ಶ್ರೀಮಂಗಲ, ಜು. 9: ದಕ್ಷ, ಪ್ರಾಮಾಣಿಕ ಹಾಗೂ ಸಾಹಸಿ ಪೊಲೀಸ್ ಅಧಿಕಾರಿ ಎಂದು ಹೆಸರು ಗಳಿಸಿ, ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಹಾಗೂ ಉನ್ನತ ಅಧಿಕಾರಿಗಳ ಕಿರುಕುಳದ ತೀವ್ರತೆಯನ್ನು ಬಯಲುಮಾಡಿ ಆತ್ಮಹತ್ಯೆಗೆ ಶರಣಾದ ಡಿವೈಎ್ಪಸಿ ಎಂ.ಕೆ.ಗಣಪತಿ ಹೆಸರಿಸಿರುವವರ ವಿರುದ್ಧ ಕೂಡಲೇ ಎಫ್.ಐ,ಆರ್. ದಾಖಲಿಸಿ, ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ರಾಜ್ಯ ಸರ್ಕಾರವನ್ನು ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಆಗ್ರಹಿಸಿದ್ದಾರೆ.
ಪೊನ್ನಂಪೇಟೆಯಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಾವದೇ ಒಬ್ಬ ವ್ಯಕ್ತಿಯ ಮರಣ ಪತ್ರವನ್ನು ಸಾಕ್ಷಿಯೆಂದು ಪರಿಗಣಿಸಿ ಎಫ್.ಐ.ಆರ್ ದಾಖಲಿಸಿ ಕೊಂಡು ತನಿಖೆ ನಡೆಸ ಬೇಕಾಗಿರುವದು ನ್ಯಾಯಾಂಗದಲ್ಲಿ ಸ್ಪಷ್ಟ ಉಲ್ಲೇಖವಿದೆ. ಈ ನಿಟ್ಟಿನಲ್ಲಿ ಗಣಪತಿ ಯವರು ಆತ್ಮಹತ್ಯೆಗೆ ಕೆಲತಾಸುಗಳ ಹಿಂದೆ ಖಾಸಗಿ ಚಾನಲ್ಗಳಿಗೆ ನೀಡಿರುವ ಪ್ರತ್ಯಕ್ಷ ಸಂದರ್ಶನವನ್ನು ಮರಣಪತ್ರವೆಂದು ಪರಿಗಣಿಸಿ, ತಮ್ಮ ಅಂತಿಮ ಸಂದರ್ಶನದಲ್ಲಿ ತಮ್ಮ ಜೀವಕ್ಕೆ ಏನಾದರು ಆದರೆ, ಇವರೇ ಕಾರಣಕರ್ತರೆಂದು ಪ್ರಸ್ತಾಪಿಸಿ ಕಿರುಕುಳ ನೀಡಿದರೆಂಬ ಮೂವರು ವ್ಯಕ್ತಿಗಳ ಮೇಲೆ ಯಾವದೇ ದೂರು ಇದುವರೆಗೂ ದಾಖಲಾಗದಿರುವದು, ಈ ಸಾವಿನಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.
ಮಾಜಿ ಗೃಹಮಂತ್ರಿ ಕೆ.ಜೆ ಜಾರ್ಜ್ ಅವರ ಹೆಸರು ಈ ಹಿಂದಿನ ಹಲವು ಇದೇ ರೀತಿಯ ಪ್ರಕರಣಗಳಲ್ಲಿ ಕೇಳಿ ಬಂದಿದ್ದು, ಇದೀಗ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲೂ ಇವರ ಹೆಸರನ್ನು ಸಾಯುವ ಮುನ್ನ ಸಂದರ್ಶನದಲ್ಲಿ ಡಿವೈಎಸ್ಪಿ ಗಣಪತಿಯವರು ಪ್ರಸ್ತಾಪಿಸಿದ್ದರೂ ಕೂಡ ಆರೋಪಿ ಸ್ಥಾನದಲ್ಲಿರುವ ಕೆ.ಜೆ ಜಾರ್ಜ್ ಹಾಗು ಪೊಲೀಸ್ ಅಧಿಕಾರಿಗಳಾದ ಗುಪ್ತದಳದ ಎಡಿಜಿಪಿ ಎ.ಎನ್. ಪ್ರಸಾದ್ ಹಾಗೂ ಲೋಕಾಯುಕ್ತ ಡಿಜಿಪಿ ಪ್ರಣವ್ ಮೊಹಾಂತಿ ರಕ್ಷಣೆಗೆ ಸರ್ಕಾರ ಶತಾಯಗತಾಯ ಪ್ರಯತ್ನಿಸುತ್ತಿರುವದು ಅತ್ಯಂತ ನಾಚಿಕೆಕೇಡಿನ ವಿಷಯ ವಾಗಿದೆ ಎಂದು ಹೇಳಿದರು. ಮೊದಲು ಪ್ರಕರಣದ ಕುರಿತಂತೆ ಎಫ್ಐಆರ್ ದಾಖಲಿಸಿ ನಂತರ ತನಿಖೆಯಲ್ಲಿ ಇತರರ ಹೇಳಿಕೆಗಳನ್ನು ಪರಿಗಣಿಸಿ ಒಂದು ನಿರ್ಧಾರಕ್ಕೆ ಬರಬೇಕಾಗಿದ್ದ ಪೊಲೀಸರು, ಮನಬಂದಂತೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡುವದರ ಮೂಲಕ, ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವದು ಖಂಡನೀಯ ಎಂದು ಆರೋಪಿಸಿದ್ದಾರೆ.
