ಮಡಿಕೇರಿ, ಡಿ. 9: ಕೇಂದ್ರ ಸರ್ಕಾರ ಪೂರ್ವ ಸಿದ್ಧತೆ ಕೈಗೊಳ್ಳದೇ ಏಕಾಏಕಿ ನೋಟುಗಳ ಅಮಾನ್ಯೀಕರಣ ಮಾಡಿರುವದರಿಂದ ಹೊಸ ಖೋಟಾ ನೋಟುಗಳ ಚಲಾವಣೆಗೆ ನಾಂದಿ ಹಾಡಿದಂತಾಗಿದೆ ಎಂದು ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಆರೋಪಿಸಿದ್ದಾರೆ.ಕೊಡಗು ಜಿಲ್ಲಾ ಪ್ರಗತಿಪರ ಚಿಂತಕರ ವೇದಿಕೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ನೋಟುಗಳ ಅಮಾನ್ಯೀಕರಣದ ಪರಿಣಾಮಗಳು' ವಿಚಾರ ಸಂಕಿರಣದಲ್ಲಿ ಉದ್ಘಾಟನಾಕಾರರಾಗಿ ಭಾಗವಹಿಸಿ ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿ ಅವರು ರೂ. 500 ಹಾಗೂ 1000 ಮುಖ ಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ ಹೇಳಿಕೆ ನೀಡಿ, ಹೊಸ

ರೂ. 2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದ ಕೆಲವೇ ದಿನಗಳಲ್ಲಿ ರೂ. 2000 ಮುಖ ಬೆಲೆಯ ಖೋಟಾ ನೋಟುಗಳೂ ಚಲಾವಣೆಗೆ ಬಂದವು. ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ನಿಯಂತ್ರಣ ಹಾಗೂ ಖೋಟಾ ನೋಟುಗಳ ಚಲಾವಣೆಯನ್ನು ರದ್ದುಗೊಳಿಸುವದು ಮುಖ್ಯ ಉದ್ದೇಶ ಅಂತ ಹೇಳಿಕೆ ನೀಡಿದ ತಕ್ಷಣ ಭ್ರಮೆಯಲ್ಲಿ ಮುಳುಗಿದ ಕೆಲವರು ಸಂಭ್ರಮಾ ಚರಣೆಯಲ್ಲಿ ತೊಡಗಿದರು.

(ಮೊದಲ ಪುಟದಿಂದ) ದೇಶದಲ್ಲಿ ಭ್ರಷ್ಟಾಚಾರವನ್ನು ಸದೆ ಬಡಿಯುವದು ಅಂದರೆ ರೋಮಾಂಚನಕಾರಿಯಾಗಿದೆ. ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಅಗತ್ಯವಾಗಿ ನಿಲ್ಲಬೇಕಾಗಿದೆ. ಆದರೆ ನೋಟು ಅಮಾನ್ಯೀಕರಣದ ನಂತರ ಮತ್ತೆ ಭ್ರಷ್ಟಾಚಾರ ಹೆಚ್ಚಾಗಿದೆ. ಹಳೇ ನೋಟು ನಿಂತ ಬಳಿಕ ಹೊಸ ಖೋಟಾ ನೋಟುಗಳೂ ಚಲಾವಣೆ ಬಂದಿವೆ. ಜನತೆಯ ಕೈಗೆ ಸಿಗುವ ಮೊದಲೇ ರೂ. 2000 ಮುಖಬೆಲೆಯ ನೋಟುಗಳು ಉಗ್ರಗಾಮಿಗಳ ಕೈ ಸೇರಿದೆ. ಇತ್ತೀಚೆಗೆ ಹತನಾದ ಭಯೋತ್ಪಾದಕರ ಕಿಸೆಯಲ್ಲಿ ರೂ. 2000 ಮುಖ ಬೆಲೆಯ ನೋಟು ದೊರೆತಿದ್ದು, ಈ ಬಗ್ಗೆ ತನಿಖೆಯಾಗ ಬೇಕಾಗಿದೆ ಎಂದು ಆಗ್ರಹಿಸಿದರು.

