*ಗೋಣಿಕೊಪ್ಪಲು, ನ. 26: ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುವಂತೆ, ಬಸ್ ನಿಲ್ದಾಣ, ಶೌಚಾಲಯ, ಚರಂಡಿ ವ್ಯವಸ್ಥೆ, ಮಕ್ಕಳ ಕಳ್ಳರ ಬಗ್ಗೆ ಪೊಲೀಸರು ನಿಗಾ ಇಡುವಂತೆ, ಪಟ್ಟಣದ ಶುಚಿತ್ವ, ಬೀದಿ ನಾಯಿ ಹಾವಳಿ ತಡೆಗಟ್ಟುವಂತೆ, ವಸತಿ ರಹಿತರಿಗೆ ಮನೆಗಳ ನಿರ್ಮಾಣಕ್ಕೆ ಮುಂದಾಗಲು ಪಂಚಾಯಿತಿ ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಸಾರ್ವಜನಿಕರು ಗೋಣಿಕೊಪ್ಪ ಗ್ರಾಮ ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳಲ್ಲಿ ಆಗ್ರಹಿಸಿದ ಘಟನೆ ಗೋಣಿಕೊಪ್ಪಲು ಗ್ರಾಮಸಭೆಯಲ್ಲಿ ವ್ಯಕ್ತವಾಯಿತು.

ಇಲ್ಲಿನ ಸ್ವತಂತ್ರ್ಯ ಹೋರಾಟಗಾರರ ಸ್ಮಾರಕ ಭವನದಲ್ಲಿ ಪಂಚಾಯ್ತಿ ಅಧ್ಯಕ್ಷೆ ಸೆಲ್ವಿ ಅಧ್ಯಕ್ಷತೆಯಲ್ಲಿ ಮತ್ತು ನೋಡೆಲ್ ಅಧಿಕಾರಿ ಅಕ್ಷರ ದಾಸೋಹ ಅಧಿಕಾರಿ ಮಹದೇವಸ್ವಾಮಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಚಂದ್ರಮೌಳಿ ನೇತೃತ್ವದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಪಂಚಾಯಿತಿ ಆಡಳಿತದಲ್ಲಿನ ಕುಂದು ಕೊರತೆ ಮತ್ತು ನಡೆಯಬೇಕಾದ ಅಭಿವೃದ್ದಿ ಕಾರ್ಯಗಳ ಬಗ್ಗೆ ತೀವ್ರ ಚರ್ಚೆ ನಡೆಯಿತು.

ಮಕ್ಕಳ ಕಳ್ಳತನದ ಬಗ್ಗೆ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪಟ್ಟಣದ ಶಾಲೆಗಳಲ್ಲಿ ಬೆಳಗ್ಗೆ ಮತ್ತು ಸಂಜೆಯ ಸಮಯ ಮಕ್ಕಳ ಭದ್ರತೆಗೆ ಓರ್ವ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕು. ಪಂಚಾಯ್ತಿ ಇದಕ್ಕೆ ಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಮಾಜಿ ಅಧ್ಯಕ್ಷೆ ರಾಣಿ ನಾರಾಯಣ್ ಸಭೆಯ ಗಮನಕ್ಕೆ ತಂದರು.

ಪಟ್ಟಣದಲ್ಲಿ ಬಸ್ ನಿಲ್ದಾಣ, ಸೂಕ್ತ ಶೌಚಾಲಯಗಳಿಲ್ಲದೆ ವೃದ್ದರು, ಮಹಿಳೆ ಮತ್ತು ಮಕ್ಕಳಿಗೆ ಸಮಸ್ಯೆ ಉಂಟಾಗುತ್ತಿದೆ. ತಾತ್ಕಾಲಿಕ ಬಸ್ ನಿಲ್ದಾಣವನ್ನು ನಿರ್ಮಿಸಬೇಕು. ಬಸ್ ನಿಲ್ದಾಣ ನಿರ್ಮಿಸುವ ಬಗ್ಗೆ ಪಂಚಾಯಿತಿ ಸದಸ್ಯರಲ್ಲಿ ಒಗ್ಗಟ್ಟು ಕಾಣದೆ ಗೊಂದಲ ಏರ್ಪಟ್ಟಿದೆ. ಸದಸ್ಯರುಗಳು ರಾಜಕೀಯ ಬಿಟ್ಟು ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಲು ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ್ ಕಿವಿಮಾತು ಹೇಳಿದರು.

ಬಡಾವಣೆ ನಿರ್ಮಿಸಲು ಅನುಮತಿ ಪಡೆಯಲು ಬಂದಾಗ ಬಡಾವಣೆಯ ಕಸ ವಿಲೇವಾರಿ ಜವಾಬ್ದಾರಿಯನ್ನು ಬಡಾವಣೆ ಮಾಲೀಕರಿಗೆ ಒಪ್ಪಿಸಬೇಕು. ತಮ್ಮ ಮನೆಯ ಕಸಗಳನ್ನು ತಾವೇ ಸುಟ್ಟು ಹಾಕುವ ಮೂಲಕ ಕಸದ ಸಮಸ್ಯೆ ಬಗೆಹರಿಸಲು ಸಹಕರಿಸಬೇಕು ಎಂದು ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಹೇಳಿದರು.