ಕುಟುಂಬದವರು ಪ್ರಸ್ತಾಪಿಸಿ ರುವಂತೆ ಗಣಪತಿಯವರು ಎರಡು ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆಂಬ ವಿಚಾರವನ್ನು ಪೊಲೀಸರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿರುವದು ವಿಪರ್ಯಾಸವೇ ಸರಿ ಎಂದು ಹೇಳಿರುವ ಯುಕೊ ಸದಸ್ಯ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಈ ಮಾನಸಿಕ ಖಿನ್ನತೆಗೆ ಈ ಅಧಿಕಾರಿಗಳ, ಸಚಿವರ ಕಿರಿಕುಳವೇ ಕಾರಣವಾಗಿದ್ದು, ಈ ವಿಚಾರವಾಗಿ ನ್ಯಾಯಾಂಗ ತನಿಖೆ ಆಗಬೇಕಾಗಿದೆ ಎಂದು ಹೇಳಿದರು.
ಯುಕೊ ನಾಡ ಮಣ್ಣ್ ನಾಡ ಕೂಳ್ ಯೋಜನಾ ನಿರ್ದೇಶಕ ಚೆಪ್ಪುಡಿರ ಸುಜು ಕರುಂಬಯ್ಯ ಮಾತನಾಡಿ, ಡಿ.ಕೆ.ರವಿ ಪ್ರಕರಣದಂತೆ ಈ ಪ್ರಕರಣವೂ ಕೂಡ ಆಡಳಿತ ಪಕ್ಷ ಹಾಗೂ ಪ್ರತಿ ಪಕ್ಷಗಳ ಮತ್ತೊಂದು ರಾಜಕೀಯ ಪ್ರಹಸನಕ್ಕೆ ವೇದಿಕೆ ಯಾಗಿದೆ. ಇದುವರೆಗೆ ನಡೆದ ಹಲವು ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಲು ಪ್ರತಿಪಕ್ಷಗಳು ವಿಫಲವಾಗಿರುವದರಿಂದಲೇ ಯಾವದೇ ಪ್ರಕರಣದಲ್ಲಿ ಇದುವರೆಗೆ ನ್ಯಾಯ ದೊರಕಿಲ್ಲ. ಎಲ್ಲಾ ಪ್ರಕರಣ ದಲ್ಲಿಯೂ ಕೂಡ ಪ್ರಾರಂಭದಲ್ಲಿ ಮಾಧ್ಯಮದ ಮುಂದೆ ಅಬ್ಬರಿಸುವ ಪ್ರತಿಪಕ್ಷಗಳು ನಂತರ ರಾಜಕೀಯದಲ್ಲಿ ಎಲ್ಲರೂ ಒಂದೆ ಎಂಬ ಸಿದ್ದಾಂತಕ್ಕೆ ಬದ್ದರಾಗಿ ನ್ಯಾಯ ದೊರಕಿಸಿ ಕೊಡುವಲ್ಲಿ ವಿಫಲರಾಗುತ್ತವೆ. ಎಂದು ವ್ಯಂಗ್ಯವಾಡಿದರು.