ನೋಟುಗಳ ಅಮಾನ್ಯೀಕರಣದ ಬಳಿಕ ಬಡ ಜನತೆ, ಕೂಲಿ ಕಾರ್ಮಿಕರಿಗೆ ಸಮಸ್ಯೆಯಾಗಿದೆಯೇ ಹೊರತು, ಶ್ರೀಮಂತರಿಗೆ ಯಾವದೇ ರೀತಿಯ ತೊಂದರೆಯಾಗಿಲ್ಲ. ತಮ್ಮ ಕಿಸೆಯಲ್ಲಿರುವ ಹಣ ಕಪ್ಪು ಹಣವಲ್ಲ. ತೆರಿಗೆ ಪಾವತಿಸದೆ ಇರುವ ಹಣ ಮಾತ್ರ ಕಪ್ಪು ಹಣವಾಗಿದೆ. ಆದರೆ ಶ್ರೀಮಂತರು ಇಂದು ತಮ್ಮಲ್ಲಿರುವ ಕಪ್ಪು ಹಣವನ್ನು ಬಿಳಿ ಮಾಡಿಕೊಂಡಿದ್ದಾರೆ.

ಇಂದು ಒಂದೆಡೆ ಕಪ್ಪು ಹಣದ ವಿರುದ್ಧ ಧಾಳಿಯಾಗುತ್ತಿದ್ದು, ಇನ್ನೊಂದು ಶ್ರೀಮಂತರಿಗೆ ಬೇಕಾದಷ್ಟು ಹಣ ವಿತರಣೆಯಾಗುತ್ತಿದೆ ಎಂದು ಆರೋಪಿಸಿದ ಎ.ಕೆ. ಸುಬ್ಬಯ್ಯ ಅವರು ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ, ಖೋಟಾ ನೋಟು ನಿಯಂತ್ರಣ ಮಾಡುವದಕ್ಕಾಗಿ 50 ದಿನ ಕೇಳಿದ್ದಾರೆ. ಆದರೆ 200 ದಿನವಾದರೂ ಪರಿಸ್ಥಿತಿ ಸುಧಾರಣೆಯಾಗುವದಿಲ್ಲ. ಮೋದಿ ತಮ್ಮ ಹಿತೈಷಿಗಳ ಪರವಾಗಿ ಕೆಲಸ ಮಾಡಿದ್ದಾರೆ. ‘ಪೇಟಿಎಮ್' ಸಂಸ್ಥೆಗಳನ್ನು ಬೆಳೆಸುವ ಹುನ್ನಾರ ಇದು ಎಂದರು. ದೇಶದ ಶೇ.70ರಷ್ಟು ಪ್ರಾಮಾಣಿಕರು ಇಂದು ಅಪರಾಧಿ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಅವರನ್ನು ಸಂಶಯದಿಂದ ನೋಡುವಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕನ್ನಡ ಪ್ರಭಾ ಪತ್ರಿಕೆಯ ಅಂಕಣಕಾರ ಡಾ.ಕೆ.ಸಿ. ರಘು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯೀಕರಣಗೊಳಿಸಿ ಉದ್ಯಮಿಗಳ ಪರವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಆರೋಪಿಸಿ ಕ್ಯಾಶ್‍ಲೆಸ್ ಯೋಜನೆಯಿಂದ ಜನತೆಯನ್ನು ಮಾಲ್ ಸಂಸ್ಕøತಿ, ಸೂಪರ್ ಮಾರ್ಕೆಟ್ ಸಂಸ್ಕøತಿಗೆ ಕೊಂಡೊಯ್ಯುತ್ತಿದ್ದಾರೆ. ಶೇ. 80ರಷ್ಟು ಜನತೆಗೆ ನೋಟು ಅಮಾನ್ಯೀಕರಣದಿಂದಾಗಿ ಸಮಸ್ಯೆಯಾಗಿದೆ. 