ಮಡಿಕೇರಿ, ಆ. 17: ಕೇಂದ್ರ ಸರಕಾರ ನೂತನ ಕಾಫಿ ಕಾಯ್ದೆಯನ್ನು ಜಾರಿಗೆ ತರುವ ಉತ್ಸಾಹದಲ್ಲಿರುವಾಗಲೇ ಕರ್ನಾಟಕ ರಾಜ್ಯದ ಕಾಫಿ ಬೆಳೆಯುವ ಜಿಲ್ಲೆಗಳ ಬೆಳೆಗಾರರಿಂದ ಆಕ್ಷೇಪಣೆಗಳು ವ್ಯಕ್ತವಾಗಿದೆ. ಕೇಂದ್ರ ಸರಕಾರದ ಈ ದಿಢೀರ್ ನಿರ್ಧಾರಕ್ಕೆ ಆಶ್ಚರ್ಯ ವ್ಯಕ್ತ ಪಡಿಸಿರುವ ಕರ್ನಾಟಕ ಬೆಳೆಗಾರರ ಒಕ್ಕೂಟ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ವಾಣಿಜ್ಯ ಸಚಿವರಿಗೆ ಪತ್ರ ಬರೆದು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಬೆಳೆಗಾರರ ಒಕ್ಕೂಟದ ಸಂಚಾಲಕÀ ಕೆ. ವಿಶ್ವನಾಥ್, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರಿನ ಕಾಫಿ ಬೆಳೆಗಾರರ ಸಂಘಟನೆಗಳು ಕೇಂದ್ರದ ನೂತನ ಕಾಯ್ದೆ ಬಗ್ಗೆ ಸ್ಪಷ್ಟನೆ ಬಯಸಿದೆ ಎಂದರು. ಮೂರು ಜಿಲ್ಲೆಗಳಲ್ಲಿ ಸುಮಾರು 50 ಸಾವಿರ ಬೆಳೆÉಗಾರ ಸದಸ್ಯರಿದ್ದು, ಎಲ್ಲವೂ ಬೆಳೆಗಾರರ ಅಭಿಪ್ರಾಯಕ್ಕೆ ಪೂರಕವಾಗಿರಬೇಕು. ಆದರೆ, ಬೆಳೆಗಾರರಿಗೆ ಸಂಬಂಧಿಸಿದ ಯಾವದೇ ಸಂಘ ಸಂಸ್ಥೆಗಳ ಅಭಿಪ್ರಾಯಗಳನ್ನು ಪಡೆಯದೇ ಕಾಯ್ದೆ ಜಾರಿಗೆ ಮುಂದಾಗಿರುವದು ಗೊಂದಲ ಸೃಷ್ಟಿಗೆ ಕಾರಣವಾಗಿದೆ.

ಈಗಿನ ಕಾಯ್ದೆ ಪ್ರಕಾರ ಕಾಫಿ ಮಂಡಳಿಯ ಅಧ್ಯಕ್ಷರಿಗೆ ಯಾವದೇ ಅಧಿಕಾರ ಇಲ್ಲದಾಗಿದೆ. ತೋಟಗಳನ್ನು ನೋಂದಾವಣಿ ಮಾಡಿಕೊಳ್ಳಬೇಕೆಂದು ಹೇಳಲಾಗಿದ್ದು, ಕಾಫಿ ಮಂಡಳಿಗಳಿಗೆ ತೋಟಗಳನ್ನು ಪರಿಶೀಲನೆ ನಡೆಸುವ ಅಧಿಕಾರವನ್ನು ನೀಡಲಾಗಿದೆ. ಇದರ ಔಚಿತ್ಯದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಬೇಕೆಂದು ಕೆ.ವಿಶ್ವನಾಥ್ ತಿಳಿಸಿದರು.

