ಮಡಿಕೇರಿ, ಡಿ. 1: ಕೊಡಗು ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಂದಿಯನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆದು ಸೂಕ್ತ ಪರಿಹಾರ ಸೂಚಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರೂ ಹಾಗೂ ಪರಿಶಿಷ್ಟ ಜಾತಿ ವಿಭಾಗದ ಕೊಡಗು ಜಿಲ್ಲಾ ಉಸ್ತುವಾರಿ ವಹಿಸಿರುವ ಬಿ.ಎನ್. ನಟರಾಜ್ ಭರವಸೆ ನೀಡಿದ್ದಾರೆ.ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ವಿ.ಕೆ.ಸತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಅವರು ಪದಾಧಿಕಾರಿಗಳು ಹಾಗೂ ಕಾರ್ಯ ಕರ್ತರೊಂದಿಗೆ ಚರ್ಚಿಸಿದರು.
ವಿವಿಧ ಬೇಡಿಕೆಗಳ ಬಗ್ಗೆ ಮಾಹಿತಿ ಪಡೆದ ಬಿ.ಎನ್.ನಟರಾಜ್ ಕಾಂಗ್ರೆಸ್ ಪಕ್ಷ ಎಂದೆಂದಿಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಏಳಿಗೆಗಾಗಿ ಶ್ರಮಿಸಲಿದ್ದು, ದುರ್ಬಲ ವರ್ಗದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರ ಗಮನ ಸೆಳೆಯುವದಾಗಿ ತಿಳಿಸಿದರು.
ಪಕ್ಷದ ಪ್ರಮುಖರು ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಕೆಲವು ಯೋಜನೆಗಳ ಬಗ್ಗೆ ನಟರಾಜ್ ಅವರ ಗಮನ ಸೆಳೆದರು. ವೀರಾಜಪೇಟೆಯಲ್ಲಿ ಡಾ. ಅಂಬೇಡ್ಕರ್ ಭವನದ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು, ಮಡಿಕೇರಿಯಲ್ಲಿ ಭವನ ನಿರ್ಮಾಣಕ್ಕಾಗಿ ಜಾಗ ಮಂಜೂರು ಮಾಡಬೇಕು, ಅಕ್ರಮ ಸಕ್ರಮ ಯೋಜನೆಯಡಿ ದಲಿತರ ಅರ್ಜಿಗಳ ವಿಲೇವಾರಿಯಲ್ಲಿ ತಾರತಮ್ಯ ತೋರುತ್ತಿದ್ದು, ಅನ್ಯಾಯವನ್ನು ಸರಿ ಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಂದಿಯ ಜನಸಂಖ್ಯೆಗನುಗುಣವಾಗಿ ಅನುದಾನ ಬಿಡುಗಡೆಯಾಗದೇ ಇರುವದರಿಂದ ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯುತ್ತಿಲ್ಲ. ಆದ್ದರಿಂದ ಜನಸಂಖ್ಯೆಗನುಗುಣವಾಗಿ ನಿಗಮಕ್ಕೆ ಗುರಿಯನ್ನು ನಿಗದಿ ಮಾಡಬೇಕು, ಜಿಲ್ಲಾ ದೌರ್ಜನ್ಯ ಸಮಿತಿಯನ್ನು ಪುನರ್ ರಚಿಸಬೇಕು ಎಂದು ಸಭೆಯಲ್ಲಿದ್ದ ಪ್ರಮುಖರು ಒತ್ತಾಯಿಸಿದರು.
ಈ ಬೇಡಿಕೆಗಳ ಬಗ್ಗೆ ಜಿಲ್ಲಾಡಳಿತದಿಂದ
(ಮೂರನೇ ಪುಟದಿಂದ) ಸೂಕ್ತ ಸ್ಪಂದನ ದೊರೆಯದೆ ಇರುವದರಿಂದ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಲು ಸಭೆ ನಿರ್ಣಯ ಕೈಗೊಂಡಿತು.
ಸಭೆಗೆ ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವೆ ಸುಮಾವಸಂತ್, ಜಿಲ್ಲಾ ಕಾಂಗ್ರೆಸ್ ಸದಸ್ಯ ಸಣ್ಣಯ್ಯ ಹಾಗೂ ಪುಟ್ಟಲಕ್ಷ್ಮಿ ಆಗಮಿಸಿದ್ದರು.
ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಎಲ್ಲಾ ಬ್ಲಾಕ್, ಪಟ್ಟಣ, ಹೋಬಳಿ, ನಗರ ಸೇರಿದಂತೆ ಎಲ್ಲಾ ಘಟಕಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.