ಕುಶಾಲನಗರ, ಜು 28: ವಸ್ತುನಿಷ್ಠ ವರದಿಯೊಂದಿಗೆ ವಾಸ್ತವಾಂಶಕ್ಕ್ಕೆ ಪತ್ರಕರ್ತರು ಹೆಚ್ಚಿನ ಗಮನಹರಿಸ ಬೇಕಾಗಿದೆ ಎಂದು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಕರೆ ನೀಡಿದರು.
ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸಂಘದ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಪ್ರಾಮಾಣಿಕತೆ ಮೈಗೂಡಿಸಿಕೊಂಡು ಯಾವದೇ ಆಮಿಷಗಳಿಗೆ ಬಲಿಯಾಗದೆ ಕಾರ್ಯ ನಿರ್ವಹಿಸಬೇಕಿದೆ. ಸಮಾಜದಲ್ಲಿ ಗೊಂದಲ ಸೃಷ್ಟಿಸುವ ವರದಿಗಳನ್ನು ಬದಿಗೊತ್ತಿ ಸತ್ಯಾಂಶವನ್ನು ತೆರೆದಿಡುವಂತಹ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಬೇಕಿದೆ ಎಂದರು. ಪತ್ರಕರ್ತರು ವ್ಯಕ್ತಿ, ಜಾತಿ, ಧರ್ಮಕ್ಕೆ ಮಾತ್ರ ಸೀಮಿತವಾಗದೆ ಸಮಾಜದ ಕೈಗನ್ನಡಿಯಂತೆÉ ಕಾರ್ಯ ನಿರ್ವಹಿಸಬೇಕೆಂದು ಕರೆ ನೀಡಿದರು.
ಕಚೇರಿಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಂ.ಎಂ.ಚರಣ್ ಮಾತನಾಡಿ, ಮಾಧ್ಯಮಗಳು ಸಮಾಜದ ಆಗುಹೋಗುಗಳ ಬಗ್ಗೆ ನಿರಂತರವಾಗಿ ಬಿಂಬಿಸುವ ಕಾರ್ಯದ ನಡುವೆ ಕೆಲವು ವಿಚಾರಗಳನ್ನು ಅತಿಯಾಗಿ ವೈಭವೀಕರಿಸುತ್ತಿರುವದು ವಿಷಾದನೀಯ ಎಂದರು. ಗುಣಾತ್ಮಕ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಅನೂಪ್ ಮಾದಪ್ಪ ಮಾತನಾಡಿ, ಸಮಾಜದ ಹಿತದೃಷ್ಟಿ ಯಿಂದ ಅತಿಸೂಕ್ಷ್ಮ ವಿಚಾರಗಳನ್ನು ಪ್ರಚೋದನಕಾರಿಯಾಗಿ ಬಿಂಬಿಸದೆ ಸಮುದಾಯಗಳ ನಡುವೆ ಬಾಂಧವ್ಯ ವೃದ್ಧಿಸುವ ರೀತಿಯ ವಿಚಾರಗಳಿಗೆ ಆದ್ಯತೆ ನೀಡಬೇಕಿದೆ ಎಂದರು.
ಸೋಮವಾರಪೇಟೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕವನ್ ಕಾರ್ಯಪ್ಪ, ಕುಶಾಲನಗರ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರು ಹಾಗೂ ಸದಸ್ಯ ಡಿ.ಕೆ.ತಿಮ್ಮಪ್ಪ, ನಿವೃತ್ತ ಶಿಕ್ಷಕ ಎಂ.ಹೆಚ್.ನಜೀರ್ ಅಹಮ್ಮದ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ಬಿ.ಎಸ್.ಲೋಕೇಶ್ ಸಾಗರ್, ಜನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಎಸ್ಎಸ್ಎಲ್ಸಿ ಯಲ್ಲಿ ಅತಿ ಹೆಚ್ಚಿನ ಅಂಕಗಳಿಸಿ ಸಾಧನೆಗೈದ ದೀಪಿಕಾಮೂರ್ತಿ ಪರವಾಗಿ ಅವರ ತಾಯಿ ವೇದಾವತಿ ಮೂರ್ತಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಬುಧವಾರ ಹೃದಯಾಘಾತದಿಂದ ನಿಧನರಾದ ಕುಶಾಲನಗರ ರೋಟರಿ ಅಧ್ಯಕ್ಷ ಸಿ.ಎ.ಮುದ್ದಪ್ಪ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀಧರ್, ಬಿಜೆಪಿ ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ನಿಡ್ಯಮಲೆ ದಿನೇಶ್, ವೈಶಾಖ್, ಶರಣ ಸಾಹಿತ್ಯ ಪರಿಷತ್ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪಿ.ಮಹದೇವಪ್ಪ, ಕರವೇ ಜಿಲ್ಲಾಧ್ಯಕ್ಷ ಪಿ.ಕೆ.ಜಗದೀಶ್, ನಗರಾಧ್ಯಕ್ಷ ಬಿ.ಜೆ.ಅಣ್ಣಯ್ಯ, ಪ್ರೆಸ್ಕ್ಲಬ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ.ರಘು, ಪತ್ರಕರ್ತರ ಸಂಘದ ಸದಸ್ಯರುಗಳು ಇದ್ದರು.
ಸಂಘದ ಸದಸ್ಯರಾದ ಸಬಲಂ ಭೋಜಣ್ಣ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು, ಲೋಕೇಶ್ ಸಾಗರ್ ಪ್ರಾರ್ಥಿಸಿದರು, ಕುಡೆಕಲ್ ಗಣೇಶ್ ಸ್ವಾಗತಿಸಿದರು, ಕೆ.ಕೆ.ನಾಗರಾಜಶೆಟ್ಟಿ ವಂದಿಸಿದರು.