ವೀರಾಜಪೇಟೆ, ನ. 11 ಕೇಂದ್ರ ಸರ್ಕಾರದ ರೂ. 500 ಮತ್ತು 1000 ಗಳ ನೋಟ್‍ನ ಚಲಾವಣೆಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮಲ್ಲಿರುವ ಹಣವನ್ನು ಬದಲಾಯಿಸಿಕೊಳ್ಳಲು ಪಟ್ಟಣ ವಿವಿಧ ಬ್ಯಾಂಕ್‍ಗಳ ಬಳಿ ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ಜಮಾಯಿಸಿದ ದೃಶ್ಯ ಕಂಡುಬಂತು.

ಎರಡು ದಿನಗಳ ಕಾಲ ಎಟಿಎಂಗೆ ರಜೆ ಇದ್ದ ಕಾರಣ ಜನತೆ ದಿನ ಬಳಕೆಗೆ ಬೇಕಾದ ಹಣವನ್ನು ಡ್ರಾ ಮಾಡಿಕೊಂಡ ಪರಿಣಾಮ 11 ಗಂಟೆಯ ಹೊತ್ತಿಗೆ ಹಣ ಖಾಲಿಯಾಯಿತು. ಬ್ಯಾಂಕ್‍ನ ಅಧಿಕಾರಿ ರಂಜಿತ್ ಅವರನ್ನು ಮಾಹಿತಿ ಬಯಸಿದಾಗ ರೂ. 100 ಗಳ ಬಂಡಲ್‍ಗಳನ್ನು ಲೋಡ್ ಮಾಡಲಾಗಿದೆ. ಕೆಲವೊಂದು ಸಂದರ್ಭದಲ್ಲಿ ತಾಂತ್ರಿಕ ತೊಂದರೆಯಿಂದ ಸ್ಥಗಿತಗೊಳ್ಳುತ್ತದೆ. 4 ಸಾವಿರದವರೆಗೆ ಹಣವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು. ಸ್ಟೇಟ್ ಬ್ಯಾಂಕ್‍ನ ಎದುರು ಟ್ರಾಫಿಕ್ ಜಾಮ್ ಆದ ಕಾರಣ ನಗರ ಪೋಲಿಸರು ವಾಹನ ದಟ್ಟಣೆಯನ್ನು ನಿಯಂತ್ರಿಸಿದರು. ಪಟ್ಟಣದ ಅಂಚೆ ಕಚೇರಿ ಹಾಗೂ ಎಚ್‍ಡಿಎಫ್‍ಸಿ ಸೇರಿದಂತೆ ಹಲವಾರು ಬ್ಯಾಂಕ್‍ಗಳಲ್ಲಿ ಹಣ ಖಾಲಿಯಾಗಿರುವ ಚಿತ್ರಣ ಕಂಡು ಬಂತು.