ನಾಪೆÉÇೀಕ್ಲು, ಸೆ. 21: ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಸಂಘದ ಕಟ್ಟಡವನ್ನು ಕೆಡವಿ ಸುಮಾರು ರೂ. 85 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಆಡಳಿತ ಮಂಡಳಿಯ ತೀರ್ಮಾನಕ್ಕೆ ಸದಸ್ಯರು ಒಕ್ಕೊರಲಿನಿಂದ ಅನುಮೋದನೆ ಸೂಚಿಸಿದರು.
ನಾಪೆÇೀಕ್ಲು ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಂಘದ ಅಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು ಸಂಘದಲ್ಲಿ ಪ್ರಸ್ತುತ 2259 ಸದಸ್ಯರಿದ್ದಾರೆ. ಸದಸ್ಯರ ಪಾಲು ಬಂಡವಾಳ ರೂ. 77,17,661 ಇದೆ. ಸದಸ್ಯರಿಂದ ಮತ್ತು ವಿವಿಧ ಠೇವಣಿಗಳಿಂದ ಒಟ್ಟು ರೂ. 18.74 ಕೋಟಿ ಠೇವಣಿಯನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಸದಸ್ಯರಿಗೆ ರೂ. 16.44 ಕೋಟಿ ಸಾಲ ನೀಡಲಾಗಿದ್ದು, ಶೇ. 95 ರಷ್ಟು ಸಾಲ ವಸೂಲಾತಿಯಾಗಿದ್ದು, ಸಂಘವು ಎ. ಶ್ರೇಣಿಯನ್ನು ಕಾಯ್ದುಕೊಂಡಿದೆ ಎಂದರು. ಶೂನ್ಯ ಬಡ್ಡಿ ದರದಲ್ಲಿ ಕೃಷಿಗೆ ರೂ. 8 ಕೋಟಿ 7 ಲಕ್ಷದ 26 ಸಾವಿರ ಸಾಲ ನೀಡಲಾಗಿದ್ದು, ಶೇ 100 ವಸೂಲಾತಿಯಾಗಿದೆ. ಸದಸ್ಯರಿಗೆ ಶೇ. 12 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದರು.
ಇಲ್ಲಿಯವರೆಗೆ ಸಂಘದ ಸದಸ್ಯರಿಗೆ ರೂ. 10 ಲಕ್ಷ ವರೆಗೆ ಸಾಲದ ಮಿತಿ ಇತ್ತು. ಅದನ್ನು ರೂ. 20 ಲಕ್ಷ ಗಳಿಗೆ ಹೆಚ್ಚಿಸಲಾಗಿದೆ. ಕೃಷಿ ಸಾಲದಲ್ಲಿ ಎಕರೆಗೆ ರೂ. 50 ಸಾವಿರ ಫಸಲು ಸಾಲ, ಕೆರೆ ಸಾಲ, ಕೃಷಿ ಯಂತ್ರೋಪಕರಣ ಸಾಲ, ವಾಹನ ಸಾಲ ಅಲ್ಲದೆ, ಜಾಮೀನು ಸಾಲ, ಆಭರಣ ಸಾಲ, ಸ್ವ ಸಹಾಯ ಸಂಘಕ್ಕೆ ಮತ್ತು ಸೋಲಾರ್ಗೆ ಸಾಲವನ್ನು ನೀಡಲಾಗುವದು ಎಂದು ತಿಳಿಸಿದರು.
ಸದರಿ ಸಂಘದ ಸದಸ್ಯರಿಗೆ ಮರಣ ನಿಧಿ ರೂ. 5 ಸಾವಿರ ನೀಡಲಾಗುತ್ತಿದೆ. ಅದರಂತೆ ಸಂಘ ಮಾರಾಟ ಮಳಿಗೆಯಲ್ಲಿ ರೈತರಿಗೆ ಯಾವದೇ ರೀತಿಯ ತೊಂದರೆ ಬಾರದಂತೆ ಗೊಬ್ಬರ, ಕೃಷಿ ಉಪಕರಣ, ಮದ್ದು ಗುಂಡುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಂಘದ ಅಕ್ಕಿ ಗಿರಣಿಯನ್ನು ಆಧುನೀಕರಣ ಗೊಳಿಸಿದ್ದು, ಎಲ್ಲಾ ಸಾರ್ವಜನಿಕರು ಇದರ ಉಪಯೋಗವನ್ನು ಪಡೆದು ಕೊಳ್ಳುವಂತೆ ಅವರು ಮನವಿ ಮಾಡಿದರು. ಈಗಿರುವ ಸಂಘದ ಕಟ್ಟಡ ಹಳೆಯದಾದ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಿಸಲು ಕರಡು ನಕಾಶೆ ತಯಾರಿಸಲಾಗಿದೆ. ಇದಕ್ಕೆ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅನುಮೋದನೆ ಪಡೆಯಬೇಕಾಗಿದೆ ಎಂದು ಮಾಹಿತಿ ನೀಡಿದರು. ಸಂಘದ ಉತ್ತಮ ಕಾರ್ಯ ಚಟುವಟಿಕೆಗಾಗಿ 62 ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ `ಉತ್ತಮ ಸಹಕಾರ ಸಂಘ’ ಪ್ರಶಸ್ತಿ ಲಭಿಸಿದೆ. ಇದಕ್ಕೆ ಸಂಘದ ಎಲ್ಲಾ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಸರ್ವ ಸದಸ್ಯರ ಸಹಕಾರವೇ ಕಾರಣವಾಗಿದೆ ಎಂದು ಪ್ರಶಂಶಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ನಿರ್ದೇಶಕರಾದ ಬೋಪ್ಪೆರ ಕಾವೇರಪ್ಪ, ಕುಲ್ಲೇಟಿರ ಅರುಣ್ ಬೇಬ, ಎನ್.ಎಸ್. ಉದಯ ಶಂಕರ್, ಕಾಂಡಂಡ ಜಯ ಕರುಂಬಯ್ಯ, ಅರೆಯಡ ಅಶೋಕ್, ಹೆಚ್.ಎ. ಬೊಳ್ಳು, ಬಿದ್ದಾಟಂಡ ರಾಧ ಗಣಪತಿ, ಕೇಲೇಟೀರ ಮಾಲ ಬೋಪಯ್ಯ, ಕುಂಡ್ಯೋಳಂಡ ಕವಿತ ಮುತ್ತಣ್ಣ, ಕಾರ್ಯ ನಿರ್ವಹಣಾಧಿಕಾರಿ ಶಿವಚಾಳಿ ಯಂಡ ವಿಜು ಪೂಣಚ್ಚ, ಸಿಬ್ಬಂದಿ ಇದ್ದರು.