ವೀರಾಜಪೇಟೆ, ನ. 27: ಈ ಹಿಂದೆ ಪ.ಪಂ. ಪಾದಚಾರಿ ರಸ್ತೆಯ ದುಸ್ಥಿತಿ, ಪಾರ್ಕಿಂಗ್ ಸಮಸ್ಯೆ, ಪಟ್ಟಣ ರಸ್ತೆಗಳ ದುಸ್ಥಿತಿ, ಕೆಲವು ಕಡೆ ಕುಡಿಯುವ ನೀರಿನ ಬವಣೆ, ಕಸದ ಸಮಸ್ಯೆ ಹಾಗೂ ಪ.ಪಂ. ಮಳಿಗೆಯನ್ನು ಟೆಂಡರು ಕರೆದು ಹಂಚಿಕೆ ಮಾಡಿ ನ್ಯಾಯಾಲಯ ಆದೇಶ ಪಾಲನೆ ಮಾಡುವ ಬಗ್ಗೆ ತಿಂಗಳ ಹಿಂದೆ ಮನವಿ ನೀಡಿದ್ದರೂ ಪ.ಪಂ. ಸ್ವಂದಿಸದೆ ನಿಷ್ಕ್ರಿಯ ವಾಗಿರುವ ಹಿನ್ನೆಲೆಯಲ್ಲಿ ತಾ. 30 ರಂದು ಪ.ಪಂ. ಎದುರು ಪ್ರತಿಭಟನೆ ನಡೆಸುವದಾಗಿ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ ಬಡವಾಣೆ ವಿಭಾಗದಲ್ಲಿ ಕಸದ ರಾಶಿ ಇದೆ, ಇದೇ ರೀತಿ ಗಡಿಯಾರ ಕಂಬದಿಂದ ಖಾಸಗಿ ಬಸ್ ನಿಲ್ದಾಣದವರೆÀಗಿನ ಮುಖ್ಯ ರಸ್ತೆ ಬದಿ ಪಾದಚಾರಿ ರಸ್ತೆ ಸಂಪೂರ್ಣ ಕಿತ್ತು ಹೋಗಿ ಸ್ಲ್ಯಾಬ್ ಇಲ್ಲದೆ ವೃದ್ದರು, ಮಹಿಳೆಯರು, ಮಕ್ಕಳು ಎದ್ದು ಬಿದ್ದು ನಡೆಯುವ ಅನಿವಾರ್ಯತೆ ಬಂದಿದೆ. ಕೆಲವು ಬಡಾವಣೆಗೆ ಸಮರ್ಪಕ ಕುಡಿಯುವ ನೀರು ವಿತರಣೆ ಆಗದೆ ಜನ ಪರಿತಪಿಸುತ್ತಾರೆ. ಖಾಸಗಿ ಬಸ್ ನಿಲ್ದಾಣದಿಂದ ಸುಣ್ಣದ ಬೀದಿಗಾಗಿ ಗೋಣಿಕೊಪ್ಪಲು ಸಂಪರ್ಕ ಮುಖ್ಯ ರಸ್ತೆಯ ಕಾಂಕ್ರೀಟ್ ಕಿತ್ತು ಹೊಂಡವಾಗಿದೆ ಇದೇ ರೀತಿ ಬಹುತೇಕ ರಸ್ತೆ ದುಸ್ಥಿತಿಯಲ್ಲಿದೆ. ಡಾಂಬರೀಕರಣ, ಸ್ಲ್ಯಾಬ್ ಹಾಕುತ್ತೇವೆ ಎಂದು ಮೂರು ವರ್ಷದಿಂದ ಪ.ಪಂ. ಆಡಳಿತ ಮಂಡಳಿ ಹೇಳಿಕೆ ನೀಡುತ್ತಿದೆ.ಆದರೆ ಕನಿಷ್ಟ ಮೂಲಭೂತ ಸೌಕರ್ಯ ಸಹ ಇಲ್ಲ. ಪ್ರತಿಭಟನೆ ಅನಿವಾರ್ಯ ಎಂದು ಮೋಹನ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ವಕೀಲ ಡಿ.ಸಿ. ಧ್ರುವ ಮಾತನಾಡಿ, ಪ.ಪಂ. ಸದಸ್ಯರು ನಿಷ್ಕ್ರಿಯವಾಗಿದ್ದಾರೆ. ಅಲ್ಲಿ ಜನರ ಸಮಸ್ಯೆ, ಬೇಕು ಬೇಡಿಕೆಗೆ ಯಾವ ಸ್ಪಂದನೆ ದೊರೆಯುತ್ತಿಲ್ಲ. ಆದ್ದರಿಂದ ಜನಪರ ಕಾಳಜಿಯ ನಮ್ಮ ಹೋರಾಟಕ್ಕೆ ಜನರು ಬೆಂಬಲ ನೀಡಬೇಕು ಎಂದರು. ಕಾಂಗ್ರೆಸ್ ಸದಸ್ಯರು ಹೋರಾಟಕ್ಕೆ ಬರುವ ದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಜನಪರ ಕಾಳಜಿ ಇದ್ದರೆ ಪ್ರತಿಭಟನೆ ಯನ್ನು ಬೆಂಬಲಿಸಬೇಕು. ಇಲ್ಲವಾದರೆ ಅವರಿಗೆ ಜನಪರ, ಅಭಿವೃದ್ಧಿ ಕಾಳಜಿ ಇಲ್ಲ. ಅವರು ಆಡಳಿತ ವರ್ಗ ದೊಂದಿಗೆ ಒಳ ಒಪ್ಪಂದ ಮಾಡಿ ಕೊಂಡಿದ್ದಾರೆ ಎಂದು ಭಾವಿಸ ಬೇಕಾಗುತ್ತದೆ ಎಂದು ಹೇಳಿದರು.

