ಮಡಿಕೇರಿ, ಜು. 26: ಭಾರತೀಯ ಜನತಾ ಪಾರ್ಟಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದರು.ಬಾಲಭವನದಲ್ಲಿಂದು ನಡೆದ ಬಿಜೆಪಿ ಮಹಿಳಾ ಮೋರ್ಚಾದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಬಿಜೆಪಿ ಹೆಚ್ಚು ಜನಬೆಂಬಲ ಇರುವ ಪಕ್ಷವಾಗಿ 12ಕೋಟಿ ಸದಸ್ಯರನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯುತ್ತಿದ್ದು, ಬಲಿಷ್ಠ ಭಾರತ ನಿರ್ಮಾಣವಾಗಲಿದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ನೋವಿಗೆ ಸ್ಪಂದಿಸುವಲ್ಲಿ ವಿಫಲವಾಗಿದ್ದು, ದಕ್ಷ ಅಧಿಕಾರಿಗಳಿಗೆ ದ್ರೋಹ ಮಾಡುತ್ತಿದೆ ಎಂದು ರಂಜನ್ ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಕೆ. ಮನುಮುತ್ತಪ್ಪ ಮಾತನಾಡಿ, ಇತರೆಡೆಗೆ ಹೋಲಿಸಿದರೆ, ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳ ವಿಸ್ತೀರ್ಣ ಹೆಚ್ಚಿದ್ದು, ಬಿಜೆಪಿಯ ಇಬ್ಬರು ಶಾಸಕರುಗಳು ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಭಾರತೀಯ ಜನತಾ ಪಕ್ಷದ ಆಡಳಿತವಿರುವ ಕೇಂದ್ರ ಸರ್ಕಾರ ಹತ್ತು ಹಲವಾರು

(ಮೊದಲ ಪುಟದಿಂದ) ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅವುಗಳ ಸಫಲತೆಗೆ ಬಿಜೆಪಿ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್ ಮಾತನಾಡಿ, ಸ್ವಚ್ಛ ಹಾಗೂ ಬಲಿಷ್ಠ ಭಾರತ ನಿರ್ಮಾಣಕ್ಕೆ ಭಾಜಪ ಕಾರ್ಯಕರ್ತರು ಶ್ರಮಿಸಬೇಕು. ಮೋದಿಯವರು ವಿವೇಕಾನಂದರ ಪ್ರತಿರೂಪ ಎಂದು ಬಣ್ಣಿಸಿದ ಅವರು, ಕಾರ್ಯಕರ್ತರು ಸ್ವಾರ್ಥ, ಅಸೂಯೆ ಬದಿಗಿಟ್ಟು ಪಕ್ಷಕ್ಕಾಗಿ ದುಡಿಯಬೇಕು ಎಂದರು. ಬಿಜೆಪಿ ಮಹಿಳಾ ಮೋರ್ಚಾ ನೂತನ ಅಧ್ಯಕ್ಷೆ ಯಮುನಾ ಚಂಗಪ್ಪ ಮಾತನಾಡಿ, ಸಮಾಜದಲ್ಲಿ ಮಹಿಳಾ ಶಕ್ತಿ ಪ್ರಬಲವಾಗಿದ್ದು, ಪಕ್ಷಕ್ಕಾಗಿ ಅವಿರತ ಶ್ರಮಿಸುವದಾಗಿ ಹೇಳಿದರು.

ರಾಜ್ಯ ಸಮಿತಿ ಸದಸ್ಯೆ ಸುಮಾಸುದೀಪ್, ಜಿ.ಪಂ.ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಇವರುಗಳು ಮಾತನಾಡಿದರು. ಬಿಜೆಪಿ ಮಹಿಳಾ ಮೋರ್ಚಾ ಪ್ರಮುಖರಾದ ರಾಣಿ ಮಾಚಯ್ಯ, ವೀರಾಜಪೇಟೆ ತಾ.ಪಂ. ಅಧ್ಯಕ್ಷೆ ಸ್ಮಿತಾ ವೇದಿಕೆಯಲ್ಲಿದ್ದರು. ಕುಮುದಾ ಪ್ರಾರ್ಥಿಸಿ, ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೀತಾ ಪವಿತ್ರ ನಿರೂಪಿಸಿ, ಭುವನೇಶ್ವರಿ ಸ್ವಾಗತಿಸಿದರು. ಕಾರ್ಗಿಲ್ ವಿಜಯೋತ್ಸವ ಪ್ರಯುಕ್ತ ಅಗಲಿದ ಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.