ಮಡಿಕೇರಿ, ಡಿ. 8: ಸುಮಾರು 800 ವರ್ಷಗಳ ಇತಿಹಾಸವಿದ್ದು, ಹೊಯ್ಸಳ ಶೈಲಿಯಲ್ಲಿ ನಿರ್ಮಿತವಾಗಿ ನಂತರ ಪರಕೀಯರ ಆಕ್ರಮಣದಿಂದ ನಿರ್ನಾಮಗೊಂಡಿದ್ದ ದೇವಾಲಯ ವೊಂದು ಇದೀಗ ಪುನರ್ ನಿರ್ಮಾಣ ಗೊಂಡಿದೆ. ಮೂರ್ನಾಡು ಕಿಗ್ಗಾಲುವಿನ ಶ್ರೀ ಭಗವತಿ ದೇವಾಲಯ ಸುಮಾರು 230 ವರ್ಷಗಳ ಹಿಂದೆ ಆಕ್ರಮಣಕ್ಕೆ ತುತ್ತಾಗಿ ನಿರ್ನಾಮಗೊಂಡಿದ್ದ ವಿಚಾರ ಅಷ್ಠ ಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿದ್ದು, ಕಿಗ್ಗಾಲು ಗ್ರಾಮಸ್ಥರು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಹಲವಾರು ವರ್ಷಗಳಿಂದ ಪ್ರಯತ್ನ ನಡೆಸಿದ್ದಾರೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಈ ದೇವಾಲಯದ ದೇವತಕ್ಕರು ಐಚೆಟ್ಟಿರ ಕುಟುಂಬ ದವರಾಗಿರಬೇಕೆಂದು ತಿಳಿದು ಬಂದಿದೆ.

ಇದೀಗ 2016ರಲ್ಲಿ ವಾಸ್ತು ಶಿಲ್ಪಿ ಶ್ರೀ ವೈದಿಕ ವಿದ್ಯಾವಿಶಾರದ ಶಂಕರಾಚಾರ್ಯ (ರಾಜ್ಯ ಪ್ರಶಸ್ತಿ ವಿಜೇತರು) ಮಾಲೂರು ಅವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕೆಲಸ ನಡೆಸಲಾಗಿದೆ. ರೂ. 7 ಲಕ್ಷ ವೆಚ್ಚದ ಭಗವತಿ ಗರ್ಭಗುಡಿ, ರೂ. 4 ಲಕ್ಷ ವೆಚ್ಚದ ತೀರ್ಥಮಂಟಪ, ರೂ. 3 ಲಕ್ಷ ವೆಚ್ಚದ ಶ್ರೀ ಗಣಪತಿ ಗುಡಿ ಪ್ರಾಂಗಣ, ಸಭಾಂಗಣ, ಮೆಟ್ಟಿಲು ಹಾಗೂ ಇನ್ನಿತರ ಕಾಮಗಾರಿ ವೆಚ್ಚ ರೂ. 3 ಲಕ್ಷ ಸೇರಿದಂತೆ ಒಟ್ಟು 17 ಲಕ್ಷ ವೆಚ್ಚವನ್ನು ಐಚೆಟ್ಟಿರ ಗೋಪಾಲ್, ವಿಮಲಾಗೋಪಾಲ್ ಮತ್ತು ಮಕ್ಕಳು ವಹಿಸಿಕೊಂಡಿದ್ದಾರೆ.

