ವೀರಾಜಪೇಟೆ, ಡಿ. 10: ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿಯಲ್ಲಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು ಎರಡು ಮಾಸಿಕ ಸಭೆಗೆ ಬಾಯಿಗೆ ಕಪ್ಪು ಪಟ್ಟಿ ಕಟ್ಟಿ ಸಭೆಗೆ ಹಾಜರಾಗಿದ್ದೇನೆ ಎಂದು ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್. ದೇವರಾಜು ನೊಂದು ನುಡಿದಿದ್ದಾರೆ.

ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಘಟಕದಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವರಾಜು ಅವರು ನಾನು ಮೂರು ಬಾರಿ ಪಕ್ಷೇತರ ಸದಸ್ಯರಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿದ್ದೇನೆ. ನಾನು ದಲಿತ ಎಂಬ ಕಾರಣಕ್ಕೆ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಯಾವ ಕಾರ್ಯ ಕಲಾಪಗಳನ್ನು ನನಗೆ ತಿಳಿಸುವದಿಲ್ಲ. ನನ್ನ ವಾರ್ಡ್‍ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪಿಡಿಓ ರವಿ ತಮ್ಮಯ್ಯ ಸ್ವತಃ ನಡೆಸುತ್ತಿದ್ದು ಪಂಚಾಯಿತಿಯ ನಿಯಮ ನಿಬಂಧನೆಗಳನ್ನು ಗಾಳಿಗೆ ತೂರುತ್ತಿದ್ದಾರೆ. ಸದಸ್ಯರಾದ ಎಂ. ಸುರೇಶ್ ಹಾಗೂ ಶೆಟ್ಟಿ ಸುರೇಶ್ ಇದಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ನನಗೆ ಯಾವದೇ ಮಾಹಿತಿ ನೀಡುವದಿಲ್ಲ. ಈಗಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ತಮ್ಮಯ್ಯ ಈ ಹಿಂದೆ ಪಂಚಾಯಿತಿ ಬಿಲ್ ಕಲೆಕ್ಟರ್ ಆಗಿದ್ದರು. ಅವರಿಗೆ ಪಿಡಿಓ ಹುದ್ದೆಯ ಅನುಭವವೂ ಇಲ್ಲ. ಅಧ್ಯಕ್ಷೆ ರೋನಾ ಭೀಮಯ್ಯ ತಟಸ್ಥರಾಗಿದ್ದಾರೆ. ಜಾತಿ ನಿಂದನೆ ಮಾಡಿರುವ ರವಿ ತಮ್ಮಯ್ಯ ಬಗ್ಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಇದಕ್ಕೆ ಮೀನ ಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.

ಸಂಘಟನೆಯ ವಿಭಾಗೀಯ ಸಂಚಾಲಕರಾದ ಎಚ್.ಎಸ್. ಕೃಷ್ಣಪ್ಪ ಮಾತನಾಡಿ ಇದೇ ರೀತಿ ಹಲವಾರು ಪಂಚಾಯಿತಿಗಳಲ್ಲಿ ನಡೆಯುತ್ತಿದೆ. ಕೂಡಲೇ ಪಿಡಿಓ ರವಿ ತಮ್ಮಯ್ಯ ಅವರನ್ನು ಅಮಾನತು ಮಾಡಿ ತುರ್ತುಕ್ರಮ ಕೈಗೊಳ್ಳದಿದ್ದರೆ 7 ದಿನಗಳ ಅವಧಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮುಷ್ಕರ ನಡೆಸಲಾಗುವದು ಎಂದು ಹೇಳಿದರು.

ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಮಾತನಾಡಿ ಗ್ರಾಮ ಪಂಚಾಯಿತಿಗೆ ಕಾನೂನು ಬದ್ದವಾಗಿ ಆಯ್ಕೆಯಾದ ಸದಸ್ಯ ದೇವರಾಜು ಅವರನ್ನು ಪಿಡಿಒ ರವಿ ತಮ್ಮಯ್ಯ ತಿರಸ್ಕಾರ ಮನೋಭಾವದಿಂದ ಕಾಣುತ್ತಿದ್ದಾರೆ. ಇವರ ಮೇಲೆ ಜಿಲ್ಲಾಧಿಕಾರಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಸಂಘಟನಾ ಸಂಚಾಲಕ ವಿ.ಎಲ್. ರಜನಿಕಾಂತ್, ಹೆಚ್.ಬಿ. ಸತೀಶ್ ಉಪಸ್ಥಿತರಿದ್ದರು.