ಪಾಲಿಬೆಟ್ಟ, ಜು. 23: ಪಾಲಿಬೆಟ್ಟ ಗ್ರಾಮ ಪಂಚಾಯಿತಿಯ 2016-17ನೇ ಸಾಲಿನ ಮೊದಲನೇ ಹಂತದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ ನೋಡಲ್ ಅಧಿಕಾರಿ ಡಾ. ನವೀನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಗ್ರಾಮ ಸಭೆಯಲ್ಲಿ ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧಕ ಎಂ.ಸಿ. ಸತೀಶ್ 2015-16ನೇ ಸಾಲಿನಲ್ಲಿ ಕೈಗೊಳ್ಳಲಾದ 10 ಕಾಮಗಾರಿಗಳ ಪೈಕಿ 6 ಸಮುದಾಯ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ 4 ಕಾಮಗಾರಿಗಳು ವೈಯಕ್ತಿಕ ಕಾಮಗಾರಿಯಾಗಿದ್ದು, ಪ್ರಗತಿ ಹಂತದಲ್ಲಿರುವದನ್ನು ಗ್ರಾಮ ಸಭೆಯ ಗಮನಕ್ಕೆ ತಂದರು. ಸಾಮಾಜಿಕ ಪರಿಶೋಧನೆ ತಂಡದ ವರದಿಯನ್ನು ಮಂಡಿಸಿದರು. ಪೂರ್ಣಗೊಂಡಿರುವ ಎಲ್ಲಾ ಕಾಮಗಾರಿಗಳು ಜನೋಪಯೋಗಿ ಕಾಮಗಾರಿಯಾಗಿದ್ದು, ಯಾವದೇ ಆಕ್ಷೇಪಣೆ ಇರುವದಿಲ್ಲ ಎಂದು ಮಾಜಿ ಗ್ರಾ.ಪಂ. ಅಧ್ಯಕ್ಷ ಕೆ.ಎನ್. ವಸಂತ ತಿಳಿಸಿದರು.

ರಾಜ್ಯ ಸಮನ್ವಯಾಧಿಕಾರಿ ಬಿ. ಲೋಚನಾ, ಈ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ಧಿ ಸಾಧಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ವಿಜು ಸುಬ್ರಮಣಿ, ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ, ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯೊಂದಿಗೆ ನಿರಂತರ ಸಂಪರ್ಕವಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಎ.ಎ. ಅಬ್ದುಲ್ಲಾ ವಂದಿಸಿದರು.