ಮಡಿಕೇರಿ, ಜು. 27 : ಪತ್ರಿಕಾ ದಿನಾಚರಣೆ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಿಯುಸಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ಬುಧವಾರ ನಡೆಯಿತು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ‘ಪ್ರವಾಸೋದ್ಯಮ ಬೆಳವಣಿಗೆ ಕೊಡಗಿಗೆ ಪೂರಕ/ಮಾರಕ’, ‘ಮಳೆಗಾಲದಲ್ಲಿ ಕೊಡಗಿನ ಜನಜೀವನ’, ‘ಜಿಲ್ಲೆಯಲ್ಲಿ ಕೃಷಿ’ ಈ ಮೂರು ವಿಷಯದಲ್ಲಿ ಒಂದು ವಿಷಯದ ಬಗ್ಗೆ ಪ್ರಬಂಧ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. 36 ಮಂದಿ ತಮ್ಮ ಆಯ್ಕೆಯ ವಿಷಯದ ಬಗ್ಗೆ ಪ್ರಬಂಧ ಬರೆದರು.
ಕಾರ್ಯಕ್ರಮವನ್ನು ಐಟಿಡಿಪಿ ಜಿಲ್ಲಾ ಅಧಿಕಾರಿ ಕೆ.ಎಚ್. ಸತೀಶ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಮನುಷ್ಯನ ಜೀವನದಲ್ಲಿ ವಿದ್ಯಾರ್ಥಿ ಜೀವನ ಮರೆಯಲಾಗದ ಘಟ್ಟ. ಯಾವದೇ ಸ್ಪರ್ಧೆ ಇದ್ದರೂ ಹೆಮ್ಮೆಯಿಂದ ಪಾಲ್ಗೊಳ್ಳಬೇಕು. ಪ್ರತಿಯೊಂದು ಸ್ಪರ್ಧಾ ಚಟುವಟಿಕೆ ತಮ್ಮೊಳಗಿನ ಚಾತುರ್ಯತೆ ವ್ಯಕ್ತಪಡಿಸಲು ಇರುವ ಒಳ್ಳೆಯ ವೇದಿಕೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪತ್ರಕರ್ತರ ಸಂಘದ ಉಪಾಧ್ಯಕ್ಷ ಜಿ.ವಿ. ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯ ಅಧ್ಯಯನಕ್ಕೆ ಮಾತ್ರ ಸೀಮಿತವಾಗಬಾರದು. ಸಾಹಿತ್ಯ, ಕ್ರೀಡೆ, ರಾಜಕೀಯ ಮತ್ತಿತರ ವಿಷಯಗಳ ಅಧ್ಯಯನದ ಕಡೆಗೂ ಒಲವು ಮೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಪಠ್ಯಕ್ರಮದ ಜತೆಗೆ ಇತರ ಸಾಹಿತ್ಯ ಪ್ರಕಾರದಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಶಾಲಾ ಕಾಲೇಜುಗಳಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ರಮೇಶ್, ಕಾಲೇಜು ಪ್ರಾಂಶುಪಾಲೆ ಜೆನ್ನಿಫರ್ ಲೋಲಿಟ, ಸಹಾಯಕ ಪ್ರಾಧ್ಯಾಪಕ ಕೆ.ಸಿ. ದಯಾನಂದ, ಉಪನ್ಯಾಸಕಿ ನಮಿತಾ ಇದ್ದರು.
ಪ್ರಶಂಸನಾ ಪತ್ರ ವಿತರಣೆ
ಪ್ರಬಂಧ ಸ್ಪರ್ಧೆ ಮುಗಿದ ಬಳಿಕ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಬರೆಯುವ ಹವ್ಯಾಸ ಬಹಳ ಒಳ್ಳೆಯದು. ಬದುಕಿನಲ್ಲಿ ಎದುರಾಗುವ ಹಲವು ಸವಾಲುಗಳನ್ನು ಕಠಿಣ ಪರಿಶ್ರಮ, ಪ್ರಾಮಾಣಿಕತೆಯಿಂದ ಎದುರಿಸಬೇಕೆಂದು ಸಲಹೆ ಮಾಡಿದರು. ಸ್ಪರ್ಧಾ ವಿಜೇತರಿಗೆ ತಾ. 31ರಂದು ಪತ್ರಿಕಾ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವದೆಂದು ತಿಳಿಸಿದರು.