ಸೋಮವಾರಪೇಟೆ, ಡಿ. 16: ಸ್ಥಳೀಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಇತರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಟ್ಟಣ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿದೆ. ಸದಸ್ಯರನ್ನು ಕಡೆಗಣಿಸುತ್ತಿರುವದನ್ನು ಪ್ರತಿಭಟಿಸಿ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದೇವೆ ಎಂದು ಪ.ಪಂ. ಕಾಂಗ್ರೆಸ್ ಸದಸ್ಯರು ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಕೆ.ಎ. ಆದಂ, ಪ.ಪಂ. ಸಾಮಾನ್ಯ ಸಭೆಗಳಿಗೆ 7 ದಿನ ಮುಂಚಿತವಾಗಿ ಸದಸ್ಯರಿಗೆ ನೋಟೀಸ್ ಕೊಡಬೇಕಿದ್ದರೂ ಅಧ್ಯಕ್ಷರು ಏಕಚಕ್ರಾಧಿಪತಿಯಂತೆ ವರ್ತಿಸುವ ಮೂಲಕ 6 ದಿನಗಳಿರುವಾಗ ನೋಟೀಸ್ ನೀಡಿದ್ದಾರೆ. ಈ ಕಾರಣದಿಂದ ನಾವುಗಳು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸಾಮಾನ್ಯ ಸಭೆಯ ನೋಟೀಸ್‍ನ್ನು ಸಂಜೆ 7 ಗಂಟೆಗೆ ಸದಸ್ಯರಿಗೆ ತಲುಪಿಸುವ ಯತ್ನ ನಡೆಸಿದ್ದಾರೆ. ಕಚೇರಿ ಅವಧಿ ಮೀರಿ ನೋಟೀಸ್ ಕಳುಹಿಸಿದ್ದಾರೆ. ಇದರಿಂದಾಗಿ ಇಂದಿನ ಸಭೆ ಕೋರಂ ಕೊರತೆಯಿಂದ ಮುಂದೂಡಲ್ಪಟ್ಟಿದೆ. ಅಧ್ಯಕ್ಷರು ಇನ್ನಾದರೂ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಶುಕ್ರವಾರ ತಾನು ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಹೋಗಬೇಕಿದೆ. ಈ ದಿನದಂದು ಸಭೆ ಆಯೋಜಿಸದಂತೆ ಮುಖ್ಯಾಧಿಕಾರಿಗೆ ತಿಳಿಸಿದ್ದರೂ ಅಧ್ಯಕ್ಷರು, ಅಧಿಕಾರಿಯ ಮೇಲೆ ಒತ್ತಡ ತಂದು ತಮಗೆ ತೊಂದರೆ ಕೊಡುತ್ತಿದ್ದಾರೆ. ಅಧ್ಯಕ್ಷರು ಪ್ರವಾಸಕ್ಕೆ ತೆರಳಿದ ಸಂದರ್ಭ ಉಪಾಧ್ಯಕ್ಷರಿಗೆ ಪ್ರಭಾರವಾಗಿ ಅಧಿಕಾರ ವಹಿಸಿಕೊಡಬೇಕಿದ್ದರೂ, ಇದನ್ನು ಪಾಲಿಸುತ್ತಿಲ್ಲ ಎಂದು ಆದಂ ದೂರಿದರು.

ನಗರದ ಕ್ಲಬ್‍ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಳೆದ ಸಭೆಯಲ್ಲೇ ನಿರ್ಣಯವಾಗಿದ್ದರೂ ಇದುವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ. ಹಲವರು ವರ್ತಕರು ವ್ಯಾಪಾರ ಪರವಾನಗಿ ಪಡೆದಿಲ್ಲ. ಈ ಬಗ್ಗೆ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದರೂ ಪ್ರಯೋಜನವಾಗಿಲ್ಲ. ಪರಭಾರೆ ಮಳಿಗೆಗಳ ಬಗ್ಗೆಯೂ ಯಾವದೇ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ಗೋಷ್ಠಿಯಲ್ಲಿದ್ದ ಮತ್ತೋರ್ವ ಸದಸ್ಯೆ ಶೀಲಾ ಡಿಸೋಜ ಆರೋಪಿಸಿದರು.

ಪ.ಪಂ. ವತಿಯಿಂದ ನಿರ್ಮಿಸಲಾಗಿರುವ ಹಲವಷ್ಟು ಮಳಿಗೆಗಳನ್ನು ಇನ್ನೂ ಹರಾಜು ಮಾಡಿಲ್ಲ. ಇದರಿಂದ ಪ.ಪಂ.ಗೆ ಲಕ್ಷಾಂತರ ರೂಪಾಯಿ ಆದಾಯ ಸೋರಿಕೆಯಾಗುತ್ತಿದೆ. ಕಚೇರಿಯಲ್ಲಿ ಕಂದಾಯ ಪಾವತಿಸಲು ಸೂಕ್ತ ಸೌಲಭ್ಯ ಇಲ್ಲ. ಆನ್‍ಲೈನ್ ಸೌಲಭ್ಯವಿದ್ದರೂ ಸರಿಯಾಗಿ ಬಳಸಿ ಕೊಳ್ಳುತ್ತಿಲ್ಲ ಎಂದು ನಾಮನಿರ್ದೇಶಿತ ಸದಸ್ಯ ಇಂದ್ರೇಶ್ ದೂರಿದರು.

ಅಧ್ಯಕ್ಷರು ಇನ್ನಾದರೂ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ.ಪಂ. ಅಭಿವೃದ್ಧಿಗೆ ಮುಂದಾಗ ಬೇಕೆಂದು ಗೋಷ್ಠಿಯಲ್ಲಿದ್ದ ಸದಸ್ಯೆ ಮೀನಾಕುಮಾರಿ, ನಾಮನಿರ್ದೇಶಿತ ಸದಸ್ಯರಾದ ಉದಯಶಂಕರ್, ನಾಗರಾಜು ಒತ್ತಾಯಿಸಿದರು.