ವೀರಾಜಪೇಟೆ, ಅ. 20: ವೀರಾಜಪೇಟೆ ಪಟ್ಟಣ ಪಂಚಾಯಿತಿ ರಾಜ್ಯ ಉಚ್ಛ ನ್ಯಾಯಲಯದ ಆದೇಶವನ್ನು ಉಲ್ಲಂಘನೆ ಮಾಡಿ ವಾಣಿಜ್ಯ ಮಳಿಗೆಗಳನ್ನು 121 ಜನರಿಗೆ ಕಾನೂನು ಬಾಹಿರವಾಗಿ ನೀಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‍ನ ಕಾನೂನು ಘಟಕದ ಅಧ್ಯಕ್ಷ ಡಿ.ಸಿ. ದ್ರುವ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಉಚ್ಛ ನ್ಯಾಯಲಯದ ಆದೇಶದಂತೆ ಮಳಿಗೆಗಳನ್ನು 12 ವರ್ಷಗಳಿಗೊಮ್ಮೆ ನವೀಕರಣ ಮಾಡಿ ಮರು ಟೆಂಡರ್ ನಡೆಸಬೇಕು. ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ18, ಶೇ 50ರಷ್ಟು ಅಂಗವಿಕಲರಿಗೆ ಲಾಟರಿ ಮೂಲಕ ನೀಡಬೇಕು. ಈವರೆಗೆ ಅದ್ಯಾವ ಪ್ರಕ್ರಿಯೆಯನ್ನು ನಡೆಸದೆ ತಮಗಿಷ್ಟ ಬಂದವರಿಗೆ ಮಳಿಗೆಗಳನ್ನು ಕೊಡಲಾಗಿದೆ. ಪಂಚಾಯಿತಿಯ ಹಾಲಿ ಸದಸ್ಯರೊಬ್ಬರು ಮೂರು ಮಳಿಗೆಗಳನ್ನು ಹೊಂದಿದ್ದಾರೆ. ಬಹುತೇಕರು ಮಳಿಗೆಗಳನ್ನು ಪಡೆದುಕೊಂಡು ದುಬಾರಿಯಾಗಿ ಉಪ ಬಾಡಿಗೆ ನೀಡಿದ್ದಾರೆ. 10 ದಿನದೊಳಗೆ ಮರು ಟೆಂಡರ್ ಪ್ರಕ್ರಿಯೆ ನಡೆಸದಿದ್ದರೆ ಪಂಚಾಯಿತಿ ಎದುರು ಪ್ರತಭಟನೆ ನಡೆಸಲಾಗುವದು ಎಂದು ಹೇಳಿದರು.

ನಗರ ಅಧ್ಯಕ್ಷ ಜಿ.ಜಿ ಮೋಹನ್ ಮಾತನಾಡಿ, ಪಂಚಾಯಿತಿಯ ಮಾಸಿಕ ಸಭೆಯಲ್ಲಿ 19 ಜನ ಸದಸ್ಯರು ಒಗ್ಗೂಡಿ ಟೆಂಡರ್ ನಡೆಸದಂತೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಅದರಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತಗೊಂಡ ಇಬ್ಬರು ಹಾಗೂ ಮೂವರು ನಾಮಕರಣ ಸದಸ್ಯರು. ಸೇರ್ಪಡೆ ಗೊಂಡಿದ್ದಾರೆ. ಅವರ ವಿರುದ್ಧ ಹೈಕಮಾಂಡ್‍ಗೆ ದೂರು ನೀಡಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಎಂ.ಎಂ. ಶಶಿಧರನ್, ಉಪಾಧ್ಯಕ್ಷ ಅಜೀಜ್, ಕಾಂಗ್ರೆಸ್ ಸೇವಾದಳದ ಜಿಲ್ಲಾ ಸಂಚಾಲಕ ಚಿಲ್ಲವಂಡ ಕಾವೇರಪ್ಪ, ಮಹಿಳಾ ಕಾರ್ಯದರ್ಶಿ ಗಾಯತ್ರಿ ನರಸಿಂಹ, ಉಪಾಧ್ಯಕ್ಷ ಮಾಳೇಟಿರ ಬೋಪಣ್ಣ, ಎಝಾಜ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.