ವೀರಾಜಪೇಟೆ, ನ. 30: ವೀರಾಜಪೇಟೆ ಪಟ್ಟಣ ಪಂಚಾಯಿತಿಯು ವಿವಿಧ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇಂದು ಇಲ್ಲಿನ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಮಳಿಗೆಗಳನ್ನು ಕಾನೂನು ಬದ್ಧವಾಗಿ ಟೆಂಡರ್ ಮೂಲಕ ವಿಲೇವಾರಿ ಮಾಡಬೇಕು. ಪಂಚಾಯಿತಿಗೆ ಸೇರಿದ ಕಟ್ಟಡದಲ್ಲಿರುವ ಕಾನೂನು ಬಾಹಿರವಾಗಿರುವ ಮದ್ಯದ ಅಂಗಡಿಗಳನ್ನು ತಕ್ಷಣ ತೆರವುಗೊಳಿಸಬೇಕು.ಈ ಸಂಬಂಧದಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು. ಫುಟ್‍ಪಾತ್ ಮೇಲೆ ಅಳವಡಿಸಿರುವ ಸ್ಲ್ಯಾಬ್‍ಗಳನ್ನು ದುರಸ್ತಿ ಪಡಿಸಬೇಕು. ವಿಜಯನಗರ, ಗಾಂಧಿನಗರಗಳಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆಯನ್ನು ಸರಿಪಡಿಸಬೇಕು. ವಿಜಯನಗರ ತೋಡಿನ ಸಮೀಪ ಕಸದ ರಾಶಿ ತುಂಬಿದ್ದು ಕಸ ವಿಲೇವಾರಿ ಮಾಡಬೇಕು. ದುಸ್ಥಿತಿಯಲ್ಲಿರುವ ಮಟನ್ ಮಾರ್ಕೆಟ್ ಗಾಂಧಿನಗರ ಹಾಗೂ ಗೌರಿಕೆರೆಯಿಂದ ಪೊಲೀಸ್ ವಸತಿ ಗೃಹಕ್ಕೆ ತೆರಳುವ ರಸ್ತೆಯನ್ನು ದುರಸ್ತಿಪಡಿಸುವಂತೆ ಪ್ರತಿಭಟನೆಗಾರರು ಮುಖ್ಯಾಧಿಕಾರಿಯನ್ನು ಒತ್ತಾಯಿಸಿ ಮನವಿ ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಅವರು ಸಮಸ್ಯೆಗಳನ್ನು ಪರಿಶೀಲಿಸಿ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವದಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಭರವಸೆ ನೀಡಿದರು.

ಪ್ರತಿಭಟನೆಗಾರರನ್ನು ಉದ್ದೇಶಿಸಿ ಪಕ್ಷದ ನಗರ ಸಮಿತಿ ಅಧ್ಯಕ್ಷ ಜಿ.ಜಿ. ಮೋಹನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದು ಸಲಾಂ, ವಕ್ತಾರ ಎಂ.ಎಸ್. ಪೂವಯ್ಯ ಕಾನೂನು ಸಲಹೆಗಾರ ಡಿ.ಸಿ. ಧ್ರುವ ಮಾತನಾಡಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್‍ನ ಮಾಳೇಟಿರ ಕೆ. ಬೋಪಣ್ಣ, ಎಂ.ಎಂ. ಶಶಿಧರ್, ಸಿ.ಪಿ.ಕಾವೇರಪ್ಪ ಕಾಶೀ ಕುಂಞಪ್ಪ, ದಿನೇಶ್, ದಿಲನ್, ಸುಭೇರ್ ಹಾಗೂ ನಾಮ ನಿರ್ದೇಶಿತ ಸದಸ್ಯರುಗಳಾದ ಮಹಮ್ಮದ್ ರಾಫಿ, ಪಟ್ಟಡ ರಂಜಿ ಪೂಣಚ್ಚ, ಡಿ.ಪಿ.ರಾಜೇಶ್ ಹಾಜರಿದ್ದರು.