ವೀರಾಜಪೇಟೆ ಪ.ಪಂ. ಮಳಿಗೆಗಳ ಹಂಚಿಕೆಯಲ್ಲಿ ಈ ಹಿಂದೆ ಭಾರೀ ಗೋಲ್ ಮಾಲ್ ನಡೆದಿದ್ದು, ಅನೇಕ ಪ್ರಭಾವಿಗಳೇ ಸಣ್ಣ ಬಾಡಿಗೆಗೆ ಮಳಿಗೆ ಪಡೆದು, ದೊಡ್ಡ ಮೊತ್ತಕ್ಕೆ ಬಾಡಿಗೆ ನೀಡಿ ಪ ಪಂ ಹಾಗೂ ಸರಕಾರಕ್ಕೆ ವಂಚನೆ ಮಾಡುತ್ತಿದ್ದಾರೆ. ರಾಜ್ಯದ ಉಚ್ಚ ನ್ಯಾಯಾಲಯದ ಆದೇಶದಂತೆ ಟೆಂಡರ್ ಕರೆಯಲು ಒತ್ತಾಯಿಸಿದರೆ, ಅದಕ್ಕೆ ತಿಂಗಳು ಕಳೆದರೂ ಪ.ಪಂ. ಸ್ಪಂದನೆ ನೀಡಿಲ್ಲ. ಈಗ ನಾವು ಮುಖ್ಯಾಧಿಕಾರಿ ವಿರುದ್ಧವೇ ಅನಿವಾರ್ಯವಾಗಿ ರಾಜ್ಯ ಉಚ್ಚನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಹೂಡುತ್ತೇವೆ. ಮುಖ್ಯಾಧಿಕಾರಿ ಹಾಗೂ ಆಡಳಿತ ಮಂಡಳಿ ಹೊಣೆ ಹೊರಬೇಕು. ನಮ್ಮ ಸದಸ್ಯರು ಪ್ರಮುಖ ವಿರೋಧ ಪಕ್ಷವಾಗಿ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದರೆ ಈ ಪ್ರತಿಭಟನೆ ನಡೆಸಬೇಕಾಗಿರಲಿಲ್ಲ. ಅವರು ಕಳೆದ ಮಾಸಿಕ ಸಭೆಯಲ್ಲಿ ಆಡಳಿತರೂಢ ಪಕ್ಷದೊಂದಿಗೆ ಸೇರಿ ಮಳಿಗೆ ಹರಾಜು ಬೇಡ ಎಂದು ಹೇಳಿದ್ದಾರೆ. ನಮ್ಮ ಕಾಂಗ್ರೆಸ್ ಸದಸ್ಯರಿಗೆ ಹಾಗೂ ನಾಮಕರಣ ಸದಸ್ಯರಿಗೆ ನಾವು ರಾಜ್ಯ ಉಚ್ಚ ನ್ಯಾಯಾಲಯ ಆದೇಶ ಉಲ್ಲಂಘನೆ ಹಾಗೂ ಜನ ಶಕ್ತಿ ವಿರುದ್ದ ಹೋಗುತ್ತಿರುವ ಪರಿಜ್ಞಾನ ಎಲ್ಲಿಗೆ ಹೋಗಿತ್ತು ಎಂದು ಡಿ.ಸಿ. ಧ್ರುವ ಖಾರವಾಗಿ ಪ್ರತಿಕ್ರಿಯಿಸಿzರು.

ಜಿಲ್ಲಾ ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ಸುಬ್ಬಯ್ಯ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಉಪಾಧ್ಯಕ್ಷ ಹೆಚ್.ಎಂ. ಮಹಾದೇವ, ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ಮಾಳೇಟಿರ ಕಾಶಿ ಕುಂಞಪ್ಪ, ಹಾಗೂ ಅಜೀಜ್, ನಗರ ಘಟಕದ ಪ್ರಧಾನ ಕಾರ್ಯದರ್ಶಿಎಂ.ಎಂ ಶಶಿಧರನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಸದಸ್ಯೆ ಲೈಲಾ ಜೋಸ್, ವೀರಾಜಪೇಟೆ ಬ್ಲಾಕ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಎಜಾಜ್ ಅಹ್ಮದ್ ಉಪಸ್ಥಿತರಿದ್ದರು