ಶ್ರೀಮಂಗಲ, ಸೆ. 29: ಮನೆ ನಿವೇಶನಗಳ ಹಕ್ಕುಪತ್ರ ಪಡೆಯದ ಅರ್ಹ ಪಲಾನುಭವಿಗಳು ಅಕ್ಟೋಬರ್ 4 ರೊಳಗೆ ತಮ್ಮ ಅರ್ಜಿಗಳನ್ನು ಕಂದಾಯ ಇಲಾಖೆಗೆ ಸಲ್ಲಿಸುವಂತೆ ಟಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್ ಮಾಹಿತಿ ನೀಡಿದರು.
ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಟಿ. ಶೆಟ್ಟಿಗೇರಿ ಗ್ರಾ.ಪಂ.ನ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾ.ಪಂ. ವ್ಯಾಪ್ತಿಯಲ್ಲಿ ಅಬಿವೃದ್ಧಿ ಕಾರ್ಯಗಳಿಗೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಸಮಪಾಲು ಇದ್ದು, ಸರಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲಪಿಸಲು ಸಮನ್ವಯತೆಯಿಂದ ಸೇವೆ ಸಲ್ಲಿಸಬೇಕಾಗಿದೆ ಎಂದು ಹೇಳಿದರು.
ಟಿ. ಶೆಟ್ಟಿಗೇರಿಯ ಮಳಿಗೆಯಲ್ಲಿ ನೀರಾವರಿ ಪೈಪುಗಳು ಹಾಗೂ ಕರಿಮೆಣಸು ಕಳ್ಳತನವಾಗಿದ್ದು, ಇದುವರೆಗೂ ಕಳ್ಳರನ್ನು ಪತ್ತೆಹಚ್ಚದೆ ಇರುವ ಬಗ್ಗೆ ಪೊಲೀಸ್ ಇಲಾಖೆಯ ಮೇಲೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಮಾತನಾಡಿ, ಸ್ಥಳೀಯ ಸಮಸ್ಯೆಗಳನ್ನು ಸರಕಾರಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಅಧಿಕಾರಿಗಳ ಪಾತ್ರ ಮುಖ್ಯವಾಗಿದೆ. ಗ್ರಾ.ಪಂ. ವ್ಯಾಪ್ತಿಗೆ ಅಗತ್ಯವಾದ ಕುಡಿಯುವ ನೀರು ಸೇರಿದಂತೆ ದುರಸ್ತಿ ಪಡಿಸಬೇಕಾದ ಗ್ರಾಮೀಣ ರಸ್ತೆಗಳು ಹಾಗೂ ಆಗಬೇಕಾದ ಕಾಮಗಾರಿಗಳ ಬಗ್ಗೆ ಪಟ್ಟಿಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಬೇಕು. ಹೀಗಾದಾಗ ಮಾತ್ರ ಸರಕಾರದಿಂದ ಅನುದಾನ ಬಿಡುಗಡೆಯಾಗಲು ಸಾಧ್ಯ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸಭೆಯಲ್ಲಿ ನೋಡೆಲ್ ಅಧಿಕಾರಿಯಾಗಿ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಬಿ.ಜಿ. ಗಿರೀಶ್, ತಾ.ಪಂ. ಸದಸ್ಯೆ ಪಿ.ಟಿ. ಸರೋಜ, ಗ್ರಾ.ಪಂ. ಉಪಾಧ್ಯಕ್ಷೆ ಕೆ.ಎಸ್. ಯಶೋದ ಹಾಗೂ ಸದಸ್ಯರು ಭಾಗವಹಿಸಿದ್ದರು. ಪಿ.ಡಿ.ಓ. ಕವಿತಾ ಸ್ವಾಗತಿಸಿ, ಗ್ರಾ.ಪಂ. ಸದಸ್ಯ ಎಂ.ಯು. ಸಂದೀಪ್ ವಂದಿಸಿದರು.