ಸುಂಟಿಕೊಪ್ಪ, ಜೂ. 10: ಸುಂಟಿಕೊಪ್ಪ ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಪಿಯುಸಿ ಕಟ್ಟಡ ವರ್ಷವಾದರೂ ತೆರೆಯದೇ ನೆನೆಗುದಿಗೆ ಬಿದ್ದಿದೆ.

ಸುಂಟಿಕೊಪ್ಪದಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಒಂದೇ ಪ್ರಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿದೆ, ಓಬಿರಾಯನ ಕಾಲದ ಸರಕಾರಿ ಕೊಠಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ವಿದ್ಯಾರ್ಜನೆ ಮಾಡುವಂತಾಗಿದೆ.

ಸ್ಥಳೀಯರ ಒತ್ತಾಯದ ಮೇರೆಗೆ ಶಾಸಕ ಅಪ್ಪಚ್ಚು ರಂಜನ್ ಅವರು ಉಲುಗುಲಿ (ಮಾರುಕಟ್ಟೆ) ರಸ್ತೆಯ ಸಮೀಪದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಸ್ಥಾಪಿಸಲು 2011 ರ ಜನವರಿ 29 ರಂದು ಶಂಕುಸ್ಥಾಪನೆಗೆ ಅಡಿಗಲ್ಲು ಇಟ್ಟರು. ಲೋಕೋಪ ಯೋಗಿ ಬಂದರು ಹಾಗೂ ಒಳನಾಡು ಇಲಾಖೆ, ನಬಾರ್ಡ್ ಆರ್‍ಐಡಿಎಫ್‍ನ 11ನೇ ಹಣಕಾಸು ಯೋಜನೆಯಡಿ ಸುಮಾರು ರೂ. 21 ಲಕ್ಷ ವೆಚ್ಚದಲ್ಲಿ ಕಾಲೇಜು ಕಟ್ಟಡಕ್ಕೆ ಅನುದಾನ ಲಭ್ಯವಾಗಿತ್ತು.

ಶಂಕುಸ್ಥಾಪನೆಯ ಉದ್ಘಾಟನಾ ಸಮಾರಂಭದಲ್ಲಿ ಆಗಿನ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಆಗಿನ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯ ಅರಣ್ಯ ಸಚಿವರಾದ ವಿಜಯ ಸಂಕೇಶ್ವರ್, ಸಂಸದ ಹೆಚ್. ವಿಶ್ವನಾಥ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ್ ಹೆಗಡೆ, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಸಿ. ನಾಣಯ್ಯ, ಗಣೇಶ್ ಕಾರ್ಣಿಕ್, ಟಿ. ಜಾನ್ ಹಾಗೂ ಜಿ.ಪಂ. ಸದಸ್ಯ ಬಿ.ಬಿ. ಭಾರತೀಶ್, ತಾ.ಪಂ ಸದಸ್ಯ ಲತೀಫ್ ಆಗಮಿಸಿದ್ದರು.

ಉಲುಗುಲಿ ರಸ್ತೆಯಲ್ಲಿ ಕಳೆದ 5-6 ವರ್ಷಗಳಿಂದ ಪಿ.ಯು. ಕಾಲೇಜು ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೂ ಕೊಠಡಿ ಕಾಮಗಾರಿ ಪೂರ್ಣ ಗೊಂಡಿಲ್ಲ.

ಇಲ್ಲಿನ ಜನಪ್ರತಿನಿಧಿಗಳು ಸಹ ಆಸಕ್ತಿ ವಹಿಸಿದಂತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಕೊಠಡಿ ಕಾಮಗಾರಿಯಲ್ಲಿ ಶೇ. 90 ರಷ್ಟು ಕೆಲಸ ಮುಗಿದಿದ್ದರೂ ವಿದ್ಯಾರ್ಥಿಗಳಿಗೆ ಬೇಕಾದ ಶೌಚಾಲಯದ ವ್ಯವಸ್ಥೆ ಕಾಮಗಾರಿ ಇನ್ನೂ ನಡೆದಿಲ್ಲ. ಒಟ್ಟಾರೆ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಕಾಲೇಜು ವಿದ್ಯಾರ್ಥಿಗಳು ಹಳೆಯ ಕಾಲೇಜಿನ ಕೊಠಡಿಯಲ್ಲೇ ಪಾಠ-ಪ್ರವಚನದಲ್ಲಿ ತೊಡಗಿರುವದಕ್ಕೆ ಸ್ಥಳೀಯರು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳೆ ಕಾಲೇಜಿನ ಕೊಠಡಿಯಲ್ಲಿ ವಿದ್ಯಾರ್ಜನೆ ಮಾಡುವ ಕಲಾ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅತಿಯಾದ ಮಳೆಯಾದಾಗ ಕೊಠಡಿ ಮಳೆಯಿಂದ ಸೋರುತ್ತಿರುವದರಿಂದ ಪಾಠ-ಪ್ರವಚನಕ್ಕೆ ಅಡ್ಡಿಯಾಗುತ್ತಿದೆ. ಉಪನ್ಯಾಸಕರು ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಪಾಠ ಮಾಡುವ ಪರಿಸ್ಥಿತಿಯಿದೆ.

ಉಲುಗುಲಿ ರಸ್ತೆಯ ಬಳಿ ನಿರ್ಮಾಣವಾಗಿರುವ ನೂತನ ಸರಕಾರಿ ಪದವಿಪೂರ್ವ ಕಾಲೇಜಿನ ಕಟ್ಟಡಕ್ಕೆ ಆದಷ್ಟು ಬೇಗ ವಿದ್ಯಾರ್ಥಿ ಗಳನ್ನು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.