ಸಿದ್ದಾಪುರ, ನ. 3: ಕುಡಿದ ಮತ್ತಿನಲ್ಲಿ ಪತಿ ಪತ್ನಿಯರ ನಡುವೆ ಹೊಡೆದಾಟ ನಡೆದಿದ್ದು, ಪತಿ ತನ್ನ ಪತ್ನಿಯನ್ನು ದಾರುಣವಾಗಿ ಕೊಲೆ ಮಾಡಿದ ಘಟನೆ ಸಮೀಪದ ಹೊಸೂರು ಬೆಟ್ಟಗೇರಿಯಲ್ಲಿ ನಡೆದಿದೆ.

ಅಲ್ಲಿನ ನಿವಾಸಿ ಮೊಳ್ಳೆರ ಸುಭಾಷ್ ಎಂಬವರ ತೋಟದ ಲೈನ್‍ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕ ಪಣಿಯರವರ ಚಿಣ್ಣಪ್ಪ (45) ಆತನ ಪತ್ನಿ ಸೋನಿ (32) ಇವರಿಬ್ಬರ ನಡುವೆ ಕುಡಿದ ಅಮಲಿನಲ್ಲಿ ಬುಧವಾರ ರಾತ್ರಿ ಪರಸ್ಪರ ಹೊಡೆದಾಟ ನಡೆದ ಬಳಿಕ ಪತಿ ಚಿಣ್ಣಪ್ಪ ಪತ್ನಿ ಸೋನಿಯ ಮೇಲೆ ಹಲ್ಲೆ ನಡೆಸಿ, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ತನ್ನ ಪತ್ನಿಯು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಚಿಣ್ಣಪ್ಪ ತಿಳಿಸಿದ್ದಾನೆ. ಈ ಸಂದರ್ಭ ರಕ್ತದ ಕಲೆಯನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಪೊಲೀಸರು ಚಿಣ್ಣಪ್ಪನನ್ನು ವಿಚಾರಣೆ ನಡೆಸಿದ್ದು, ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಆರೋಪಿಯ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿ, ಚಿಣ್ಣಪ್ಪನನ್ನು ಬಂಧಿಸಿದ್ದಾರೆ. ಆರೋಪಿ ಚಿಣ್ಣಪ್ಪನ ಎರಡನೆಯ ಪತ್ನಿ ಸೋನಿಯಾಗಿದ್ದು, ಪ್ರಥಮ ಪತ್ನಿ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಮಡಿಕೇರಿ ವೃತ್ತನಿರೀಕ್ಷಕ ಮೇದಪ್ಪ, ಸಿದ್ದಾಪುರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಭೇಟಿ ನೀಡಿ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.