ಚೆಟ್ಟಳ್ಳಿ, ನ. 21: ಈ ವರ್ಷ ಮಳೆ ಕಡಿಮೆಯಾದ ಹಿನ್ನೆಲೆ ಚಿಕ್ಲಿಹೊಳೆ ಜಲಾಶಯ ನೀರಿಲ್ಲದೆ ಬರಿದಾದ ದೃಶ್ಯ ಕಂಡುಬರತೊಡಗಿದೆ.ಕೊಡಗಿನಲ್ಲಿ ಹಲವು ವರ್ಷಗಳಿಂದ ಕಂಡುಕೇಳರಿಯದ ಮಟ್ಟಿಗೆ ಮಳೆಬೀಳದೆ ತೋಡು ತೊರೆಗಳು, ನದಿಗಳೆಲ್ಲ ಈಗಾಗಲೇ ಬತ್ತಿ ಹೋಗಿ ಬರಗಾಲದ ಮುನ್ಸೂಚನೆ ನೀಡ ಹೊರಟಿದೆ.
ಸೋಮವಾರಪೇಟೆ ತಾಲೂಕಿಗೆ ಒಳಪಡುವ ಕುಶಾಲನಗರದ ಹತ್ತಿರವಿರುವ ಚಿಕ್ಲಿಹೊಳೆ ಜಲಾಶಯವು ಪ್ರತೀ ಮಳೆಗಾಲದಲ್ಲೂ ನೀರು ತುಂಬಿಕೊಂಡಿರುತ್ತಿತ್ತು. ಮಳೆಕಡಿಮೆ ಯಾದಂತೆ ನೀರಿನ ಮಟ್ಟ ಎಷ್ಟು ಕಡಿಮೆಯಾದರೂ ಜಲಾಶಯದ ಅರ್ಧ ಭಾಗದಷ್ಟು ನೀರು ಸಂಗ್ರಹವಾಗುತ್ತಿದ್ದುದು ಈ ವರ್ಷದ ಕೆಲವೇ ತಿಂಗಳಲ್ಲಿ ಮಳೆಗಾಲ ಕಳೆದಿದ್ದು ಈಗಾಗಲೇ ಜಲಾಶಯದ ನೀರಿನ ಮಟ್ಟ ತಳಭಾಗಕ್ಕೆ ತಲಪಿಯಾಗಿದೆ. ಈ ಜಲಾಶಯದಿಂದ ಸುತ್ತಲಿನ ಹೊಲಗದ್ದೆಗಳಿಗೆ ಕಾಲುವೆಯ ಮೂಲಕ ನೀರು ಹಾಯಿಸಲು ಕೂಡ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ನೀರೂರಿಸುವ ಕಾಲುವೆಗಳಲ್ಲೆಲ್ಲ ನೀರಿಲ್ಲದೆ ಕುರುಚಲು ಹುಲ್ಲು, ಕಾಡು ಬೆಳೆಯತೊಡಗಿದೆ. ಹೀಗೇ ಮುಂದುವರಿದರೆ ಜನರೆಲ್ಲ ನೀರಿಲ್ಲದೆ ಪರದಾಡುವ ಪರಿಸ್ಥಿತಿಯಾಗುವದು.
ಈ ಜಲಾಶಯದ ನೀರಿನಿಂದ ಮುಳುಗಡೆಯಾಗಿ ಹೋಗಿದ್ದ ಪುರಾತನ ಇತಿಹಾಸ ಪ್ರಸಿದ್ಧ ಈಶ್ವರ ದೇವಾಲಯವು ನೀರಿನ ಮಟ್ಟ ಕಡಿಮೆಯಾದಂತೆ ಅಲ್ಪಸ್ವಲ್ಪ ಕಾಣಬರುತಿದ್ದುದು ಈ ವರ್ಷ ನೀರು ಹೆಚ್ಚಿಗೆ ಬರಿದಾದ್ದರಿಂದ ದೇವಾಲ ಯದ ದರ್ಶನವು ಈಗಾಗಲೇ ಪೂರ್ತಿಯಾಗಿ ಕಾಣತೊಡಗಿದೆ.
-ಪುತ್ತರಿರ ಕರುಣ್ ಕಾಳಯ್ಯ,
ಪಪ್ಪುತಿಮ್ಮಯ್ಯ