ನು ಇಲ್ಲೇ ಉಳಿಸಲು ಯತ್ನಿಸುವದು ಸರಿಯಲ್ಲ. ಈ ಬಗ್ಗೆ ಜನತೆ ಜಾಗ್ರತೆ ವಹಿಸಬೇಕಾಗಿದೆ ಎಂದು ಹೇಳಿದರು.
ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತಗೀತೆ ಹಾಡಿದರೆ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಗನ್ನಾಥ್ ಸ್ವಾಗತಿಸಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ. ಸುರೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಳಿಕ ನಡೆದ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಾರುಲತಾ ಸೋಮಲ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿಲ್ಲಾ ಟೂರ್ಸ್ ಅಂಡ್ ಟ್ರಾವೆಲ್ಸ್ ಅಸೋಸಿ ಯೇಷನ್‍ನ ಅಧ್ಯಕ್ಷ ಚೆಯ್ಯಂಡ ಸತ್ಯ ಗಣಪತಿ, ಪ್ರಮುಖರಾದ ಮೋಂತಿ ಗಣೇಶ್. ಫೀಲ್ಡ್ ಮಾರ್ಷಲ್. ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಟಿ.ಡಿ.ತಿಮ್ಮಯ್ಯ, ಕ್ಲಬ್ ಮಹೀಂದ್ರಾ ರೆಸಾರ್ಟ್‍ನ ಸೀನಿಯರ್ ಮ್ಯಾನೇಜರ್ ಎಂ.ಕಾರ್ತಿಕೇಯನ್ ವಿವಿಧ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೂ ಮೊದಲು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ರಾಜರ ಗದ್ದುಗೆ ಪ್ರವಾಸಿ ತಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಡಾ.ನಂಜುಂಡೇ ಗೌಡ, ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ , ಪೌರ ಕಾರ್ಮಿಕರು, ನಗರದ ಜೂನಿಯರ್ ಕಾಲೇಜು, ಸರ್ಕಾರಿ ಪ್ರ.ದ.ಕಾಲೇಜು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ವಿದ್ಯಾರ್ಥಿಗಳು, ಕ್ಲಬ್ ಮಹೀಂದ್ರಾ ಸಂಸ್ಥೆ, ಗ್ರೀನ್ ಸಿಟಿ ಫಾರಂ, ಪ್ರವಾಸಿ ಮಿತ್ರ ಉದ್ಯೋಗಿಗಳು ಪಾಲ್ಗೊಂಡಿದ್ದರು.