ವೀರಾಜಪೇಟೆ, ಜು. 14: ವೀರಾಜಪೇಟೆಯಲ್ಲಿ ಹೊಸದಾಗಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘವನ್ನು ಅಧಿಕೃತ ವಾಗಿ ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ಗೌರವ ಸಲಹೆಗಾರ ಎನ್. ದಾಮೋದರ್ ಆಚಾರ್ಯ ತಿಳಿಸಿದ್ದಾರೆ. ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದಾಮೋದರ್, ಎಂ.ಎಂ. ಶಶಿಧರ್ ನೇತೃತ್ವದ ಆಟೋ ಚಾಲಕರ ಸಂಘ ಕಳೆದ 9 ವರ್ಷಗಳಿಂದಲೂ ಸಂಘದ ನೋಂದಣಿಯನ್ನು ನವೀಕರಿಸದೆ ಅನಧಿಕೃತವಾಗಿ ಮುನ್ನಡೆಯುತ್ತಿದೆ. ಇದಕ್ಕೆ ಆಟೋ ಚಾಲಕರುಗಳ ಬೆಂಬಲವಿಲ್ಲ. ಸಂಘದ ಲೆಕ್ಕಪತ್ರ ಗಳನ್ನು ಕಾನೂನು ಬದ್ಧವಾಗಿ ದಾಖಲಿಸಿರುವದಿಲ್ಲ. ಕ್ರಿಕೆಟ್ ಪಂದ್ಯಾಟ ಆಯೋಜಿಸಿದ ಸಂದರ್ಭದ ದಾಖಲೆ ಗಳಿಲ್ಲ. ಆಟೋ ಚಾಲಕರ-ಮಾಲೀಕರ ಹಿತ ಕಾಪಾಡುವಲ್ಲಿ ಈ ಸಂಘಟನೆ ವಿಫಲಗೊಂಡಿರುವದಾಗಿ ದೂರಿದರು. ಕಳೆದ 2007ರಲ್ಲಿ ಎನ್.ಎನ್. ಶಿವು ಅಧ್ಯಕ್ಷತೆಯ ನೇತೃತ್ವದಲ್ಲಿದ್ದ ಸಂಘ ಮೀನುಪೇಟೆ ಯಲ್ಲಿ ಹಿಂದೂ ರುದ್ರಭೂಮಿಯ ಅಭಿವೃದ್ಧಿ, ಹೆಲ್ಪ್‍ಲೈನ್ ಸಂಸ್ಥೆ ಯೊಂದಿಗೆ ಕೈಜೋಡಣೆ, ಖಾಸಗಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಔಟ್ ಪೋಸ್ಟ್, ಸಾರಿಗೆ ಸಂಸ್ಥೆ ನಿಲ್ದಾಣ ದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಬಡ ರೋಗಿಗಳಿಗೆ ತುರ್ತು ರಕ್ತದಾನದ ವ್ಯವಸ್ಥೆ ಸೇರಿದಂತೆ ಅನೇಕ ಸಮಾಜ ಸೇವೆಗಳನ್ನು ಹಮ್ಮಿಕೊಳ್ಳ ಲಾಗಿತ್ತು. ಶಶಿಧರ್ ಸಂಘಟನೆ ಸಂಘದ ಕಚೇರಿ ಯನ್ನು ಅನ್ಯರಿಗೆ ವರ್ಗಾಯಿಸಿದ್ದಾರೆ. ಕಚೇರಿಯಲ್ಲಿದ್ದ ಪೀಠೋಪಕರಣಗಳನ್ನು ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರುಗಳ ಮನೆ ಸೇರಿವೆ. ಆಟೋ ಚಾಲಕರು ಮಾಲೀಕರುಗಳಿಗೆ ಯಾವದೇ ಸಮಸ್ಯೆಗಳು ಉಂಟಾದಾಗ ಇದನ್ನು ಬಗೆಹರಿಸಲು ಸಂಘಟನೆ ವಿಫಲಗೊಂಡಿದೆ. ಇಂತಹ ಸಂಘವನ್ನು ಚಾಲಕ ವರ್ಗವೇ ತಿರಸ್ಕರಿಸಿದೆ ಎಂದು ದಾಮೋದರ್ ಆರೋಪಿಸಿದರು.

ಹೊಸ ಆಟೋ ಚಾಲಕರ ಸಂಘದ ಅಧ್ಯಕ್ಷ ಎನ್.ಎನ್. ಶಿವು ಮಾತನಾಡಿ, ಸದಸ್ಯರುಗಳ ನೋಂದಣಿ ಆರಂಭಿಸಲಾಗಿದೆ. ಹಿಂದಿನಂತೆಯೇ ಈ ಸಂಘ ಎಲ್ಲ ಸಮಾಜ ಸೇವಾ ಕಾರ್ಯಗಳಿಗೆ ಮುಕ್ತವಾಗಿ ಸ್ಪಂದಿಸುತ್ತದೆ. ಆಟೋ ಚಾಲಕರ ಹಾಗೂ ಮಾಲೀಕರ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ನೇರವಾಗಿ ಸ್ಪಂದಿಸು ವದಾಗಿ ಹೇಳಿದರು. ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಜಗದೀಶ್, ಜಾನ್ಸನ್, ವಿ.ಎ. ನಾಗೇಂದ್ರ, ಮಹದೇವ, ಸಂಪತ್ ಕುಮಾರ್, ಬಿ.ಎನ್. ಮಂಜಪ್ಪ, ಟಿ.ಡಿ. ಜೀವನ್, ಮತ್ತಿತರರು ಉಪಸ್ಥಿತರಿದ್ದರು.