ಒಕ್ಕೂಟದ ಅಭಿಪ್ರಾಯಗಳು

ಕರಡು ಕಾಯ್ದೆಯನ್ನು ಹೊರಡಿಸುವ ಮುನ್ನ ಸಂಬಂಧಪಟ್ಟ ಬೆಳೆಗಾರರ ಹಾಗೂ ಸಂಘ ಸಂಸ್ಥೆಗಳ ಅಭಿಪ್ರಾಯವನ್ನು ಪಡೆದುಕೊಳ್ಳಬೇಕಿತ್ತು. ಪ್ರಸ್ತುತ ಆಡಳಿತ ಮಂಡಳಿಯ ಸದಸ್ಯತ್ವವನ್ನು 29 ರಿಂದ 20 ಕ್ಕೆ ಇಳಿಸಿರುವದು ಸರಿಯಾದ ಕ್ರಮವಲ್ಲ. ಕಾಫಿ ಬೆಳೆಗಾರರ ಹಾಗೂ ಇತರ ಸದಸ್ಯರ ಸದಸ್ಯತ್ವದ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲದಿರುವದು ಕಂಡು ಬಂದಿದೆ. ಆಡಳಿತ ಮಂಡಳಿಯ ಕಾಲಾವಧಿಯ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಒದಗಿಸಿಲ್ಲ. ಕಾಫಿ ಮಂಡಳಿಯ ಸಿಬ್ಬಂದಿಗಳಿಗೆ ಪ್ರಸ್ತುತ ಕಾಯ್ದೆ ಬಗ್ಗೆ ಯಾವದೇ ಮಾಹಿತಿ ನೀಡಿಲ್ಲ. ಪ್ರಸ್ತುತ ಕಾಫಿ ಬೆಳೆಯುತ್ತಿರುವ ಪ್ರದೇಶ 1950-51 ಕ್ಕೆ ಹೋಲಿಸಿದಲ್ಲಿ 4.6 ರಷ್ಟು ಪಟ್ಟು ಹೆಚ್ಚಿದೆ. ಕರ್ನಾಟಕ ರಾಜ್ಯ ದೇಶದ ಶೇ. 54.44 ರಷ್ಟು ಕಾಫಿ ಬೆಳೆಯುವ ಪ್ರದೇಶವನ್ನು ಹೊಂದಿದ್ದು, ಉತ್ಪಾದನೆಯಲ್ಲಿ ಶೇ. 72.31ರಷ್ಟು ಆಗಿದೆ. ವಿಶ್ವವಾಣಿಜ್ಯ ಸಂಸ್ಥೆಯ ಜೊತೆ ಒಡಂಬಡಿಕೆ ಮಾಡಿಕೊಂಡ ನಂತರ ವಾಣಿಜ್ಯ ಬೆಳೆಗಳಿಗೆ ಬೆಂಬಲ ಬೆಲೆ ಮತ್ತಿತರ ಸೌಲಭ್ಯಗಳು ಇಲ್ಲದಂತಾಗಿದೆ. ಪ್ರಸ್ತುತ ಕಾಫಿ ಧಾರಣೆ ಕುಸಿತ ಗೊಂಡಿದ್ದು, ಬೆಳೆಗಾರರು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕಾಫಿ ಬೆಳೆಗಾರರ ಹಿತ ದೃಷ್ಟಿಯಿಂದ ಕಾಫಿ ಮಂಡಳಿಯಲ್ಲಿ ಹೆಚ್ಚಿನ ಸದಸ್ಯರು ಪ್ರತಿನಿಧಿಸುವ ಅಗತ್ಯವಿದೆ ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.

ಒಕ್ಕೂಟದ ಒತ್ತಾಯ

ಕಾಫಿ ಕಾಯ್ದೆ ಬದಲಾವಣೆ ಸಂದರ್ಭ ಸಂಬಂಧಪಟ್ಟವರ ಅಭಿಪ್ರಾಯವನ್ನು ಪಡೆಯಬೇಕು, ಬೆಳೆಗಾರರು, ಮಾರಾಟಗಾರರು ಮತ್ತಿತರ ಸಂಬಂಧಪಟ್ಟ ವ್ಯಕ್ತಿಗಳ ಅಭಿಪ್ರಾಯದಂತೆ ಪೂರಕವಾಗಿ ಕಾಯ್ದೆಯನ್ನು ತಯಾರಿಸಬೇಕು, ಕಾಫಿ ತೋಟದ ಮಾಲೀಕ ಹಾಗೂ ತೋಟದ ಹೆಸರನ್ನು ನೋಂದಾಯಿಸಬೇಕೆಂದಿದ್ದು, ಇದರ ಔಚಿತ್ಯದ ಬಗ್ಗೆ ಸ್ಪಷ್ಟ ಪಡಿಸಬೇಕು. ಪ್ರಸ್ತುತ ಕಾಫಿ ಕಾಯ್ದೆ 2016 ರಲ್ಲಿ ಮಂಡಿಸಿರುವ ವಿಚಾರಗಳಿಗೂ ಕಾನೂನು ಪುಸ್ತಕ 2016 ರಲ್ಲಿರುವ ವಿಚಾರಗಳಿಗೂ ತಾಳೆ ಇಲ್ಲ. ಕಾಫಿ ಮಂಡಳಿಯಲ್ಲಿ ಕಾಫಿ ಬೆಳೆಗಾರರ ಸದಸ್ಯರ ಸಂಖ್ಯೆ ಬಗ್ಗೆ ಉಲ್ಲೇಖವಿಲ್ಲ.