20 ಕೋಟಿ ದಿನಗೂಲಿ ನೌಕರರಿಗೆ ಸಮಸ್ಯೆಯಾಗಿದ್ದು, 6 ಕೋಟಿ ಸಣ್ಣ ಉದ್ದಿಮೆದಾರರಿಗೆ ಹಾಗೂ 18 ಕೋಟಿ ಕಾರ್ಮಿಕರಿಗೆ ಸಮಸ್ಯೆಯಾಗಿದೆ. ಕ್ಯಾಶ್‍ಲೆಸ್ ವ್ಯವಹಾರದಿಂದಾಗಿ ಬೀದಿಬದಿ ವ್ಯಾಪಾರಿಗಳಿಗೂ ತೊಂದರೆಯಾಗಿದೆ ಎಂದ ಅವರು, 2 ಕೋಟಿ ಜನರಿಗೆ ಉದ್ಯೋಗ ದೊರಕಬೇಕಾದಲ್ಲಿ ಕೇವಲ 2.5 ಲಕ್ಷ ಮಂದಿಗೆ ಮಾತ್ರ ಉದ್ಯೋಗ ದೊರೆತಿದೆ. ಜೊತೆಗೆ ತಾಂತ್ರಿಕತೆಯ ಪರಿಣಾಮವಾಗಿ ಸುಮಾರು 12 ಲಕ್ಷ ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ರಾಜಕೀಯ ಪಕ್ಷಗಳಲ್ಲೇ ಹೆಚ್ಚು ಕಪ್ಪು ಹಣವಿದೆ ಎಂದು ಆರೋಪಿಸಿದ ರಘು ಅವರು ಇಂದು ಆ ಹಣವೆಲ್ಲ ಬಿಳಿಯಾಗಿದೆ. ಆದರೆ ಕಷ್ಟ ಪಟ್ಟು ದುಡಿದು ಸಂಪಾದಿಸಿದ ಬಡವರು ತಮ್ಮ ಹಣವನ್ನು ಕಳೆದುಕೊಳ್ಳುವಂತಾಗಿದೆ. ತಮ್ಮ ಹಣವನ್ನೇ ಉಪಯೋಗಿಸದಂತಹ ಪರಿಸ್ಥಿತಿಯಿದ್ದು, ಇದು ತುರ್ತು ಪರಿಸ್ಥಿತಿಗಿಂತಲೂ ಭಯಾನಕ ಪರಿಸ್ಥಿತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಮಿಕರ ಘಟಕದ ಅಧ್ಯಕ್ಷ ವಿ.ಪಿ. ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ನೋಟು ಅಮಾನ್ಯೀಕರಣ ಮಾಡಬೇಕಾದರೆ ಪೂರ್ವ ಸಿದ್ಧತೆ ಅಗತ್ಯ. ಆದರೆ ಪ್ರಧಾನಿ ಮೋದಿ ಅವರು ಯಾವದೇ ಪೂರ್ವ ಸಿದ್ಧತೆ ಕೈಗೊಂಡಿಲ್ಲ. ಕುಗ್ರಾಮಗಳಲ್ಲಿ ಈಗಲೂ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲ. ನಗದು ರೂಪದಲ್ಲಿಯೇ ವ್ಯವಹಾರ ನಡೆಯುತ್ತಿದೆ. ನೋಟುಗಳ ಅಮಾನ್ಯೀಕರಣದ ಬಳಿಕ ರೂ. 500 ಹಾಗೂ 100ರ ಮುಖಬೆಲೆಯ ನೋಟುಗಳನ್ನು ಹೆಚ್ಚುವರಿ ಸರಬರಾಜು ಮಾಡಬೇಕಾಗಿತ್ತು. ಪರಿಸ್ಥಿತಿ ಬಿಗಡಾಯಿಸಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಉತ್ತರಿಸದೆ ಅಸಡ್ಡೆಯಿಂದ ವರ್ತಿಸಿದ್ದಾರೆ. ಜಿಲ್ಲೆಯಲ್ಲಿ ಹೊರರಾಜ್ಯದ ಕಾರ್ಮಿಕರು ಅಧಿಕವಿದ್ದು, ಅವರಿಗೂ ಸಮಸ್ಯೆಯಾಗಿದೆ ಎಂದರು.

ವೇದಿಕೆಯಲ್ಲಿ ಸಿಪಿಐ (ಎಂ) ಜಿಲ್ಲಾಧ್ಯಕ್ಷ ಡಾ.ಇ.ಆರ್. ದುರ್ಗಾ ಪ್ರಸಾದ್, ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಉಪಸ್ಥಿತರಿದ್ದರು.

ವಕೀಲ ವಿದ್ಯಾಧರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಅಲ್ಲಾರಂಡ ವಿಠಲ್ ನಂಜಪ್ಪ, ಮನುಶೆಣೈ ಹಾಗೂ ಇನ್ನಿತರರು ಇದ್ದರು.