ಮಡಿಕೇರಿ ಜ.5 : ನೋಟುಗಳು ಅಮಾನ್ಯೀಕರಣಗೊಂಡಿರುವದರಿಂದ ದೇಶ ಮತ್ತಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸಲಿದ್ದು, ಭಾರತದಂತಹ ಪ್ರದೇಶದಲ್ಲಿ ಕ್ಯಾಶ್‍ಲೆಸ್ ವ್ಯವಹಾರ ಕಷ್ಟಸಾಧ್ಯವೆಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೋಟು ಗಳನ್ನು ಅಮಾನ್ಯೀಕರಣ ಗೊಳಿಸಿದ ಪ್ರಧಾನಿ ಮೋದಿ ಅವರ ದಿಢೀರ್ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸಣ್ಣ ವ್ಯಾಪಾರಿಗಳು, ರೈತರು, ಜನ ಸಾಮಾನ್ಯರೆ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತದಲ್ಲಿ ಕ್ಯಾಶ್ ಲೆಸ್ ವ್ಯವಹಾರ ಕಷ್ಟವೆಂದರು. ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಆರ್ಥಿಕ ಕ್ಷೇತ್ರದ ಕ್ರÀಮಗಳು ಅವೈಜ್ಞಾನಿಕವಾಗಿದ್ದು, ನೋಟುಗಳ ಅಮಾನ್ಯೀಕರಣದಿಂದ ದೇಶ ಮುಂದಿನ ದಿನಗಳಲ್ಲಿ ಮತ್ತಷ್ಟು ಕಷ್ಟದ ವಾತಾವರಣವನ್ನು ಎದುರಿಸಬೇಕಾಗ ಬಹುದೆಂದು ಆತಂಕ ವ್ಯಕ್ತಪಡಿಸಿದರು.

ಅಮೇರಿಕಾದಂತಹ ದೇಶದಲ್ಲೆ ಇಂದಿಗೂ ನೋಟುಗಳ ಚಲಾವಣೆ ಇದ್ದು, ಶೇ. 25 ರಷ್ಟು ಮಂದಿ ಕ್ಯಾಶ್ ಮೂಲಕವೆ ವ್ಯವಹರಿಸುತ್ತಾರೆ, ಶೇ.25 ರಷ್ಟು ಮಂದಿ ಕ್ಯಾಶಲೆಸ್ ವ್ಯವಹಾರ ನಡೆಸುತ್ತಾರೆ. ಉಳಿದ ಶೇ.50 ರಷ್ಟು ಮಂದಿ ಕ್ಯಾಶ್ ಲೆಸ್ ಮತ್ತು ಕ್ಯಾಶ್ ಎರಡನ್ನೂ ತಮ್ಮ ವ್ಯವಹಾರದಲ್ಲಿ ಬಳಸುವವರಾಗಿದ್ದಾರೆ ಎಂದರು. ಇನ್ನು ಮುಂದೆಯಾದರು ಕೇಂದ್ರ ಸರ್ಕಾರ ಆರ್ಥಿಕ ಸಂಕಷ್ಟ ಎದುರಾಗದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆಯೆಂದು ಜೀವಿಜಯ ಅಭಿಪ್ರಾಯಪಟ್ಟರು.

ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಎಸ್.ಬಿ. ಭರತ್ ಕುಮಾರ್ ಮಾತನಾಡಿ, ನೋಟುಗಳ ಅಮಾನ್ಯೀಕರಣದಿಂದ ರೈತರಿಗೆ ಹೆಚ್ಚಿನ ತೊಂದರೆಯಾಗಿದೆ ಎಂದರು. ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜಿಲ್ಲೆಗೆ ಯಾವದೇ ಲಾಭವಾಗಿಲ್ಲವೆಂದು ಟೀಕಿಸಿದ ಅವರು, ಕೊಡ್ಲಿಪೇಟೆ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಗೆ ಸರ್ವೆ ಕಾರ್ಯ ನಡೆಯುತ್ತಿದೆಯೆ ಹೊರತು ಕಾಮಗಾರಿ ಆರಂಭಗೊಂಡಿಲ್ಲ ವೆಂದರು. ಸೋಮವಾರಪೇಟೆ ತಾಲೂಕಿನಲ್ಲಿ ಯಾವದೇ ಕುಡಿಯುವ ನೀರಿನ ಯೋಜನೆಗಳು ಕಾರ್ಯಗತ ವಾಗುತ್ತಿಲ್ಲ ಮತ್ತು ಬರಗಾಲದ ಪರಿಸ್ಥಿತಿಗೆ ಸ್ಪಂದನೆÀ ದೊರೆಯುತ್ತಿಲ್ಲ. ಜಿಲ್ಲೆಯ ಶಾಸಕರುಗಳು ಕೂಡ ಅಭಿವೃದ್ಧಿ ಕಾರ್ಯಗಳ ನೇತೃತ್ವ ವಹಿಸುತ್ತಿಲ್ಲವೆಂದು ಟೀಕಿಸಿದ ಭರತ್ ಕುಮಾರ್, ಬಿಜೆಪಿ ಕೇವಲ ಕೋಮು ಗಲಭೆಯಲ್ಲಿ ತೊಡಗಿದೆ ಮತ್ತು ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಿಂದೂ ಸಮಾವೇಶ ನಡೆಸುವದರಲ್ಲೆ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ನೋಟು ಅಮಾನ್ಯೀಕರಣ ಗೊಳಿಸಿದ ನಂತರದ 50 ದಿನಗಳಲ್ಲಿ 61 ಮಾನದಂಡಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರಕಾರ ಜನ ಸಾಮಾನ್ಯರಿಗೆ ಕ್ಷಣ ಕ್ಷಣಕ್ಕು ತೊಂದರೆಯನ್ನು ನೀಡಿದೆ ಎಂದು ಆರೋಪಿಸಿದರು. ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆ ಶೂನ್ಯವೆಂದು ಟೀಕಿಸಿದ ಅವರು, ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತಾಳಿದೆಯೆಂದು ಆರೋಪಿಸಿದರು.