ಕಾಫಿ ಮಂಡಳಿಯ ಅಧಿಕಾರವಧಿ ಮೂರು ವರ್ಷ ಎಂದಿದ್ದರೂ ಸರ್ಕಾರ ಯಾವಾಗ ಬೇಕಾದರೂ ಹೊಸ ಮಂಡಳಿಯನ್ನು ರಚಿಸುವ ಅಧಿಕಾರವನ್ನು ಹೊಂದಿದೆ. ಆದರೆ, ಒಮ್ಮೆ ರಚನೆಯಾದ ಮಂಡಳಿಯನ್ನು ಮೂರು ವರ್ಷಗಳವರೆಗೆ ಬದಲಾಯಿಸಬಾರದೆನ್ನುವ ಅಭಿಪ್ರಾಯ ಒಕ್ಕೂಟದ್ದಾಗಿದೆ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

ಕಾಫಿ ಕಾಯ್ದೆ 2016ರಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಪ್ರಮುಖ ಸ್ಥಾನವೆಂದು ಉಲ್ಲೇಖಿಸಿದ್ದು, ಕಾಫಿ ಕಾನೂನು ಪುಸ್ತಕ 2016ರಲ್ಲಿ ಪ್ರಧಾನ ಕಾರ್ಯದರ್ಶಿಗಳು ಮಂಡಳಿಯ ಪ್ರಮುಖ ಸ್ಥಾನವನ್ನು ಹೊಂದಿರುತ್ತಾರೆಂದು ತಿಳಿಸಲಾಗಿದೆ, ಇದು ಗೊಂದಲವನ್ನು ಸ್ಪಷ್ಟಿಸಿದೆ. ಆದ್ದರಿಂದ ಅಧ್ಯಕ್ಷರ ಕಾರ್ಯವ್ಯಾಪ್ತಿಯ ಬಗ್ಗೆ ಸ್ಪಷ್ಟ ಪಡಿಸಬೇಕೆಂದು ಒಕ್ಕೂಟ ಒತ್ತಾಯಿಸಿರುವದಾಗಿ ವಿಶ್ವನಾಥ್ ತಿಳಿಸಿದರು.

ಮಂಡಳಿಯಲ್ಲಿ ಬೆಳೆಗಾರರ ಸದಸ್ಯತ್ವದ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಒಮ್ಮೆ ಅಧಿಕಾರಕ್ಕೆ ಬಂದ ಆಡಳಿತ ಮಂಡಳಿ ಮೂರು ವರ್ಷಗಳಿರಬೇಕು, ಕಾಫಿ ಮಂಡಳಿಯ ನೇತೃತ್ವವನ್ನು ಅಧ್ಯಕ್ಷರೇ ಹೊಂದಬೇಕು ಎನ್ನುವ ಒತ್ತಾಯ ಒಕ್ಕೂಟದ್ದಾಗಿದೆ ಎಂದರು.

