ಮಡಿಕೇರಿ, ಜು.29 : ದಕ್ಷಿಣ ಕೊಡಗಿನ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ಮೀಸಲಾತಿಯಡಿ ಆಯ್ಕೆಯಾದರೂ ಸಭೆಗಳಲ್ಲಿ ಪಾಲ್ಗೊಳ್ಳಲು ಬಿಡದೆ ಅವರ ಮೇಲೆ ಪಂಚಾಯಿತಿ ಸದಸ್ಯರೊಬ್ಬರು ಎಸಗಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ವಿಶೇಷ ಸಮಿತಿ ರಚಿಸಿ ಸಮಗ್ರ ತನಿಖೆÉ ನಡೆಸುವಂತೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಆರ್. ಪರಶುರಾಮ್ ಆಗ್ರಹಿಸಿದ್ದಾರೆ.
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಎಸ್‍ಸಿ-ಎಸ್‍ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಪಂಚಾಯಿತಿ ಸದಸ್ಯ ಗೋಪಾಲಕೃಷ್ಣ ಅವರನ್ನು ಬಂಧಿಸಬೇಕು. ಈ ಎಲ್ಲ ವಿದ್ಯಮಾನಗಳ ಅರಿವಿದ್ದೂ ಮೌನವಾಗಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಗೊಳಿಸಬೆÉೀಕೆಂದು ಆಗ್ರಹಿಸಿ, ಸಂಘಟನೆಯ ವತಿಯಿಂದ ಜಿಲ್ಲಾ ಪಂಚಾಯತ್ ಸಿಇಓ, ತಾಲೂಕು ಪಂಚಾಯಿತಿ ಇಓ ಅವರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸುವದಾಗಿ ತಿಳಿಸಿದರು.
ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಈಶ್ವರಿ ಅವರಿಗೆ ಸಭೆಯ ಮಾಹಿತಿಯನ್ನು ನೀಡಬೇಕಾದ ಪಿಡಿಓ ಆ ಕೆಲಸವನ್ನು ನಿರ್ವಹಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಗೋಪಾಲಕೃಷ್ಣ ಅವರು ತಮ್ಮ ತೋಟದ ಕಾರ್ಮಿಕರಾಗಿದ್ದ ಈಶ್ವರಿ ಪಂಚಾಯಿತಿ ಅಧ್ಯಕ್ಷರಾದರೂ ಅವರನ್ನು ಸಭೆÉಗೆ ಬಾರಗೊಡದೆ, ಅವರ ಮಕ್ಕಳ ಶಿಕ್ಷಣಕ್ಕೂ ತಡೆಯೊಡ್ಡಿದ ಘಟನೆ ನಡೆದಿದೆ. ಈ ಯಾವದೇ ವಿಚಾರ ತಾಲೂಕು ಪಂಚಾಯಿತಿ ಇಓ ಫಡ್ನೇಕರ್ ಅವರಿಗೆ ತಿಳಿದಿರಲಿಲ್ಲವೆ ಎಂದು ಪ್ರಶ್ನಿಸಬೇಕಾಗುತ್ತದೆಂದು ತೀಕ್ಷ್ಣವಾಗಿ ನುಡಿದರು.
ಪ್ರಸ್ತುತ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ದಲಿತರನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ಪರಿಗಣಿಸಲಾಗುತ್ತದೆ. ಇತರರಂತೆ ನಾವೂ ಮನುಷ್ಯರಲ್ಲವೆ ಎಂದು ಅವರು ಪ್ರಶ್ನಿಸಿದರು.
ಅಧ್ಯಕ್ಷರಿಗೆ ಮನೆ ನಿರ್ಮಿಸಿ ಕೊಡಿ: ದಸಂಸ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಮಾತನಾಡಿ, ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈಶ್ವರಿ ಅವರಿಗೆ ಸೂಕ್ತ ಸರ್ಕಾರಿ ಜಾಗ ಗುರುತಿಸಿ ಮನೆಯನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರಲ್ಲದೆ, ಕಳೆದ ಒಂದು ವರ್ಷದ ಅವಧಿಯಲ್ಲಿ ಈಶ್ವರಿ ಅವರನ್ನು ಪಂಚಾಯಿತಿಗೆ ಬಾರಗೊಡದೆ ನಡೆಸಿರಬಹುದಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರಿಂದಲೇ ಹಣ ವಸೂಲಿ ಮಾಡಬೇಕೆಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಘÀಟನಾ ಸಂಚಾಲಕ ರಜನಿಕಾಂತ್, ಸದಸ್ಯರುಗಳಾದ ರಾಜಪ್ಪ, ಕಿರಣ್ ಮತ್ತು ಕೌಶನ್ ಉಪಸ್ಥಿತರಿದ್ದರು.