ಮಡಿಕೇರಿ, ಅ. 22: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಫಿ ಕಾಯ್ದೆಯಿಂದ ಬೆಳೆಗಾರರು ಹಾಗೂ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟಿರುವ ಕೊಡಗು ಡಿಸ್ಟ್ರಿಕ್ಟ್ ಜನರಲ್ ವರ್ಕರ್ಸ್ ಯೂನಿಯನ್ ಹಾಗೂ ಕೊಡಗು ಜಿಲ್ಲಾ ತೋಟ ಕಾರ್ಮಿಕರ ಸಂಘ ಕಾಯ್ದೆಯನ್ನು ಜಾರಿಗೆ ತರಬಾರದೆಂದು ಒತ್ತಾಯಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವರ್ಕರ್ಸ್ ಯೂನಿಯನ್ ಕಾರ್ಯದರ್ಶಿ ಎ. ಮಹದೇವ, ನೂತನ ಕಾಫಿ ಕಾಯ್ದೆ ಬೆಳೆಗಾರ ಹಾಗೂ ಕಾರ್ಮಿಕ ವಿರೋಧಿ ನೀತಿಯಾಗಿದೆಯೆಂದು ಆರೋಪಿಸಿದರು. 1942 ರ ಕಾಫಿ ಕಾಯ್ದೆಯನ್ನು ರದ್ದುಗೊಳಿಸಿ ನೂತನ ಕಾಯ್ದೆ ಜಾರಿಗೆ ಕೇಂದ್ರ ಮುಂದಾಗಿದ್ದು, ವೆಬ್ ಸೈಟ್‍ನಲ್ಲಿ ಈ ಬಗ್ಗೆ ಮಾರ್ಚ್ 23 ರಂದು ಕರಡು ಪ್ರತಿಯನ್ನು ಪ್ರಕಟಿಸಿತ್ತು. 30 ದಿನಗಳ ಕಾಲಾವಕಾಶ ನೀಡಿದ ಸರ್ಕಾರ ಮುಂದಿನ ಬಜೆಟ್ ಅಧಿವೇಶನದಲ್ಲಿ ಕಾಯ್ದೆಯನ್ನು ಮಂಡಿಸಿ ಅಂಗೀಕಾರ ಪಡೆದು ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸುತ್ತಿದೆ.

ಇದೇ ಜು. 4 ರಂದು ಗೆಜೆಟ್‍ನಲ್ಲಿ ಒಂದು ನೋಟಿಫಿಕೇಷನ್ ಪ್ರಕಟಿಸಿ ಅದರ ಮೂಲಕ 1955 ರ ಕಾಫಿ ಕಾಯ್ದೆಗೆ ತಿದ್ದುಪಡಿಯನ್ನು ತಂದಿದೆ. ಈ ಎರಡೂ ಕ್ರಮಗಳ ಮೂಲಕ ಕಾಫಿ ಮಂಡಳಿಯಲ್ಲಿ ಕಾರ್ಮಿಕ ಸಂಘಟನೆಗಳು ಹಾಗೂ ಸಣ್ಣ ಬೆಳೆಗಾರರಿಗಿದ್ದ ಪ್ರಾತಿನಿಧ್ಯವನ್ನು ಕಡಿತಗೊಳಿಸಲಾಗಿದೆ ಎಂದು ಮಹದೇವ ಆರೋಪಿಸಿದರು.

ಮಂಡಳಿಯ ಎಲ್ಲಾ ಅಧಿಕಾರವನ್ನು ಕಾರ್ಯದರ್ಶಿಗೆ ನೀಡುವ ಮೂಲಕ ಮಂಡಳಿಯನ್ನು ಅಧಿಕಾರಿಗಳ ಹಿಡಿತಕ್ಕೆ ನೀಡಲು ಯತ್ನಿಸಲಾಗಿದೆ. ಈ ಕ್ರಮದಿಂದ ಬೆಳೆಗಾರರು ಹಾಗೂ ಕಾರ್ಮಿಕರು ಮಂಡಳಿಯ ಕಪಿ ಮುಷ್ಠಿಯಲ್ಲಿ ಸಿಲುಕ ಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಬೆಳೆಗಾರ ವಿರೋಧಿ ಕ್ರಮವನ್ನು ಸಂಘÀಟನೆ ತೀವ್ರವಾಗಿ ವಿರೋಧಿಸುವದಲ್ಲದೆ, ಸರ್ಕಾರ ನೂತನ ಕಾಯ್ದೆಯ ಪ್ರಸ್ತಾಪವನ್ನು ಕೈಬಿಡದಿದ್ದಲ್ಲಿ ಬೆಳೆಗಾರರ ಸಹಕಾರದಿಂದ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪ ಉಪಸ್ಥಿತರಿದ್ದರು.