ಒಕ್ಕೂಟದ ಹಿರಿಯ ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಮಾತನಾಡಿ, ಒಂದು ಬಾರಿ ನೂತನ ಕಾಯ್ದೆ ಜಾರಿಯಾದರೆ ಅದನ್ನು ಮತ್ತೆ ತಿದ್ದುಪಡಿ ಮಾಡಲು ಸಾಕಷ್ಟು ವರ್ಷಗಳೇ ಬೇಕಾಗುವದರಿಂದ ಕಾಯ್ದೆ ಜಾರಿಗೆ ಮುನ್ನ ಸೂಕ್ಷ್ಮವಾಗಿ ಅವಲೋಕಿಸಬೇಕೆಂದು ಅಭಿಪ್ರಾಯಪಟ್ಟರು. ಕಾಫಿ ಬೆಳೆಯುವ ಪ್ರದೇಶಗಳ ಸಂಘ ಸಂಸ್ಥೆಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಕಾಯ್ದೆ ಜಾರಿ ಕುರಿತು ಚಿಂತನೆ ನಡೆಸುವಂತೆ ಸಂಸದ ಪ್ರತಾಪ ಸಿಂಹ ಅವರ ಗಮನವನ್ನೂ ಸೆಳೆಯಲಾಗಿದ್ದು, ಈ ಬಗ್ಗೆ ಸಂಸದರು ಸ್ಪಂದಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ವಲಸೆ ಕಾರ್ಮಿಕರು ಅನಿವಾರ್ಯ

ಒಕ್ಕೂಟದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮೋಹನ್ ಬೋಪಣ್ಣ ಮಾತನಾಡಿ ಕಾಫಿ ತೋಟಗಳಲ್ಲಿ ವಲಸೆ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವದನ್ನು ಸಮರ್ಥಿಸಿಕೊಂಡರು. ಕಾರ್ಮಿಕರ ಕೊರತೆಯಿಂದ ಬೇಸತ್ತಿದ್ದ ಕಾಫಿ ಬೆಳೆಗಾರರು ಅನಿವಾರ್ಯವಾಗಿ ಬಿಹಾರ ಹಾಗೂ ಅಸ್ಸಾಂನ ಕಾರ್ಮಿಕರನ್ನು ಅವಲಂಬಿಸಬೇಕಾಯಿತು. ವಲಸೆ ಕಾರ್ಮಿಕರಲ್ಲಿ ಬಾಂಗ್ಲಾದೇಶಿಗರು ಇದ್ದಾರೆ ಎನ್ನುವದನ್ನು ಸರ್ಕಾರ ಕಂಡು ಹಿಡಿಯಬೇಕೆ ಹೊರತು ಬೆಳೆಗಾರರಲ್ಲ. ಆದರೆ, ಬೆಳೆಗಾರರು ತಮ್ಮ ಬಳಿ ದುಡಿಯುತ್ತಿರುವ ಕಾರ್ಮಿಕರ ಸಂಪೂರ್ಣ ಮಾಹಿತಿಯನ್ನು ಪೆÇಲೀಸ್ ಠಾಣೆಗಳಲ್ಲಿ ಸಿಗುವ ಅರ್ಜಿಯಲ್ಲಿ ಭರ್ತಿ ಮಾಡಿ ಕೊಡುವದು ಮುಂಜಾಗೃತಾ ಕ್ರಮವಾಗಿ ಸೂಕ್ತವೆಂದು ಮೋಹನ್ ಬೋಪಣ್ಣ ತಿಳಿಸಿದರು.

ಸ್ಥಳೀಯ ಕಾರ್ಮಿಕರನ್ನು ಬೆಳೆಗಾರರು ಕಡೆಗಣಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ವಲಸೆ ಕಾರ್ಮಿಕರಿಂದ ಸುಗಮವಾಗಿ ಕೆಲಸ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು. ಆದರೆ, ಸ್ಥಳೀಯರು ಕೆಲಸದ ಸಮಯ ಮತ್ತು ವೇತನದಲ್ಲಿ ಹೊಂದಾಣಿಕೆ ಮಾಡಿಕೊಳ್ಳದೇ ಇರುವದು ಬೆಳೆಗಾರರು ವಲಸೆ ಕಾರ್ಮಿಕರನ್ನು ಅವಲಂಬಿಸಲು ಕಾರಣವೆಂದು ಅವರು ಸ್ಪಷ್ಪಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರತ್ತು ಚಂಗಪ್ಪ, ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಎಸ್.ಎ. ಸೋಮಶೇಖರ್ ಹಾಗೂ ಶನಿವಾರಸಂತೆ ಅಧ್ಯಕ್ಷ ಲಕ್ಷ್ಮಣ ಹಾಜರಿದ್ದರು.