ಮೂರ್ತಿಗಳು (1.5 ಲಕ್ಷ) ಕಲಶ, ಪ್ರಭಾವಳಿ ನಿತ್ಯಪೂಜೆ ಸಾಮಗ್ರಿ ಹಾಗೂ ಪ್ರತಿಷ್ಠಾಪನೆಯ ರೂ. 4 ಲಕ್ಷ ವೆಚ್ಚವನ್ನು ದಿನಮಣಿ ಎಸ್.ಎಸ್. (1.50 ಲಕ್ಷ) ಪಡಿಞರಂಡ ಪೂಣಚ್ಚ (1 ಲಕ್ಷ), ಬೇರೆರ ಅಯ್ಯಣ್ಣ (50 ಸಾವಿರ), ಅಶೋಕ ಸದಾಶಿವ (50 ಸಾವಿರ), ಅಮ್ಮಾಟಂಡ ಪ್ರಥ್ವಿ (20 ಸಾವಿರ), ಅಮ್ಮಾಟಂಡ ತಿಮ್ಮಯ್ಯ (15 ಸಾವಿರ), ಅಮ್ಮಾಟಂಡ ಕಾರ್ಯಪ್ಪ, ಪಡಿಞರಂಡ ಶಂಭು, ಕೂತಂಡ ವಾಣಿ (ತಲಾ ರೂ. 10 ಸಾವಿರ) ಹಾಗೂ ಸಮಸ್ಥ ಗ್ರಾಮಸ್ಥರು ವಹಿಸಲಿದ್ದಾರೆ. 2016ರ ಜನವರಿಯಿಂದ ಪ್ರಾರಂಭಗೊಂಡ ಮೊದಲನೆಯ ಹಂತದ ಕಾಮಗಾರಿ 10 ತಿಂಗಳ ಅವಧಿಯಲ್ಲಿ ಪೂರ್ಣಗೊಂಡಿದೆ.

ಎರಡನೇ ಹಂತದಲ್ಲಿ ಪವಳಿ, ತಡೆಗೋಡೆ, ಬಾವಿ ಹಾಗೂ ಸಮುದಾಯ ಭವನವನ್ನು ಅಂದಾಜು ರೂ. 3 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಆಡಳಿತ ಮಂಡಳಿಯವರು ತೀರ್ಮಾನಿಸಿದ್ದಾರೆ.

ತಾ. 18 ರಿಂದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ನೂತನವಾಗಿ ನಿರ್ಮಾಣ ಗೊಂಡಿರುವ ದೇವಾಲಯದ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ತಾ. 18 ರಿಂದ ತಾ. 21 ರವರೆಗೆ ಜರುಗಲಿದೆ. ತಾ. 18 ರಂದು ಅಪರಾಹ್ನ 3 ಗಂಟೆಯಿಂದ ವಿವಿಧ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿದ್ದು ತಾ. 20 ರಂದು ಬೆಳಿಗ್ಗೆ 10.10ರ ನಂತರ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ವೇದಮೂರ್ತಿ ಹರೀಶ್ ಭಟ್ಟ ಅಲಂಗಾರೂ ನೇತೃತ್ವದಲ್ಲಿ ಶ್ರೀ ಗಣಪತಿ ಮತ್ತು ಶ್ರೀ ಭಗವತಿ ದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ.

ತಾ. 18 ರಂದು ರಾತ್ರಿ, ತಾ. 19 ರಂದು ಮಧ್ಯಾಹ್ನ ಹಾಗೂ ರಾತ್ರಿ ಹಾಗೂ ತಾ. 20 ಹಾಗೂ ತಾ. 21 ರಂದು ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ. ಭಗವದ್ಭಕ್ತರು ತನು, ಮನ, ಧನದಿಂದ ಸಹಕರಿಸುವಂತೆ ಆಡಳಿತ ಮಂಡಳಿ ಅಧ್ಯಕ್ಷ ಐಚೆಟ್ಟಿರ ಗೋಪಿ ಹಾಗೂ ಕಾರ್ಯದರ್ಶಿ ಅಮ್ಮಾಟಂಡ ತಮ್ಮಯ್ಯ ವಿನಂತಿಸಿದ್ದಾರೆ.

ಸಹಾಯಹಸ್ತ ನೀಡುವವರು ಶ್ರೀ ಭಗವತಿ ದೇವಾಲಯ ಜೀರ್ಣೋದ್ಧಾರ ಸಮಿತಿಯ ಖಾತೆ ಸಂಖ್ಯೆ (10708081041, IಈSಅ ಅoಜe SಃIಓ 0007910 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂರ್ನಾಡು ಶಾಖೆ)ಗೆ ಹಣ ಸಂದಾಯ ಮಾಡಬಹುದಾಗಿದೆ.