ಸೋಮವಾರಪೇಟೆ, ಅ. 9: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿರ್ವಸತಿಗರಿಗೆ ನಿವೇಶನ ನೀಡುವ ಮೂಲಕ ಬಡವರ ಪರ ಕಾಳಜಿ ವಹಿಸಬೇಕೆಂದು ತಾಲೂಕಿನ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ಬ್ಯಾಡಗೊಟ್ಟ ಗ್ರಾ.ಪಂ. ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಆವರಣದಲ್ಲಿ ನಡೆಯಿತು. ಇದುವರೆಗೂ ನಿವೇಶನವನ್ನೇ ಹೊಂದಿರದೆ ತೀರಾ ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ಬಡ ಮಂದಿಗೆ ಜಾಗ ನೀಡಬೇಕೆಂದು ಮಜೀದ್ ಸೇರಿದಂತೆ ಇತರರು ಪಂಚಾಯಿತಿ ಆಡಳಿತ ಮಂಡಳಿಯನ್ನು ಒತ್ತಾಯಿಸಿದರು.
ಕ್ಯಾತೆ ಗ್ರಾಮದಲ್ಲಿ ನೂತನವಾಗಿ ಕೋಳಿ ಸಾಕಾಣಿಕಾ ಘಟಕ ಸ್ಥಾಪಿಸಲು ಸ್ಥಳೀಯ ವ್ಯಕ್ತಿಯೋರ್ವರು ಅನುಮತಿ ಕೋರಿದ್ದು, ಇದಕ್ಕೆ ಸಲ್ಲಿಕೆಯಾಗಿದ್ದ ಆಕ್ಷೇಪಣೆಯ ಬಗ್ಗೆ ಚರ್ಚೆ ನಡೆದು, ಅರ್ಜಿದಾರರಿಗೆ ಅನುಮತಿ ನೀಡಲು ತೀರ್ಮಾನಿಸಲಾಯಿತು.
ಉಳಿದಂತೆ ಸರ್ಕಾರದ ಯೋಜನೆಗಳ ಬಗ್ಗೆ ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.
ನೋಡಲ್ ಅಧಿಕಾರಿಯಾಗಿ ನಾಗೇಶ್ ಕಾರ್ಯನಿರ್ವಹಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಅಹಮ್ಮದ್, ಸದಸ್ಯರುಗಳಾದ ದಿನೇಶ್, ಹೇಮಾ, ಸಾವಿತ್ರಿ, ಗೌರಮ್ಮ, ಕೇಶವ, ರೇಣುಕ, ಷಣ್ಮುಖಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.