ಶನಿವಾರಸಂತೆ, ನ. 3: ಪಟ್ಟಣದ ಜನತೆ ದೀಪಾವಳಿ ಹಬ್ಬವನ್ನು 3 ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಆಚರಿಸಿದರು.ಹಬ್ಬದ ಮೊದಲ ದಿನ ನರಕ ಚತುರ್ದಶಿಯಂದು ಅಭ್ಯಂಜನ ಸ್ನಾನ ಮಾಡಿದ ಭಕ್ತರು ನೂತನ ವಸ್ತ್ರ ಧರಿಸಿ, ಮನೆಯನ್ನು ತಳಿರು-ತೋರಣಗಳಿಂದ ಅಲಂಕರಿಸಿ, ರಂಗೋಲಿ ಬಿಡಿಸಿ ಸಾಂಪ್ರಾದಾಯಿಕ ವಾಗಿ ಪೂಜೆ ಸಲ್ಲಿಸಿದರು. ಮನೆಯಲ್ಲಿ ವಿಶೇಷ ಸಿಹಿ ಭಕ್ಷ್ಯ ತಯಾರಿಸಿ ಸವಿದು ಹಬ್ಬವನ್ನಾಚರಿಸಿದರು. ಸಂಜೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಮನೆ ಮುಂದೆ ದೀಪಗಳನ್ನು ಬೆಳಗಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಲಕ್ಷ್ಮೀ ಪೂಜೆ ಅಂಗವಾಗಿ ಅಂಗಡಿಗಳನ್ನು ಅಲಂಕರಿಸಿ, ಲಕ್ಷ್ಮೀಯನ್ನು ಪೂಜಿಸಿದರು. ಬಲಿಪಾಡ್ಯಮಿ ಹಬ್ಬವನ್ನು ಬಲೀಂದ್ರ ಪೂಜೆಯೊಂದಿಗೆ ಆಚರಿಸಿದರು. ಮನೆ ಮುಂಭಾಗ ರಂಗೋಲಿ ಹಾಕಿದ ಹೆಣ್ಣು ಮಕ್ಕಳು ಸಗಣಿಯಲ್ಲಿ ಚೆಂಡು ಹೂವನ್ನಿಟು ಅಲಂಕರಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಗೋವುಗಳಿಗೆ ಹಾಗೂ ತಿಪ್ಪಗುಂಡಿಗೆ ಚೆಂಡು ಹೂ ಹಾಕಿ ಪೂಜಿಸಲಾಯಿತು. ಹಬ್ಬದ ಮೂರು ದಿನವೂ ರಾತ್ರಿ ಮನೆ ಮುಂದೆ ದೀಪಗಳನ್ನು ಬಲೀಂದ್ರನನ್ನು ಪ್ರಾರ್ಥಿಸಿದರು.

ಪಟ್ಟಣದ ಚಂದ್ರ ಮೌಳೇಶ್ವರ-ಪಾರ್ವತಿ-ಗಣಪತಿ ದೇವಾಲಯ, ರಾಮಮಂದಿರ, ವಿಜಯ ವಿನಾಯಕ ದೇವಾಲಯ ಹಾಗೂ ಗೋಪಾಲಪುರದ ಬನಶಂಕರಿ ದೇವಾಲಯಗಳಲ್ಲಿ ನರಕ ಚತುರ್ದಶಿ, ಬಲಿಪಾಡ್ಯಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.