ಶ್ರೀಮಂಗಲ, ನ. 3: ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ಆಶ್ರಯದಲ್ಲಿ ಕೊಡವ ನಮ್ಮೆ 2016 ಪ್ರಯುಕ್ತ ಅಂತರ ಕೊಡವ ಸಮಾಜ ತಂಡಗಳ ನಡುವೆ ಹಾಕಿ ಪಂದ್ಯಾವಳಿಯಲ್ಲಿ ಆರಾಯಿರ ನಾಡ್ ಮೂರ್ನಾಡು, ಅಮ್ಮತ್ತಿ, ಮಡಿಕೇರಿ, ಮೈಸೂರು, (ವೀರಾಜಪೇಟೆ), ಕೊಡವ ಸಮಾಜ ತಂಡಗಳು ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿವೆ.

ಆರಾಯಿರ ನಾಡ್ ಕೊಡವ ಸಮಾಜ ಹಾಗೂ ಮರೆನಾಡ್ (ಬಿರುನಾಣಿ) ಕೊಡವ ಸಮಾಜಗಳ ನಡುವಿನ ಪಂದ್ಯ ಮರೆನಾಡ್ ತಂಡದ ಗೈರು ಹಾಜರಿಯಿಂದ ಆರಾಯಿರ ತಂಡ ವಾಕ್ ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶಿಸಿತು.ದ್ವಿತೀಯ ಪಂದ್ಯ ಮೂರ್ನಾಡು ಮತ್ತು ನಾಪೋಕ್ಲು ಕೊಡವ ಸಮಾಜ ತಂಡಗಳ ನಡುವೆ ನಡೆದು ಮೂರ್ನಾಡು ತಂಡ 2-1 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಮೂರ್ನಾಡು ತಂಡದ ಪರ 33ನೇ ನಿಮಿಷದಲ್ಲಿ ಅಪ್ಪಚ್ಚು, 38ನೇ ನಿಮಿಷದಲ್ಲಿ ಕಾರಲ್ ಕಾರ್ಯಪ್ಪ ಗೋಲುಗಳಿಸಿದರೆ, ನಾಪೋಕ್ಲು ತಂಡದ ಪರವಾಗಿ 49ನೇ ನಿಮಿಷದಲ್ಲಿ ಬಿಪಿನ್ ಬೋಪಯ್ಯ ಗೋಲು ಗಳಿಸಿದರು.

ಅಮ್ಮತ್ತಿ ಹಾಗೂ ಬೇಂಗ್‍ನಾಡ್ (ಚೇರಂಬಾಣೆ) ಕೊಡವ ಸಮಾಜ ತಂಡಗಳ ನಡುವಿನ ಪಂದ್ಯದಲ್ಲಿ ಅಮ್ಮತ್ತಿ ತಂಡ 2-0 ಗೋಲಿನಿಂದ ಜಯಗಳಿಸಿತು. ತಂಡದ ಪರವಾಗಿ 29ನೇ ನಿಮಿಷದಲ್ಲಿ ನಾಚಪ್ಪ, 36ನೇ ನಿಮಿಷದಲ್ಲಿ ಮುಖೇಶ್ ಗೋಲು ಗಳಿಸಿದರು.ನಂತರದ ಪಂದ್ಯದಲ್ಲಿ ಮಡಿಕೇರಿ ತಂಡ 3-0 ಗೋಲುಗಳಿಂದ ಕುಶಾಲನಗರವನ್ನು ಸೋಲಿಸಿತು. ತಂಡದ ಪರವಾಗಿ 1ನೇ ನಿಮಿಷದಲ್ಲಿ ಬೋಪಣ್ಣ, 14ನೇ ನಿಮಿಷದಲ್ಲಿ ಪಳಂಗಪ್ಪ, 19ನೇ ನಿಮಿಷದಲ್ಲಿ ರೋಹನ್ ಗೋಲು ಬಾರಿಸಿ ಜಯ ತಂದುಕೊಟ್ಟರು.ಪೊನ್ನಂಪೇಟೆ ಹಾಗೂ ಮೈಸೂರು ಕೊಡವ ಸಮಾಜ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೈಸೂರು ತಂಡ 2-0 ಗೋಲಿನಿಂದ ಜಯಗಳಿಸಿತು. 10ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಸ್ಟ್ರೋಕ್‍ನಲ್ಲಿ ಶೋಗನ್ ಅಯ್ಯಪ್ಪ, 37ನೇ ನಿಮಿಷದಲ್ಲಿ ಲೆಹಾರ್ ಗೋಲು ಗಳಿಸಿದರು ಅಂತಿಮ ಪಂದ್ಯದಲ್ಲಿ ಶ್ರೀಮಂಗಲ ನಾಡ್ ಹಾಗೂ ವೀರಾಜಪೇಟೆ ಕೊಡವ ಸಮಾಜಗಳ ಪಂದ್ಯದಲ್ಲಿ ವೀರಾಜಪೇಟೆ ತಂಡದ ಕುಂಞಪ್ಪ 16 ಮತ್ತು 19ನೇ ನಿಮಿಷದಲ್ಲಿ ಬಾರಿಸಿದ 2 ಗೋಲುಗಳ ಸಹಾಯದಿಂದ ಶ್ರೀಮಂಗಲ ತಂಡವನ್ನು 2-0 ಗೋಲುಗಳಿಂದ ಪರಾಭವ ಗೊಳಿಸಿತು.

ಪಂದ್ಯಾವಳಿಯ ತೀರ್ಪು ಗಾರರಾಗಿ ಅಂಜಪರವಂಡ ಕುಶಾಲಪ್ಪ, ಮಳವಂಡ ಅಯ್ಯಪ್ಪ, ಬೊಳ್ಳಚಂಡ ನಾಣಯ್ಯ, ಕೋಡಿಮಣಿಯಂಡ ಗಣಪತಿ, ಕುಪ್ಪಂಡ ದಿಲನ್, ಮೂಕಚಂಡ ನಾಚಪ್ಪ, ಚೋಯಮಾಡ ಚಂಗಪ್ಪ, ಚೆಯ್ಯಂಡ ಅಪ್ಪಚ್ಚು, ನೆಲ್ಲಮಕ್ಕಡ ಅಪ್ಪಚ್ಚು, ಐನಂಡ ಲಾಲಾ ಐಯಣ್ಣ, ಮೂಳೆರ ಪೂವಯ್ಯ, ಕೊಂಡಿರ ಕೀರ್ತಿ, ಮೇಕಚಂಡ ಕಿಶಾ ಬೋಪಯ್ಯ ಕಾರ್ಯ ನಿರ್ವಹಿಸಿದರು. ಪಂದ್ಯಾವಳಿಯ ನಿರ್ದೇಶಕರಾಗಿ ಬುಟ್ಟಿಯಂಡ ಚಂಗಪ್ಪ , ವೀಕ್ಷಕ ವಿವರಣೆಗಾರರಾಗಿ ಮಾಳೇಟಿರ ಶ್ರೀನಿವಾಸ್ ಕಾರ್ಯನಿರ್ವಹಿಸಿದರು.