32 ವರ್ಷಗಳಿಂದ 198 ಮನೆಗಳಿಗೆ ಹಕ್ಕು ಪತ್ರ ನೀಡಲು ಪಂಚಾಯಿತಿ ಮುಂದಾಗಿಲ್ಲ. ಈ ಬಗ್ಗೆ ಗಮನ ಹರಿಸಿ, ಹಕ್ಕು ಪತ್ರ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ನಾರಾಯಣ ಸ್ವಾಮಿ ನಾಯ್ಡು ಒತ್ತಾಯಿಸಿದರು.

ಪಟ್ಟಣದ ಅಭಿವೃದ್ದಿಗೆ ಸರಕಾರ ಅನುದಾನವನ್ನು ಸಮರ್ಪಕವಾಗಿ ಬಳಸಿ ಅಭಿವೃದ್ದಿಗೆ ಮುಂದಾಗಬೇಕು. ಪಂಚಾಯಿತಿ ಅಧ್ಯಕ್ಷರು ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಬೇಕು ಎಂದು ಖಾದಿರ ಪೊನ್ನಪ್ಪ ತಿಳಿಸಿದರು. ವಾರ್ಡ್‍ಗಳಲ್ಲಿ ನೀರಿನ ಅಭಾವ, ವಿದ್ಯುತ್ ಕೊರತೆ ಎದುರಾಗಿದೆ. ಈ ಬಗ್ಗೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸಮ್ಮದ್ ಸಭೆಯ ಗಮನಕ್ಕೆ ತಂದರು. ಸುನಿಲ್ ಮಾದಪ್ಪ, ಪಿ.ಕೆ. ಪ್ರವೀಣ್ , ಕುಮಾರ ಮಹದೇವ್, ಸುಮಿ ಸುಬ್ಬಯ್ಯ ಸಭೆಯಲ್ಲಿ ಕುಂದು ಕೊರತೆ ಮತ್ತು ಅಭಿವೃದ್ದಿಯ ಬಗ್ಗೆ ಚರ್ಚೆ ನಡೆಸಿದರು.

ಗೊಂದಲ: ಸಭೆ ಪ್ರಾರಂಭಕ್ಕೂ ಮೊದಲೇ ಗ್ರಾ.ಪಂ. ಸದಸ್ಯರುಗಳಲ್ಲಿ ಅವಿಶ್ವಾಸ ವ್ಯಕ್ತವಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಭೆ ನಡೆಸಿಕೊಡಲು ಮುಂದಾಗದೆ ಕೊನೆಯ ಸ್ಥಾನದಲ್ಲಿ ಕುಳಿತು ಸಭೆಯನ್ನು ಬಹಿಷ್ಕರಿಸಲು ಮುಂದಾದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಸಭೆಯ ನಡವಳಿಕೆಯ ಬಗ್ಗೆ ಅರಿತು ಸಭೆ ಮತ್ತು ಗ್ರಾಮಸ್ಥರಿಗೆ ಗೌರವ ನೀಡುವದನ್ನು ಕಲಿತುಕೊಳ್ಳಬೇಕು ಎಂದು ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಪಂಚಾಯಿತಿ ಅಭಿವೃದ್ದಿಯ ಬಗ್ಗೆ ಗಮನ ಹರಿಸಿ ಗ್ರಾಮಸ್ಥರನ್ನು ಸಭೆಗೆ ಕರೆದು ಅವಮಾನ ಮಾಡುತ್ತಿದ್ದೀರಾ ವೇದಿಕೆಯಲ್ಲಿ ಕುಳಿತು ಸಮಸ್ಯೆಗಳನ್ನು ಪರಿಹರಿಸಿ’ ಎಂದು ಗ್ರಾಮಸ್ಥರಾದ ಕೇಶವ ಕಾಮತ್, ಸುನಿಲ್ ಮಾದಪ್ಪ ಒತ್ತಾಯಿಸಿದರು. ಇವರ ಒತ್ತಾಯಕ್ಕೆ ಮಣಿದು ವೇದಿಕೆಯಲ್ಲಿ ಕುಳಿತುಕೊಂಡ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷರ ವಿರುದ್ದ ಆರೋಪಗಳನ್ನು ಮುಂದಿಟ್ಟರು. ಅಧ್ಯಕ್ಷರು ಸದಸ್ಯರಿಗೆ ಗೌರವ ನೀಡುತ್ತಿಲ್ಲ. ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ ಎಂದು ಸಭೆಯಲ್ಲಿ ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ಮುರುಗ, ಸೋಮಣ್ಣ, ಪ್ರಭಾವತಿ, ಮಂಜುಳ, ಧ್ಯಾನ್ ಸುಬ್ಬಯ್ಯ, ರಾಜೇಶ್, ಪ್ರಮೋದ್ ಗಣಪತಿ ಗಮನಕ್ಕೆ ತಂದರು.

ವರದಿ : ಟಿ.ಎಲ್. ಶ್ರೀನಿವಾಸ್, ದಿನೇಶ್ ಎನ್.ಎನ್.